ಪುತ್ತೂರು ದಸರಾ: 9ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

0

ಪುತ್ತೂರು: ಪುತ್ತೂರು ಶ್ರೀಶಾರದಾ ಭಜನಾ ಮಂದಿರದಲ್ಲಿ ನಡೆಯುವ 92ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ದಸರಾ ಕಾರ್ಯಕ್ರಮದ 9ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಅ.19ರಂದು ನಡೆಯಿತು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪಕ ಹರೀಶ್ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.


ನ್ಯಾಯವಾದಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ನಡೆಯುವ ಶಾರದಾ ಪೂಜೆ ಇತ್ತೀಚಿನ ವರ್ಷಗಳಲ್ಲಿ ಸೀತಾರಾಮ ರೈರವರ ನೆತೃತ್ವದ ತಂಡದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯುತ್ತಿದೆ. ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಮೆರವಣಿಗೆಯಲ್ಲಿ ನಮ್ಮ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಶಾರದಾಂಬೆಯ ಅನುಗ್ರಹದಿಂದ ಯಶಸ್ವಿಯಾಗಿ ನಡೆಯುತ್ತಿದ್ದು ಇದು ಎಲ್ಲರ ಯೋಗ ಎಂದು ಹೇಳಿದರು.

ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿದ್ಯಾ ಆರ್. ಗೌರಿ ಮಾತನಾಡಿ ನವರಾತ್ರಿ ಸಮಯದಲ್ಲಿ ದುರ್ಗೆ, ಲಕ್ಷ್ಮಿ, ಶಾರದಾ ಮಾತೆಯನ್ನು ಪೂಜಿಸುತ್ತೇವೆ. ಶಾರದಾ ಪೂಜೆಯ ಮಹತ್ವ ವಿಶೇಷವಾಗಿದೆ. ಇದರ ಸಾಮೂಹಿಕ ಭಕ್ತಿ ಶ್ರೇಷ್ಠವಾಗಿದೆ. ಜಾತಿ ಮತ ಮರೆತು ನಮ್ಮ ಒಳಗಿನ ಒಗ್ಗಟ್ಟು, ಸೀತಾರಾಮ ರೈರವರ ಶ್ರಮ ಅಭಿನಂದನಾರ್ಹವಾಗಿದೆ ಎಂದ ಅವರು ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿದ್ದರೂ ನಮ್ಮ ಸನಾತನ ಸಂಸ್ಕೃತಿ ಮರೆಯಬಾರದು. ವಿದ್ಯೆ, ಜ್ಞಾನ, ಸಂಸ್ಕೃತಿ ಹಾಗೂ ಒಗ್ಗಟ್ಟು ಮುಖ್ಯವಾದದ್ದು ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ|ಕೃಷ್ಣಪ್ರಸನ್ನ ಮಾತನಾಡಿ ೯೨ ವರ್ಷಗಳ ಇತಿಹಾಸದ ಶಾರದಾ ಪೂಜೆಯಲ್ಲಿ ಸಾನಿಧ್ಯ ವೃದ್ಧಿಯಾಗಿರುತ್ತದೆ. ವಿದ್ಯೆ ಮತ್ತು ಬುದ್ಧಿಗೆ ಅಧಿದೇವತೆಯಾಗಿರುವ ಹಾಗೆ ಜಯ ಪಡೆಯಲು ಕೂಡ ಸರಸ್ವತಿ ದೇವಿಯ ಅನುಗ್ರಹ ಬೇಕು. ಇತ್ತೀಚಿನ ವರ್ಷಗಳಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮುಂದೆ ಶತಮಾನೋತ್ಸವದವರೆಗೂ ಸೀತಾರಾಮ ರೈಯವರು ಮುಂದುವರೆಸಿಕೊಂಡು ಹೋಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ೯೨ ವರ್ಷಗಳ ಇತಿಹಾಸದ ಕಾರ್ಯಕ್ರಮ ಈ ರೀತಿ ನಡೆಯಲು ಶ್ರೀಮಹಾಲಿಂಗೇಶ್ವರ ದೇವರ ಮತ್ತು ಶಾರದಾಂಬೆಯ ಅನುಗ್ರಹವೇ ಕಾರಣ. ಹಿಂದುತ್ವದ ಹಾದಿಯಲ್ಲಿ ಎಲ್ಲರಿಗೂ ಮಾರ್ಗದರ್ಶಕವಾದ ಕಾರ್ಯಕ್ರಮ ಆಗಬೇಕೆಂಬುದು ನಮ್ಮ ಇಚ್ಚೆ. ಇಲ್ಲಿ ಮೂರು ಶಕ್ತಿಗಳು ಇರುವ ಜಾಗ. ಪುತ್ತೂರು ದಸರಾವನ್ನು ಎಲ್ಲರೂ ವೀಕ್ಷಣೆ ಮಾಡಬೇಕೆಂಬುದು ನಮ್ಮ ಉದ್ಧೇಶವಾಗಿದೆ ಎಂದು ಹೇಳಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಭಜನಾ ಮಂದಿರದ ಅರ್ಚಕ ತಿರುಮಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉದ್ಘಾಟನಾ ಕಾರ್ಯಕ್ರಮ ಬಳಿಕ ಗಾನಸಿರಿ ಕಲಾ ಕೇಂದ್ರದ ವತಿಯಿಂದ ಸ್ವರಸಂಗಮ ಗಾಯನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here