







ಕಾವು: ಅ.22ರಂದು ಸಂಜೆ ಸುರಿದ ಭಾರೀ ಗಾಳಿ ಮಳೆಯ ಪರಿಣಾಮವಾಗಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಳದಲ್ಲಿ ರಸ್ತೆ ಬದಿಯ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಪ್ಪಳಿಸಿದ್ದು, ಸುಮಾರು 2 ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.


ಸಂಜೆ ವೇಳೆಗೆ ಸುರಿದ ಭಾರೀ ಮಳೆ ಮತ್ತು ಬೀಸಿದ ಭಾರೀ ಗಾಳಿಯ ಪರಿಣಾಮವಾಗಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಬುಡ ಸಮೇತ ಮುರಿದು ಬಿದ್ದು ರಸ್ತೆಗೆ ಅಪ್ಪಳಿಸುವ ಸಂದರ್ಭ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಸಂಪರ್ಕದ ಹೆಚ್.ಟಿ ಮತ್ತು ಎಲ್ .ಟಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.



2 ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್:
ಬೃಹತ್ ಗಾತ್ರದ ಮರವು ಸಂಪೂರ್ಣವಾಗಿ ರಸ್ತೆಗೆ ಅಪ್ಪಳಿಸಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಪುತ್ತೂರು-ಸುಳ್ಯ ಮಾರ್ಗವು ಸುಮಾರು 2 ತಾಸು ಬಂದ್ ಆಗಿ ಕಾವುನಿಂದ ಶೇಖಮಲೆಯವರೆಗೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು.
ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಸ್ಥಳೀಯರಿಂದ ತೆರವು ಕಾರ್ಯ:
ಪುತ್ತೂರು ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯ ನಾಗರಿಕರ ಸಹಾಯದಿಂದ ರಸ್ತೆಗೆ ಅಪ್ಪಳಿಸಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಪೊಲೀಸ್ ಸಿಬ್ಬಂದಿಗಳು ಸಹಕರಿಸಿದರು.
ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರಗಳು:
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯುದ್ದಕ್ಕೂ ಹಲವು ಅಪಾಯಕಾರಿ ಮರಗಳಿವೆ. ಮಳೆಗಾಲ ಸಂದರ್ಭದಲ್ಲಿ ಈ ಮರಗಳು ವಿದ್ಯುತ್ ತಂತಿ ಕಂಬ ಗಳಿಗೆ ಬಿದ್ದು ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಿನಗಳ ಅವಧಿಯಲ್ಲಿ ಈ ರಸ್ತೆಯಲ್ಲಿ 2 ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಜತೆಗೆ ವಿದ್ಯುತ್ ಲೈನ್ ರಸ್ತೆ ಬದಿಯೇ ಇರುವುದರಿಂದ ಅಪಾಯದ ಭೀತಿ ಇದೆ. ಇಂತಹ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಆಗ್ರಹ ವ್ಯಕ್ತವಾಗಿದೆ.










