







ಶೈಕ್ಷಣಿಕ, ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


ನರಿಮೊಗರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಳ್ಕೊಟ್ಟು ಅವರಿಗೆ ಅಭಿನಂದನೆ ಹಾಗೂ ಸಂಘದ ರೈತ ಸದಸ್ಯರ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಇತರ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಅ.21ರಂದು ಸಂಘದ ಪ್ರಧಾನ ಕಚೇರಿಯ “ರೈತ ಭವನ” ದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಳ್ಕೊಟ್ಟು ಅವರು ಉದ್ಘಾಟಿಸಲಿದ್ದಾರೆ. ನಂತರ ಸಹಕಾರಿ ಕ್ಷೇತ್ರದ ಅನುಭವ ಹಾಗೂ ಸೇವಾ ಮನೋಭಾವದ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡುವ ಮಹತ್ವದ ಕುರಿತು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಸಾಹಿತಿ ರಮೇಶ್ ಉಳಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ, ಸಮಯ ಪಾಲನೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಂಘದ ಅಧ್ಯಕ್ಷ ನವೀನ್ ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ವಿದ್ಯಾರ್ಥಿಗಳು, ಪೋಷಕರು ಸಹಿತ ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.













