ಸೌತಡ್ಕ: ಪರಸ್ಪರ ಹಲ್ಲೆ, ನಿಂದನೆ ಆರೋಪ -ಇತ್ತಂಡದವರಿಂದ ಪೊಲೀಸರಿಗೆ ದೂರು

0

ನೆಲ್ಯಾಡಿ; ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಅ.18ರಂದು ಬೆಳಗ್ಗೆ ಎರಡು ಗುಂಪುಗಳ ನಡುವೆ ನಡೆದ ಪರಸ್ಪರ ಹಲ್ಲೆ, ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡದವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.


ಘಟನೆಗೆ ಸಂಬಂಧಿಸಿ ಕೊಕ್ಕಡ ನಿವಾಸಿ ಕೃಷ್ಣ ಭಟ್ ಎಂಬವರು ನೀಡಿರುವ ದೂರಿನಲ್ಲಿ, ಅ.18ರಂದು ಬೆಳಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸದವರು ವ್ಯಾಪಾರ ಮಾಡುತ್ತಿದ್ದಾಗ, ಸದ್ರಿ ಅಂಗಡಿಯಲ್ಲಿ ಈ ಹಿಂದೆ ವ್ಯಾಪಾರ ನಡೆಸುತ್ತಿದ್ದ ಹರೀಶ್ ಮತ್ತು ಅವರ ಹೆಂಡತಿ, ಮಕ್ಕಳು ಹಾಗೂ ಇತರರು ಏಕಾಏಕಿ ಅಂಗಡಿಯ ಒಳಗೆ ಬಂದು ಸುಮಾರು 25,೦೦೦ ರೂ. ಮೌಲ್ಯದ ಕಟ್ಟಡ ಹಾಗೂ ಸ್ವತ್ತುಗಳನ್ನು ಹಾನಿ ಮಾಡಿ ರಾಘವ ಭಂಡಾರಿ ಮತ್ತು ಅವರ ಕೆಲಸದವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಿದ್ದಾರೆ. ಇವರ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 78/2026, ಕಲಂ: 115(2), 118(1), 324(4), 329(4), 351(2), 352 R/W 190 ಬಿ ಎನ್ ಎಸ್ -2023 ರಂತೆ ಪ್ರಕರಣ ದಾಖಲಾಗಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಶ್ಚಂದ್ರ ಎಂಬವರ ಪತ್ನಿ ಪ್ರತಿ ದೂರು ನೀಡಿದ್ದು, ಸೌತಡ್ಕ ದೇವಸ್ಥಾನದ ಬಳಿ ಅಂಗಡಿಯಲ್ಲಿ ಹರಿಶ್ಚಂದ್ರರವರು ವ್ಯಾಪಾರ ಮಾಡಿಕೊಂಡಿದ್ದಾಗ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್, ಚೇತನ್ ಎಂಬವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ, ಅಂಗಡಿಯ ಸೊತ್ತುಗಳನ್ನು ಹೊರಗೆ ಬಿಸಾಡಿ, ಹರಿಶ್ಚಂದ್ರರವರಿಗೆ, ದೂರುದಾರರಾದ ಅವರ ಪತ್ನಿಗೆ ಹಾಗೂ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 79/2026 ಕಲಂ: 329(4), 324(4), 352, 74, 118(1), 115(2), 351(2) R/W 3(5) ಬಿಎನ್‌ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here