







ನೆಲ್ಯಾಡಿ: ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಒಂದು ವಾರ ನಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಅ.17ರಂದು ನಡೆಯಿತು.
ಶಿಬಿರದ ನಿರ್ದೇಶಕರೂ, ಕಾಲೇಜಿನ ಪ್ರಾಂಶುಪಾಲರೂ ಆದ ಚಂದ್ರಶೇಖರ ಕೆ. ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಶಿಬಿರಾರ್ಥಿಗಳಲ್ಲಿ ಬದಲಾವಣೆಗಳನ್ನು ಉಂಟು ಮಾಡಿದೆ. ರಾಷ್ಟ್ರೀಯತೆ , ಸಾಮಾಜಿಕ ಸಾಮರಸ್ಯ, ಸೇವೆಯ ಭಾವನೆಗಳನ್ನು ಶಿಬಿರಾರ್ಥಿಗಳಲ್ಲಿ ಬೆಳೆಸಿದ್ದು ಮಾತ್ರವಲ್ಲದೆ ಅವರ ವ್ಯಕ್ತಿತ್ವದಲ್ಲಿಯೂ ಅಭಿವೃದ್ಧಿ ಆದದ್ದನ್ನು ನಾವು ಈ ಸಂದರ್ಭದಲ್ಲಿ ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ ಸಿ.ಬಿ. ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಮೈದಾನದ ದುರಸ್ತಿ, ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಗೋಳಿತ್ತೊಟ್ಟು ಪರಿಸರದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಸಮಾಜಕ್ಕೆ ಉಪಯುಕ್ತವಾದ ಅನೇಕ ಕಾರ್ಯಗಳನ್ನು ಮಾಡಿ ಸಮಾಜ ಸ್ನೇಹಿಗಳಾಗಿದ್ದಾರೆ. ಮುಂದೆಗೂ ಇಂತಹ ಉತ್ತಮ ಕೆಲಸಗಳನ್ನ ಮಾಡಿ ಭವಿಷ್ಯದ ಸತ್ಪ್ರಜೆಗಳಾಗಿ ಮೂಡಿಬನ್ನಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಶೇಖರ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಶೇಖರ ಅಲಂಗಪ್ಪೆ, ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ಕರುಣಾಕರ ಶೆಟ್ಟಿ ಗೋಳಿತ್ತೊಟ್ಟು, ಏನೇಪೋಯ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಅನುಪ ಕೆ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಮಹೇಶ ಪಿ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಶುಭ ಹಾರೈಸಿದರು. ಶಿಬಿರದ ನಾಯಕ ಮತ್ತು ನಾಯಕಿ ಎನ್ ಎಸ್ ಎಸ್ ಧ್ವಜವನ್ನು ಮತ್ತು ಸೀಟಿಯನ್ನು ಯೋಜನಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಸಿ.ಬಿ., ಮಹೇಶ್ ಪಿ., ಮತ್ತು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ರವರನ್ನು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಗೌರವಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಕೀರ್ತನ್ ಬಿ.ಜಿ ಶಿಬಿರದ ವರದಿಯನ್ನು ಮಂಡಿಸಿದರು. ಸಹ ಶಿಬಿರಾಧಿಕಾರಿ ಲೋಹಿತ್ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಎಂ.ಕಾರ್ಯಕ್ರಮ ನಿರೂಪಿಸಿದರು. ಭವಿಷ್ಯ ಮತ್ತು ಬಳಗದವರು ಪ್ರಾರ್ಥಿಸಿದರು.












