ಬೆಳೆ ವಿಮೆ ಪಾವತಿಸಿದರೂ ದೊರೆಯದ ಪರಿಹಾರ ಮೊತ್ತ-ಅ.27ರಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಗ್ರಾಮಸ್ಥರ ನಿರ್ಧಾರ

0

ನೆಲ್ಯಾಡಿ: ಬೆಳೆ ವಿಮೆ ಪಾವತಿಸಿದರೂ ಈ ತನಕ ವಿಮಾ ಪರಿಹಾರ ಮೊತ್ತ ಜಮೆಯಾಗದೇ ಇರುವುದರಿಂದ ಆತಂಕಗೊಂಡಿರುವ ನೆಲ್ಯಾಡಿ, ಕೌಕ್ರಾಡಿ, ಗೋಳಿತ್ತೊಟ್ಟು ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರು ಅ.27ರಂದು ಕಡಬ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.

ಬೆಳೆ ವಿಮೆ ಪರಿಹಾರ ಮೊತ್ತದಿಂದ ವಂಚಿತರಾದ ಗೋಳಿತ್ತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ ಗ್ರಾಮಗಳ ಗ್ರಾಮಸ್ಥರು ಅ.22ರಂದು ಸಂಜೆ ಗೋಳಿತ್ತೊಟ್ಟು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು, ಬೇರೆ ಗ್ರಾಮಗಳ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದ್ದರೂ ನೆಲ್ಯಾಡಿ, ಕೌಕ್ರಾಡಿ, ಗೋಳಿತ್ತೊಟ್ಟು ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರಿಗೆ ಪರಿಹಾರ ಮೊತ್ತ ಪಾವತಿಯಾಗದೇ ಇರುವುದಕ್ಕೆ ಮಳೆ ಮಾಪಕ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದು ಕಾರಣವಾದರೂ ಇದರ ಹಿಂದೆ ಹಾಗೂ ಉಳಿದ ಗ್ರಾಮಗಳ ರೈತರಿಗೆ ಕಡಿಮೆ ವಿಮಾ ಪರಿಹಾರ ಮೊತ್ತ ಜಮೆಯಾಗಿರುವುದರ ಹಿಂದೆ ಭ್ರಷ್ಟಾಚಾರವೂ ಅಡಗಿದೆ. ಇನ್ಸೂರೆನ್ಸ್ ಕಂಪನಿಯವರು ಅಧಿಕಾರಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾರೆ. ಆದ್ದರಿಂದ ತಪ್ಪೆಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ 1 ಹೆಕ್ಟೇರ್‌ಗೆ 1.60 ಲಕ್ಷ ರೂ.ಪರಿಹಾರ ಸಿಗಬೇಕು. 5 ವರ್ಷಗಳಿಂದ ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಕೋಟ್ಯಾಂತರ ರೂ.ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ ಕಿಶೋರ್ ಶಿರಾಡಿ, ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿನ ಮಳೆ ಮಾಪಕ ಸರಿಪಡಿಸಬೇಕು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗ್ರಾಮ ಪಂಚಾಯತ್ ನೋಟಿಸ್ ಬೋರ್ಡ್ ಗಳಲ್ಲೂ ಹಾಕಬೇಕು. ಮಳೆ ಮಾಪಕ ಈಗ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಗ್ರಾಮಸಭೆ ಕರೆದು ಚರ್ಚಿಸಬೇಕೆಂದು ಒತ್ತಾಯಿಸಿದರು.

ಬೇರೆ ಗ್ರಾಮಗಳಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾದರೂ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯ ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಗೋಳಿತ್ತೊಟ್ಟು, ಆಲಂತಾಯ, ಕೊಣಾಲು ಗ್ರಾಮಗಳ ರೈತರಿಗೆ ಈ ತನಕವೂ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾಗದೇ ಇರುವುದರ ವಿರುದ್ಧ ಹಾಗೂ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಗೆ ಒತ್ತಾಯಿಸಿ ಅ.27ರಂದು ಕಡಬ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಕುಶಾಲಪ್ಪ ಗೌಡ ಅನಿಲ, ಲೋಕಯ್ಯ ಪರವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಮಾನಂದ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಬಾಬು ಪೂಜಾರಿ ಕಿನ್ಯಡ್ಕ, ಪ್ರಸಾದ್ ಕೆ.ಪಿ.ಸುಲ್ತಾಜೆ, ಮಾಜಿ ಸದಸ್ಯ ಬಾಲಕೃಷ್ಣ ಅಲೆಕ್ಕಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಿನ್ನಪ್ಪ ಗೌಡ, ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗೋಳಿತ್ತೊಟ್ಟು ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ನಾಗೇಶ ಸಮರಗುಂಡಿ, ಪ್ರಮುಖರಾದ ದಿವ್ಯೇಶ್ ಗೌಡ ಕಲ್ಯ, ವೆಂಕಪ್ಪ ಗೌಡ ಡೆಬ್ಬೇಲಿ, ಸುರೇಶ್ ತಿರ್ಲೆ, ಪುರುಷೋತ್ತಮ ಕುದ್ಕೋಳಿ, ಸುಂದರ ಶೆಟ್ಟಿ ಪುರ, ಕೇಶವ ಗೌಡ ಕೊರಮೇರು, ರಮೇಶ ಗೌಡ ಕೊರಮೇರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here