







ನವರಾತ್ರಿ ಸಂಸ್ಕೃತಿಯನ್ನು ಉಳಿಸುವ ಅರ್ಥಪೂರ್ಣ ಕಾರ್ಯಕ್ರಮ: ವಿನಯ ಕುಮಾರ್ ಸೊರಕೆ
ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರ ಜೊತೆ ಸದಾ ಇದ್ದೇನೆ: ರಮಾನಾಥ ರೈ
ಸಂಸ್ಕೃತಿಯ ಉಳಿಸುವ ಕೆಲಸ ಮಾರ್ನೆಮಿ ಗೌಜಿಯಿಂದ ಆಗುತ್ತಿದೆ : ಅಶೋಕ್ ಕುಮಾರ್ ರೈ
ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಪ್ರಯತ್ನ ಆಗುತ್ತಿದೆ: ಅರುಣ್ ಕುಮಾರ್ ಪುತ್ತಿಲ


ಪುತ್ತೂರು: ಕಳೆದ ನಾಲ್ಕು ವರ್ಷಗಳಿಂದ ಅರ್ಥಪೂರ್ಣವಾಗಿ ಈ ಒಂದು ಮಾರ್ನೆಮಿದ ಗೌಜಿ ಕಾರ್ಯಕ್ರಮವನ್ನು ಬಾಂತಲಪ್ಪು ಜನಸೇವಾ ಸಮಿತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಡೀ ಸಮಾಜವನ್ನೇ ಕುಟುಂಬದ ರೀತಿಯಲ್ಲಿ ಒಟ್ಟು ಸೇರಿಸುವ ಸಂಸ್ಕೃತಿ ನಮ್ಮ ತುಳುನಾಡಿನ ಸಂಸ್ಕೃತಿಯಾಗಿದೆ ಇದನ್ನು ನಾವು ಇಲ್ಲಿ ಕಾಣುತ್ತಿದ್ದೇವೆ. ನವರಾತ್ರಿಯ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಈ ಮಾರ್ನೆಮಿದ ಗೌಜಿ ಕಾರ್ಯಕ್ರಮ ಅರ್ಥವತ್ತಾಗಿದೆ. ಮೈಸೂರಿನಲ್ಲಿ ಮಾತ್ರ ನಡೆಯುತ್ತಿದ್ದ ದಸರಾ ಇಂದು ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ ಅದೇ ರೀತಿ ಕುಂಬ್ರದ ಮಾರ್ನೆಮಿದ ಗೌಜಿ ಹತ್ತೂರಿಗೂ ಪಸರಿಸಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಹೇಳಿ ಶುಭ ಹಾರೈಸಿದರು.
ಅವರು ಅ.17 ರಂದು ಕುಂಬ್ರ ಜಂಕ್ಷನ್‌ನಲ್ಲಿ ಕುಂಬ್ರ ಚೆನ್ನಪ್ಪ ರೈ ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಕಾರದೊಂದಿಗೆ ನಡೆದ 4 ನೇ ವರ್ಷದ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈಯವರು, ನನಗೆ ತುಳುನಾಡಿನ ಬೊಳ್ಳಿ ಎಂಬ ಬಿರುದಿಗೆ ನಾನು ಅರ್ಹನೋ ಗೊತ್ತಿಲ್ಲ ಆದರೆ ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಹುಟ್ಟು ಆಕಸ್ಮಿಕ ಆದರೆ ಬದುಕು ಆಕಸ್ಮಿಕವಲ್ಲ ನಾವು ಹೇಗೆ ಬದುಕಬೇಕು ಎಂಬುದು ನಮಗೆಲ್ಲರಿಗೂ ತಿಳಿಸಿದೆ. ಜಾತಿ,ಧರ್ಮದ ಹಣೆಪಟ್ಟಿಗೆ ಒಳಗಾಗದೇ ಎಲ್ಲರಿಗೂ ಸಮಾನ ರೀತಿಯಲ್ಲಿ ಬದುಕಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರ ಪರವಾಗಿ ನಾನು ಅವರ ಜೊತೆ ಇದ್ದೇನೆ ಎಂದು ರಮಾನಾಥ ರೈ ಹೇಳಿದರು.




ಪ್ರಾಸ್ತಾವಿಕ ಮಾತುಗಳನ್ನಾಡಿದ ಬಾಂತಲಪ್ಪು ಜನಸೇವಾ ಸಮಿತಿಯ ಗೌರವಾಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈಯವರು, ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಭಾಗದ ಮಾರ್ನೆಮಿಯ ವೇಷಧಾರಿಗಳಿಗೆ ವೇದಿಕೆ ನಿರ್ಮಿಸಿ ಕೊಡುತ್ತಿದ್ದೇವೆ. ಪುತ್ತೂರಿನಲ್ಲಿ ಸಹಜ್ ರೈಯವರ ದೊಡ್ಡ ಪಿಲಿ ಗೊಬ್ಬು ಇದೆ ಆದರೆ ಅವರೆಲ್ಲರೂ ಮರಿ(ನಾಗರಹಾವು) ಕುಣಿಸುವಾಗ ನಾವು ಕೇರಿ(ಕೇರೆಹಾವು) ಕುಣಿಸುತ್ತೇವೆ ಆದರೆ ಎಲ್ಲರೂ ಕೂಡ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದ ದುರ್ಗಾಪ್ರಸಾದ್ ರೈಯವರು ಬೇರೆ ಬೇರೆ ಊರಿನವರು ಇಲ್ಲಿ ಬಂದು ಸೇರಿಕೊಂಡಿದ್ದಾರೆ. ಮಾರ್ನೆಮಿದ ಗೌಜಿಯೊಂದಿಗೆ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಕೂಡ ಮಾಡುತ್ತಿದ್ದೇವೆ. ಈ ವರ್ಷ ಮಾಜಿ ಸಚಿವ ರಮಾನಾಥ ರೈಯವರಿಗೆ ತುಳುನಾಡ್‌ದ ಬೊಳ್ಳಿ’ ಬಿರುದು ನೀಡಿ ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಆಶಯ ಮಾತುಗಳನ್ನಾಡುತ್ತಾ, ಕೆಲವು ಸಂದರ್ಭಗಳಲ್ಲಿ ದೊಡ್ಡ ಮಟ್ಟದ ಬಹುಮಾನ ಇದೆ ಎಂದುಕೊಂಡು ತಂಡಗಳು ಬರುತ್ತದೆ ಆದರೆ ಕುಂಬ್ರದ ಮಾರ್ನೆಮಿದ ಗೌಜಿಗೆ ತಮ್ಮ ಕಲೆಯನ್ನು ತೋರಿಸುವ ನಿಟ್ಟಿನಲ್ಲಿ ಕಲಾವಿದರು ಬರುತ್ತಾರೆ ಇದು ಈ ಮಣ್ಣಿನ ಕಲೆಯಾಗಿದೆ ಎಂದ ಹೇಮನಾಥ ಶೆಟ್ಟಿಯವರು, ಇಂದು 6 ಸಲ ಶಾಸಕರಾಗಿ 3 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕರಾದ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ಬಿರುದು ನೀಡಿ ಸನ್ಮಾನಿಸುವ ಕೆಲಸವನ್ನು ಮಾಡಿರುವ ಬಾಂತಲಪ್ಪು ಜನಸೇವಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ತೆಂಗಿನ ಕಾಯಿ ಒಡೆಯುವ ಮೂಲಕ ಗಂತ್‌ದ ಉದ್ಘಾಟನೆ ಮಾಡಿದ ರಾಮ ಪಾಟಾಜೆ ಬೆಳ್ಳಾರೆ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ನಾನು ಇದುವರೆಗೆ ಭಾಗವಹಿಸಿಲ್ಲ ಬಹಳ ಒಳ್ಳೆಯ ಕಾರ್ಯಕ್ರಮ ಇದಾಗಿದೆ ಎಂದು ಹುಲಿ ವೇಷದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಅಂಗಣ ಉದ್ಘಾಟನೆಯನ್ನು ಕುಕ್ಕುಮುಗೇರು ಶ್ರೀ ಉಳ್ಳಾಕ್ಲು ದೈವಸ್ಥಾನದ ಮೊಕ್ತೇಸರ ಅಜಲಾಡಿಬೀಡು ವಿಜಯಕುಮಾರ್ ರೈ ಮುಗೇರುರವರು ಅಂಗಣಕ್ಕೆ ಪೂವರಿ ಹಾಕುವ ಮೂಲಕ ದೈವ ದೇವರುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಉದ್ಘಾಟಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಳೆದ 2 ವರ್ಷಗಳಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ ಬಹಳ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತಿದೆ. ನವರಾತ್ರಿಯ ಈ ಸಂದರ್ಭದಲ್ಲಿ ನಮಗೆಲ್ಲರಿಗೂ ಶ್ರೀ ದೇವಿಯ ಆಶೀರ್ವಾದ ಇರಲಿ ಎಂದು ಹೇಳಿ ಶುಭ ಹಾರೈಸಿದರು.
ಪುತ್ತಿಲ ಪರಿವಾರ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಬಾಂತಲಪ್ಪು ಜನಸೇವಾ ಸಮಿತಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಲ್ಲಿ ರಾಜಕೀಯವಿಲ್ಲ ಬದಲಾಗಿದೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಪ್ರಯತ್ನ ಇಲ್ಲಿ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ, ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಮಾತನಾಡಿ, ರಮಾನಾಥ ರೈಯವರಿಗೆ ಸನ್ಮಾನಿಸಿ ಬಿರುದು ನೀಡಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಹತ್ತೂರಿಗೂ ಸಂದೇಶ ಸಾರುವ ಒಂದು ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾರವರು ಮಾತನಾಡಿ, ಗ್ರಾಮೀಣ ಭಾಗದ ಮಾರ್ನೆಮಿಯ ವೇಷಧಾರಿಗಳಿಗೆ ಅವಕಾಶ ನೀಡಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಪಾಣಾಜೆ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಪ್ರಸಾದ್ ಪಾಣಾಜೆ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಆಗುತ್ತಿದೆ ಇದಕ್ಕಾಗಿ ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಕ್ರಂಪಾಡಿ ಆಕರ್ಷಣ್ ಗ್ರೂಪ್‌ನ ಅಹಮ್ಮದ್ ಸಾದಿಕ್ ಹಾಜಿ, ಸಂಪ್ಯ ಅಕ್ಷಯ ಸಮೂಹ ಸಂಸ್ಥೆಗಳ ಸಂಚಾಲಕ ಜಯಂತ ನಡುಬೈಲ್, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ನಿವೃತ್ತ ಮುಖ್ಯಗುರು ಸುಧಾಕರ ರೈ ಕುಂಬ್ರ, ಸಿಡ್ಕೋ ನಿರ್ದೇಶಕ ಮೋಹನ್ ಕುಮಾರ್ ಬೊಳ್ಳಾಡಿ, ದರ್ಬೆತ್ತಡ್ಕ ಬ್ರಹ್ಮ ಬೈದರ್ಕಳ ಗರಡಿಯ ಮೊಕ್ತೇಸರ ಜಯರಾಮ ಪೂಜಾರಿ ಕುಕ್ಕುತ್ತಡಿ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಸೀನಿಯರ್ ಮ್ಯಾನೇಜರ್,ನಿವೃತ್ತ ಸೈನಿಕ ರಂಗನಾಥ್,ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ದರ್ಬೆತ್ತಡ್ಕ ಸಾರ್ವಜನಿಕ ಒತ್ತೆಕೋಲ ಸಮಿತಿ ಅಧ್ಯಕ್ಷ ರವೀಂದ್ರ ಮಣಿಯಾಣಿ, ಉದ್ಯಮಿ ರಾಧಾಕೃಷ್ಣ ರೈ ಬೂಡಿಯಾರ್, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಭಾಲ್ ಹುಸೇನ್ ಕೌಡಿಚ್ಚಾರ್, ತ್ಯಾಂಪಣ್ಣ ಆಳ್ವ ಕಲ್ಲಡ್ಕ, ವಾಸ್ತು ತಜ್ಞ ದಿವಾಕರ ಆಚಾರ್ಯ ಕೈಕಾರ, ಜೈಗುರುದೇವ್ ಕಂಪ್ಯೂರ‍್ಸ್ ನ ಗಿರೀಶ್ ರೈ ನೀರ್ಪಾಡಿ, ಮೇಗಿನಗುತ್ತು ಸಂತೋಷ್ ಕುಮಾರ್ ರೈ ಕುಂಬ್ರ, ಯುವ ರಾಜಕೀಯ ಮುಖಂಡ ಎಂ.ಎಂ ಸರ್ಫುದ್ಧೀನ್ ಕುಂಬ್ರ, ವಕೀಲ ಸಂದೀಪ್ ರೈ ಚಿಲ್ಮೆತ್ತಾರು, ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯದರ್ಶಿ ರಾಜ್‌ಪ್ರಕಾಶ್ ರೈ ಕುಂಬ್ರ, ಸ್ನೇಹಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕೃಷಿಕ ಸಮಾಜ ಕಡಬ ತಾಲೂಕು ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭ ಹಾರೈಸಿದರು.
ಆರಂಭದಲ್ಲಿ ವಿನಯ್ ಕುಂಬ್ರ ಗಣಪತಿ ಸ್ತುತಿ ಹಾಡಿದರು. ಹಂಸಿಕಾ ರೈ ಪ್ರಾರ್ಥಿಸಿದರು. ಬಾಂತಲಪ್ಪ ಜನಸೇವಾ ಸಮಿತಿ ಅಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ರೈ ಮುಗೇರು ಮತ್ತು ವಸಂತ ಶೆಟ್ಟಿ ಕಲ್ಲಡ್ಕರವರಿಂದ ಜುಗಲ್ ಬಂದಿ ನಿರೂಪಣೆ ನಡೆಯಿತು.ತೀರ್ಪುಗಾರರಾಗಿ ಚಂದ್ರಶೇಖರ ಸುಳ್ಯಪದವು ಮತ್ತು ಮೋಹನ ಅಜಲಾಯ ಕೆಯ್ಯೂರು ಕಣಿಯಾರು ಸಹಕರಿಸಿದ್ದರು. ಬಾಂತಲಪ್ಪು ಜನಸೇವಾ ಸಮಿತಿ ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಸಂಚಾಲಕ ಶಶಿಕಿರಣ್ ರೈ ನೂಜಿಬೈಲು, ಸಹ ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಂಘಟನಾ ಕಾರ್ಯದರ್ಶಿ ಶೀನಪ್ಪ ನಾಯ್ಕ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ಜತೆ ಕಾರ್ಯದರ್ಶಿ ಶಾರದ ಆಚಾರ್ಯ, ಸಹ ಕಾರ್ಯದರ್ಶಿ ಸುಂದರಿ ಪರ್ಪುಂಜ, ಚಿತ್ರಾ ಬಿ.ಸಿ, ಗಂತ್‌ದ ಗುರಿಕ್ಕಾರ್ ನಾರಾಯಣ ಡಿ ದರ್ಬೆತ್ತಡ್ಕ, ಅಂಗಣ ಸುಧಾರಿಕೆ ಚೆನ್ನ ಬಿಜಳ, ಹುಕ್ರಪ್ಪ ಬೊಳ್ಳಾಡಿ, ಕಾರ್ಯಕಾರಿ ಸಮಿತಿಯ ಕೆ.ಶೇಖರ ರೈ ಕುರಿಕ್ಕಾರ, ಬಶೀರ್ ಕೌಡಿಚ್ಚರ್, ಶಮಿತ್ ರೈ ಕುಂಬ್ರ, ಬದ್ರುನ್ನೀಸಾ ಪರ್ಪುಂಜ,ಹರ್ಷಿತ್ ಬೈರಮೂಲೆ, ನಾಸೀರ್ ಮುಗೇರು, ಮುನೀರ್ ಉಜಿರೋಡಿ, ಸಂಜೀವ ರೈ ಕೋಡಿಬೈಲು, ಮಾಧವ ಅಜಲಡ್ಕ, ರಜಾಕ್ ಪರ್ಪುಂಜ, ಜಗದೀಶ್ ರೈ ಅಲಂಗೂರು, ಅಶ್ರಫ್ ಶೇಖಮಲೆ, ಕುಶಾಲಪ್ಪ ಗೌಡ, ಸಂಜೀವ ರೈ, ಅಜೀಜ್ ನೀರ್ಪಾಡಿ ಮತ್ತಿತರರು ಸಹಕರಿಸಿದ್ದರು.
ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ತುಳುನಾಡ್‌ದ ಬೊಳ್ಳಿ’ ಬಿರುದು ಪ್ರದಾನ
6 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಸರಳ, ಸಜ್ಜನ ರಾಜಕಾರಣಿ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ `ತುಳುನಾಡ್‌ದ ಬೊಳ್ಳಿ’ ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಒಳಮೊಗ್ರು ಕುಕ್ಕುಮುಗೇರು ಶ್ರೀ ಉಳ್ಳಾಕ್ಲು ದೈವಸ್ಥಾನದ ಮೊಕ್ತೇಸರ ಅರಿಯಡ್ಕ ಚಿಕ್ಕಪ್ಪ ನಾೖಕ್ ರವರು ಸನ್ಮಾನ ಕಾರ್ಯ ನೆರವೇರಿಸಿದರು. ಶಾಲು,ಹಾರ,ಪೇಟಾ ತೊಡಿಸಿ ಫಲಪುಷ್ಪ,ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಒಂದೇ ವೇದಿಕೆಯಲ್ಲಿ ಒಟ್ಟಾದ ನಾಯಕರುಗಳು:
ಸಂಸ್ಕೃತಿ ಉಳಿಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಎಂಬ ಧ್ಯೇಯದೊಂದಿಎಗ ಬಾಂತಲಪ್ಪು ಜನಸೇವಾ ಸಮಿತಿ ಆಯೋಜನೆಯ ಮಾರ್ನೆಮಿದ ಗೌಜಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಬಿ. ರಮಾನಾಥ ರೈ ಸೇರಿದಂತೆ ವಿವಿಧ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ರಂಗದ ನಾಯಕರುಗಳು ಒಂದೇ ವೇದಿಕೆಯಲ್ಲಿ ಒಟ್ಟಾದ ಅಪರೂಪದ ಘಟನೆ ನಡೆಯಿತು.
51 ತಂಡಗಳು ಭಾಗಿ
ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಲ್ಲಿ ಒಟ್ಟು 51 ತಂಡಗಳು ಭಾಗವಹಿಸಿದ್ದವು ಇದರಲ್ಲಿ ಶ್ರೀ ಆದಿಮೊಗೇರ ಫ್ರೆಂಡ್ಸ್ ಬಂಬಿಲ ಪ್ರಥಮ ೨ ಮುಡಿ ಅಕ್ಕಿ, ಶ್ರೀನಿಧಿ ಟೈರ‍್ಸ್ ಕಡೆಶಿವಾಲಯ ದ್ವಿತೀಯ ಹಾಗೂ ಗೆಳೆಯರ ಬಳಗ ಕಾವು ತೃತೀಯ ಪ್ರಶಸ್ತಿ ತಲಾ 1 ಮುಡಿ ಅಕ್ಕಿ ಪಡೆದುಕೊಂಡಿತು. ಇದಲ್ಲದೆ ಭಾಗವಹಿಸಿದ ಎಲ್ಲಾ ತಂಡಗಳಿಗೂ ತಲಾ ರೂ.೨ ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಊರವರ ಹಾಗೂ ಸಮಿತಿಯವರ ಸಹಕಾರದೊಂದಿಗೆ ಈ ಮಣ್ಣಿನ ಶಕ್ತಿಗಳ ಅನುಗ್ರಹದಿಂದ ಮಾರ್ನೆಮಿದ ಗೌಜಿ 4 ನೇ ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ನವರಾತ್ರಿಯ ಸಂಸ್ಕೃತಿ ಉಳಿಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮ ತಾಲೂಕಿನಾದ್ಯಂತ ನಡೆಯಲಿ ಎಂಬ ಆಶಯದೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ. ಎ.ರಕ್ಷಿತ್ ರೈ ಮುಗೇರು, ಅಧ್ಯಕ್ಷರು ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ
…………….
ಚಿತ್ರ” ಉದ್ಘಾಟನೆ
ಬಿರುದು ಪ್ರದಾನ
ಪಿಲಿ ನಲಿಕೆ
ಪತ್ರಿಕೆ ಜಾಹೀರಾತು ಹಾಗೂ ಲೈವ್ ಇತ್ತು










