ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶಶಿಕುಮಾರ್ ರೈಯವರಿಗೆ ಅಭಿನಂದನೆ, ಶೈಕ್ಷಣಿಕ, ಕ್ರೀಡಾ ಸಾಧಕರಿಗೆ ಪ್ರತಿಭಾ ಪುರಸ್ಕಾರ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಅಭಿನಂದನೆ ಹಾಗೂ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅ.21ರಂದು ಸಂಘದ ಕೇಂದ್ರ ಕಚೇರಿಯ ರೈತ ಭವನದಲ್ಲಿ ನಡೆಯಿತು.


ವಿದ್ಯಾರ್ಥಿಗಳ ಶೈಕ್ಷಣಿಕ, ಕ್ರೀಡಾ ಸಾಧನೆಗೆ ಉತ್ತೇಜನ ನೀಡುವ ಮಹತ್ಕಾರ್ಯ-ಶಶಿಕುಮಾರ್ ರೈ
ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿದ ಕರ್ನಾಟಕ ರಾಜ್ಯ ಸಹಕಾರಿ ಯೂನಿಯನ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ರೈತರಿಗೆ ವಿವಿಧ ಸವಲತ್ತುಗಳನ್ನು ಒದಗಿಸುತ್ತಿರುವ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರ್ಥಿಕವಾಗಿ ಲಾಭ ಗಳಿಸುತ್ತಿದೆ. ಸದಸ್ಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸಂಘದ ಆಡಳಿತ ಮಂಡಳಿಯು ಲಾಭ ಗಳಿಸುವ ಜೊತೆಗೆ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗೆ ಉತ್ತೇಜನ ನೀಡುವ ಮಹತ್ಕಾರ್ಯವಾಗಿದೆ. ಈ ಪ್ರೇರಣೆಯು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅವಿಭಜಿತ ಜಿಲ್ಲೆಯಲ್ಲಿ ೧೭೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ನರಿಮೊಗರು ಸಂಘದಲ್ಲಿ ಗರೀಷ್ಠ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಸಂಘದ ನೂತನ ಸಭಾಂಗಣಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಧನ ಸಹಾಯ ನೀಡಿದ್ದು ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಧನ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು.


ಸಾಧನೆಗೆ ಬಡತನ ಕಾರಣವಾಗುವುದಿಲ್ಲ-ರಮೇಶ್ ಉಳಯ:
ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂಜಯನಗರ ಹಿ.ಪ್ರಾ ಶಾಲಾ ಶಿಕ್ಷಕ ರಮೇಶ್ ಉಳಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಠ ಗುರಿಯಿಟ್ಟುಕೊಳ್ಳಬೇಕು. ಅದು ಕೇವಲ ಮನಸ್ಸಿನಲ್ಲಿರದೆ ಅದನ್ನು ಕಾರ್ಯರೂಪದಲ್ಲಿಟ್ಟುಕೊಂಡು ಕಾರ್ಯ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಧನೆಗೆ ಬಡತನ ಕಾರಣವಾಗುವುದಿಲ್ಲಿ. ಸಂಕುಚಿತ ಮನೋಭಾವ ಬಿಟ್ಟು ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳ ಸಾಧನೆಯು ಶೈಕ್ಷಣಿಕತೆಗೆ ಸೀಮಿತವಾಗಿರದೆ ಜೀವನದಲ್ಲಿ ಸಾಧಿಸುವ ಸಾಧಕರಾಗಿ ಬೆಳೆಯಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಶೈಕ್ಷಣಿಕ ಮಾಹಿತಿ ಆಯೋಜಿಸಿರುವುದನ್ನು ಶ್ಲಾಘಿಸಿದರು.


ವಿಕಸಿತ ಭಾರತಕ್ಕೆ ಕೊಡುಗೆ ನೀಡಬೇಕು-ನವೀನ್ ಡಿ.:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನವೀನ್ ಡಿ. ಮಾತನಾಡಿ, ಸಂಘದ ವ್ಯಾಪ್ತಿಯ ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಳನ್ನು ಗುರುತಿಸಿ ಗೌರವಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೫ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೭೦ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ. ಅಧಿಕ ಮಕ್ಕಳಿಗೆ ಪ್ರಯೋಜನ ದೊರೆಯಬೇಕೆಂಬ ನಿಟ್ಟಿನಲ್ಲಿ ತಲಾ ೩೬ ಮಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸಂಸ್ಕಾರ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಉನ್ನತ ಉದ್ಯೋಗ ಪಡೆಯುವ ಜೊತೆಗೆ ತಾವುಗಳ ಉದ್ಯೋಗದಾತರಾಗಬೇಕು. ಆ ಮೂಲಕ ೨೦೪೭ರ ವಿಕಸಿತ ಭಾರತಕ್ಕೆ ತನ್ನ ಕೊಡುಗೆ ನೀಡಬೇಕು ಎಂದು ಹೇಳಿದರು.


75 ವಿದ್ಯಾರ್ಥಿಗಳಿಗೆ ಅಭಿನಂದನೆ:
೨೦೨೫-೨೬ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್ ಸಿಯಲ್ಲಿ ಗರಿಷ್ಟ ಅಂಕಗಳಿಸಿದ ೩೭, ಪಿಯುಸಿಯಲ್ಲಿ ಗರೀಷ್ಠ ಅಂಕ ಗಳಿಸಿದ ೩೬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳು ಸಹಿತ ಒಟ್ಟು ೭೫ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಫಲಪುಷ್ಪ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ಪವಿತ್ರ ಕೆ.ಪಿ., ನಿರ್ದೇಶಕರಾದ ದೇವಪ್ಪ ಗೌಡ ಓಲಾಡಿ, ಪ್ರವೀಣ್ ಕುಮಾರ್ ಶೆಟ್ಟಿ, ಬಾಬು ಶೆಟ್ಟಿ ವೀರಮಂಗಲ, ಶಿವಪ್ರಸಾದ್ ನಾಯ್ಕ, ದೇವಪ್ಪ ಪಜಿರೋಡಿ, ಡಿಸಿಸಿ ಬ್ಯಾಂಕ್ ವಲಯ ಪ್ರತಿನಿಧಿ ವಸಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರ್ದೇಶಕರಾದ ಜಯರಾಮ ಪೂಜಾರಿ ಒತ್ತೆಮುಂಡೂರು ಸ್ವಾಗತಿಸಿ, ವಿಶ್ಚನಾಥ ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಮಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ವಂದಿಸಿದರು. ಸಿಬ್ಬಂದಿಗಳಾದ ನಳಿನಿ ಪ್ರಾರ್ಥಿಸಿದರು. ರೇಷ್ಮಾ, ಅಶ್ವಿತಾ, ಶ್ರಾವ್ಯ ಹಾಗೂ ಮೇಘ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿ ಓದಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here