







ಪುತ್ತೂರು: ಈಗಾಗಲೇ ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಪಾವತಿಯಾಗುತ್ತಿದ್ದು ಮುಂದಿನ ವರ್ಷದ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು ಕೊನೇಯ ದಿನಾಂಕವೂ ಹತ್ತಿರವಾಗಿದೆ ಹೀಗಿದ್ದರೂ ಅರಿಯಡ್ಕ ಗ್ರಾಮದಲ್ಲಿ ಬಹುತೇಕ ರೈತರ ತೋಟಗಳ ಬೆಳೆ ಸಮೀಕ್ಷೆ ಇನ್ನೂ ಕೂಡ ಆಗದೇ ಇರುವುದರಿಂದ ರೈತರು ಕಂಗಲಾಗಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಬೆಳೆ ಸಮೀಕ್ಷೆಗೆ ನೇಮಕಗೊಳಿಸಿದ ಅಧಿಕಾರಿಗಳಲ್ಲಿ ವಿಚಾರಿಸಿದರೆ ಅವರು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಕ್ಭಾಲ್ ಹುಸೇನ್ ಕೌಡಿಚ್ಚಾರ್‌ರವರು ಆರೋಪಿಸಿದ್ದಾರೆ.
ಈ ವರ್ಷ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ ರೈತರಿಗೆ ಮುಂದಿನ ವರ್ಷ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾಗುತ್ತದೆ. ಬೆಳೆ ವಿಮೆ ಪ್ರೀಮಿಯಂ ಪಾವತಿಸಿ ರೈತರ ತೋಟಗಳನ್ನು ಸಮೀಕ್ಷೆ ಮಾಡಿ ವರದಿ ನೀಡಬೇಕಾಗುತ್ತದೆ. ಇದಕ್ಕಾಗಿ ಕೃಷಿ ಇಲಾಖೆ ಬೆಳೆ ಸಮೀಕ್ಷೆಗೆ ಸ್ಥಳೀಯ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಇವರುಗಳು ಆ ವ್ಯಾಪ್ತಿಯ ರೈತರ ತೋಟಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಿ ವರದಿ ನೀಡಬೇಕಾಗಿದೆ. ಆದರೆ ಅರಿಯಡ್ಕ ಗ್ರಾಮದಲ್ಲಿ ಬೆಳೆ ಸಮೀಕ್ಷೆಗೆ ನೇಮಿಸಿದ ಅಧಿಕಾರಿಗಳು ಬಹುತೇಕ ರೈತರ ತೋಟಗಳಿಗೆ ಹೋಗಿಯೇ ಇಲ್ಲ ಎಂದು ಆರೋಪಿಸಿದ ಇಕ್ಭಾಲ್ ಹುಸೇನ್ ಕೌಡಿಚ್ಚಾರ್‌ರವರು ಈ ರೀತಿಯಾಗಿ ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಅವರಿಗೆ ಮುಂದಿನ ವರ್ಷಕ್ಕೆ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಗ್ರಾಮದಲ್ಲಿ 946 ಆರ್‌ಟಿಸಿಗಳಿದ್ದು ಇದರಲ್ಲಿ ಸುಮಾರು 100 ಕ್ಕೂ ಅಧಿಕ ಆರ್‌ಟಿಸಿಗಳು ಬಾಕಿ ಇವೆ ಎಂದು ಅವರು ತಿಳಿಸಿದರು.ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಕಳೆದೆರಡು ವರ್ಷಗಳಿಂದ ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆ ಪಾವತಿಯಾಗುತ್ತಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ ಈ ನಡುವೆ ಬೆಳೆ ಸಮೀಕ್ಷೆ ಕೂಡ ಸರಿಯಾಗಿ ಮಾಡದೇ ಇದ್ದರೆ ರೈತರ ಪರಿಸ್ಥಿತಿ ಹೇಗಾಗಬಹುದು ಎಂದು ಪ್ರಶ್ನಿಸಿದ ಇಕ್ಭಾಲ್ ಹುಸೇನ್‌ರವರು ಈ ಬಗ್ಗೆ ಕೃಷಿ ಇಲಾಖೆ ಗಮನ ಹರಿಸುವಂತೆ ಕೇಳಿಕೊಂಡಿದ್ದಾರೆ.












