ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

0

ಎನ್.ಎಸ್.ಎಸ್. ನಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಡಾ. ಅಶ್ವಿನಿ ಶೆಟ್ಟಿ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉದ್ಘಾಟಕರಾಗಿ ಆಗಮಿಸಿದ ಯೇನಾಪೋಯ ವಿಶ್ವವಿದ್ಯಾನಿಲಯದ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕಿ, ವಿಶ್ವವಿದ್ಯಾನಿಲಯದ ಕಾರ್ಯಕ್ರಮ ವಿಸ್ತರಣೆ ಮತ್ತು ಔಟ್ ರೀಚ್ ಚಟುವಟಿಕೆಗಳ ನಿರ್ದೇಶಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜಕರಾದ ಡಾ. ಅಶ್ವಿನಿ ಎಸ್. ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೇ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆವಾಗಿದೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು. ಅದಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಭದ್ರವಾದ ಬುನಾದಿಯನ್ನು ಹಾಕುತ್ತದೆ. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನದ ಜೊತೆಗೆ ಎನ್.ಎಸ್.ಎಸ್. ನಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಎನ್.ಎಸ್.ಎಸ್. ಎಂಬುದು ಕ್ಯಾಂಪಸ್ ನಿಂದ ಸಮಾಜಕ್ಕೆ ವಿದ್ಯಾರ್ಥಿಗಳಿಗೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದ ಅವರು ಎನ್.ಎಸ್.ಎಸ್. ಕಾರ್ಯಕ್ರಮಗಳ ವಿವಿಧ ಸ್ವರೂಪಗಳನ್ನು ಹಾಗೂ ಅದರಿಂದ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಅರುಣ್ ಬಿ. ಕೆ. ಮಾತನಾಡಿ, ಸೇವೆಯ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶವೂ ಇದೇ ಆಗಬೇಕು. ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕು. ಯುವಜನತೆ ದೇಶಕ್ಕಾಗಿ ಇಂದು ಜೀವ ಸಮರ್ಪಣೆ ಮಾಡಬೇಕಿಲ್ಲ. ಸಮಾಜದ ಒಳಿತಿಗಾಗಿ ಜೀವನ ಸಮರ್ಪಣೆ ಮಾಡಿದಾಗ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತದೆ. ಕಾನೂನು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ, ಸಮಾಜಕ್ಕಾಗಿ ಸಮಯ ಕೊಡಿ ಎಂದು ಕರೆ ನೀಡಿದರು.

ಇದೇ ವೇಳೆ ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ನಡೆಸಲ್ಪಡುವ ಸೇವಾಬಿಂಬ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಕ್ಷತಾ ಎ. ಪಿ., ಕಾನೂನು ಸಹಾಯಕ ಪ್ರಾಧ್ಯಾಪಕರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿಗಳಾಗಿರುವ ಮಾಳವಿಕ ಎಚ್.ವಿ., ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕಿ ಕಾವ್ಯ, ವಿದ್ಯಾರ್ಥಿ ನಾಯಕ ರೋಶಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕಿ ರಕ್ಷಾ ಸ್ವಾಗತಿಸಿ, ಇನ್ನೊರ್ವ ವಿದ್ಯಾರ್ಥಿ ನಾಯಕಿ ಹರ್ಷಿತಾ ವಂದಿಸಿದರು. ವಿದ್ಯಾರ್ಥಿ ಶ್ರೇಯಸ್ ರೈ ಪಡ್ಡಂಬೈಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ವಕೀಲರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎನ್. ಎಸ್. ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಎನ್. ಎಸ್. ಎಸ್. ಘಟಕದ ಕಾರ್ಯ ಚಟುವಟಿಕೆಗಳ ಕುರಿತಾದ ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು.

LEAVE A REPLY

Please enter your comment!
Please enter your name here