ಪೆರ್ನಾಜೆಯಲ್ಲಿ ಕಾಡಾನೆ ದಾಳಿಗೆ ತುತ್ತಾದ ಬೆಳೆ, ರೈತರು ಕಂಗಾಲು- ಕೆಟ್ಟುಹೋದ ಸೋಲಾರ್ ಬೇಲಿ ದುರಸ್ತಿಗೆ ಆಗ್ರಹ

0

ಪುತ್ತೂರು: ಪೆರ್ನಾಜೆ ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಅ.14ರಂದೂ ಅಶೋಕ್ ಕುಮಾರ್ ಉಂಗ್ರುಪುಳಿತ್ತಾಯ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡ, ಅಡಿಕೆ ಮರ, ತೆಂಗಿನ ಗಿಡಗಳನ್ನು ನಾಶಮಾಡಿದೆ.


ಪೆರ್ನಾಜೆ ಭಾಗದಲ್ಲಿ ದಿನಕ್ಕೊಂದು ತೋಟದಲ್ಲಿ ಕಾಡಾನೆಗಳು ದಾಳಿ ನಡೆಸಿ ಕೃಷಿ ನಾಶಪಡಿಸುತ್ತಿರುವ ಘಟನೆಗಳು ಮರುಕಳಿಸುತ್ತಿದ್ದು, ಆನೆಗಳ ಉಪಟಳದಿಂದ ಬೇಸತ್ತಿರುವ ಅಲ್ಲಿನ ನಾಗರಿಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.


ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೈರನ್ ಮೊಳಗಿಸಿ ತೆರಳುವುದು ಬಿಟ್ಟರೆ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನೆಗಳು ತೋಟಗಳಿಗೆ ನುಗ್ಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬದಲು ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂಬುದು ನಾಗರಿಕರ ಅಳಲಾಗಿದೆ.


ಕೃಷಿಯನ್ನೇ ನಂಬಿಕೊಂಡಿರುವ ರೈತರು ತಮ್ಮ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈಗಾಗಲೇ ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಆನೆಗಳ ನಿರಂತರ ದಾಳಿ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಾಡಾನೆಗಳ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸೋಲಾರ್ ಬೇಲಿ ದುರಸ್ತಿಗೆ ಆಗ್ರಹ
ಆನೆಗಳ ಹಾವಳಿ ತಡೆಯುವ ಉದ್ದೇಶದಿಂದ ಅಳವಡಿಸಲಾಗಿರುವ ಸೋಲಾರ್ ಬೇಲಿ ಕೆಟ್ಟುಹೋಗಿದ್ದರೂ, ಅದರ ಸಮರ್ಪಕ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಸ್ಥಳೀಯರ ಪ್ರಮುಖ ಆರೋಪವಾಗಿದೆ. ಸೋಲಾರ್ ಬೇಲಿ ಕಾರ್ಯನಿರ್ವಹಿಸದಿರುವುದರಿಂದ ಕಾಡಾನೆಗಳು ಸುಲಭವಾಗಿ ಕೃಷಿ ತೋಟಗಳಿಗೆ ನುಗ್ಗುತ್ತಿದ್ದು, ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಸೋಲಾರ್ ಬೇಲಿಗಳನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here