







ಗ್ರಾಮ ಸಾಹಿತ್ಯ ಸಂಭ್ರಮದ ಸಮಾರೋಪ – ನಗರಸಭೆ ವ್ಯಾಪ್ತಿಯ ಬಾಲ ಸಾಹಿತಿಗಳ ಸಮಾವೇಶ
ಪುತ್ತೂರು ಸಾಹಿತ್ಯೋತ್ಸವ -2026


ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತೆಂಕಿಲ ಪುತ್ತೂರು ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ, ಅಬುಧಾಬಿ ಇವರ ಮಹಾಪೋಷಕತ್ವದಲ್ಲಿ ಪುತ್ತೂರು ಸಾಹಿತ್ಯೋತ್ಸವ -2026 ಅ.25ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.



32 ಗ್ರಾಮಗಳ ಯಶಸ್ವಿ ಪಯಣದ ಹಿನ್ನೆಲೆಯಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದ ಸಮಾರೋಪ ಮತ್ತು ನಗರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಬಾಲ ಸಾಹಿತಿಗಳ ಸಮಾವೇಶ ಕಾರ್ಯಕ್ರಮ ಒಟ್ಟಾಗಿ ಬೆಳಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4 ತನಕ ನಡೆಯಲಿದೆ. ಪತ್ರಿಕಾಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಆಶಯದೊಂದಿಗೆ ಆರಂಭಗೊಂಡ ಗ್ರಾಮ ಸಾಹಿತ್ಯ ಸಂಭ್ರಮವು ಕಳೆದ 5 ವರ್ಷಗಳಲ್ಲಿ 32 ಗ್ರಾಮಗಳ 133ಕ್ಕೂ ಅಧಿಕ ಶಾಲಾ ಕಾಲೇಜುಗಳ 5,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದೆ. ಅಲ್ಲದೆ ಗ್ರಾಮೀಣ ಮಟ್ಟದ 200ಕ್ಕೂ ಹೆಚ್ಚು ಸಾಧಕರನ್ನು ಗೌರವಿಸಲಾಗಿದೆ. ಇದೀಗ ಪುತ್ತೂರು ನಗರಸಭೆ ವ್ಯಾಪ್ತಿಯ 33 ಶಾಲೆಗಳು, 17 ಕಾಲೇಜುಗಳು ಮತ್ತು 5 ಟ್ಯುಟೋರಿಯಲ್ಗಳ ಮತ್ತು 3 ಪ್ಯಾರಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೂ ಈ ಅವಕಾಶವನ್ನು ವಿಸ್ತರಿಸಲಾಗುತ್ತಿದ್ದು, ಬಾಲ ಸಾಹಿತಿಗಳ ಸಮಾವೇಶವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 5 ವಿಶಿಷ್ಟ ಸಾಹಿತ್ಯ ಗೋಷ್ಠಿಗಳು ನಡೆಯಲಿದೆ. ವಿದ್ಯಾರ್ಥಿಗಳ ಸ್ವರಚಿತ ವಚನ ಮತ್ತು ಕಾವ್ಯಪ್ರತಿಭೆಯ ಅನಾವರಣ (ಕವನಗೋಷ್ಠಿ), ಜೀವನದಲ್ಲಿ ಪ್ರೇರಣೆಯ ಸ್ಥಾನ ಪಡೆದ ವ್ಯಕ್ತಿ/ಸಂಗತಿಯ ಕುರಿತು ಅಭಿವೃಕ್ತಿ(ನನ್ನ ಅಪ್ತಮಿತ್ರ), ಸ್ವರಚಿತ ಕಥೆಗಳ ಪ್ರಸ್ತುತಿ ಹಾಗು ಕಥೆ ಹೇಳುವ ಕಲೆಗೆ ಪ್ರೋತ್ಸಾಹ(ಕಥಾ ಗೋಷ್ಠಿ), ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಅನುಭವಗಳ ಹಂಚಿಕೆ(ನನ್ನ ಮೆಚ್ಚಿನ ಶಿಕ್ಷಕ/ಶಿಕ್ಷಕಿ), ಪ್ರವಾಸದ ಅನುಭವಗಳು, ಕಂಡ ಸ್ಥಳಗಳು, ಜನಜೀವನ ಮತ್ತು ಕಲಿತ ಪಾಠಗಳನ್ನು ಬರವಣಿಗೆ ಹಾಗು ಮಾತಿನ ಮೂಲಕ ವ್ಯಕ್ತಪಡಿಸುವ ಅವಕಾಶ(ಪ್ರವಾಸ ಕಥನ) ಕಾರ್ಯಕ್ರಮ ನಡೆಯಲಿದೆ ಎಂದ ಅವರು ಕಾರ್ಯಕ್ರಮವನ್ನು ಸಾಹಿತ್ಯ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು.
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಕಾರ್ಯಕ್ರಮ:
ಪುತ್ತೂರು ಸಾಹಿತ್ಯೋತ್ಸವದ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರು ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಸಿಗುವುದು ಕಡಿಮೆ. ಹಾಗಾಗಿ ಈ ಪರಿಕಲ್ಪಣೆಯೊಂದಿಗೆ ಬೇರೆ ಬೇರೆ ಕಡೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆ ಅಧ್ಯಕ್ಷತೆ ವಹಿಸುತ್ತಿದ್ದರು. ಈ ಪುತ್ತೂರು ಸಾಹಿತ್ಯೋತ್ಸವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿ ಜೀವನ್ ಎನ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ವಹಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಇದರ ಮುಖ್ಯಸ್ಥ ಡಾ. ಎಂ.ಮೋಹನ್ ಆಳ್ವ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸಾಧಕ ಪುರಸ್ಕಾರ:
ಪುತ್ತೂರು ಸಾಹಿತ್ಯೋತ್ಸವದಲ್ಲಿ 14 ಮಂದಿ ಸಾಧಕರನ್ನು ಮತ್ತು 2 ಸಂಘ ಸಂಸ್ಥೆಗಳಿಗೆ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಸುಲೋಚನಾ ಪಿ.ಕೆ, ಸಾಹಿತ್ಯ ಪೋಷಕರಲ್ಲಿ ಅವಿನಾಶ್ ಭಂಡಾರ್ಕರ್, ತುಳು ಲಿಪಿ ಸಾಹಿತ್ಯದಲ್ಲಿ ಅಪರ್ಣ ಕೊಡೆಂಕಿರಿ, ಸಮಾಜ ಸೇವೆಯಲ್ಲಿ ಅಬ್ದುಲ್ ರಜಾಕ್ ಬಪ್ಪಳಿಗೆ, ಚಿತ್ರಕಲೆಯಲ್ಲಿ ಪ್ರವೀಣ್ ವರ್ಣಕುಟೀರ, ಸಂಘಟನೆಯಲ್ಲಿ ಆಸ್ಕರ್ ಆನಂದ್, ಆಯುರ್ವೇದ ಕ್ಷೇತ್ರದಲ್ಲಿ ಡಾ. ಪ್ರದೀಪ್ ಕುಮಾರ್, ಉರಗ ಸಂರಕ್ಷಣೆಯಲ್ಲಿ ತೇಜಸ್, ಭರತನಾಟ್ಯ ಕ್ಷೇತ್ರದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್, ಕನ್ನಡ ವೀಕ್ಷಕ ವಿವರಣೆಯಲ್ಲಿ ಅಬ್ದುಲ್ ರಝಾಕ್ ಸಾಲ್ಮರ, ವಿಶೇಷ ಮಕ್ಕಳ ಸೇವಾ ಕ್ಷೇತ್ರದಲ್ಲಿ ತನುಜಾ ಝೇವಿಯರ್, ಕ್ರೀಯಾತ್ಮಕ ಕಲಾ ನಿರ್ದೇಶಕರಲ್ಲಿ ಬಿ.ಕೆ.ಗಣೇಶ್ ರೈ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೃಜನ್ ಊರುಬೈಲು, ಮಕ್ಕಳ ಸಾಹಿತ್ಯ, ವ್ಯಂಗ್ಯ ಚಿತ್ರ ಕಲಾ ಕ್ಷೇತ್ರದಲ್ಲಿ ನಾರಾಯಣ ರೈ ಕುಕ್ಕುವಳ್ಳಿ, ಸಂಘ ಸಂಸ್ಥೆ ವಿಭಾಗದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಮತ್ತು ರಮಣಿ ಬಾಲ ಸಮಿತಿ ಶಿವನಗರ ಪುತ್ತೂರು ಇವರಿಗೆ ಸಾಧಕ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಅವರು ತಿಳಿಸಿದರು.
ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಕಾರ್ಯಕ್ರಮ:
ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡದಲ್ಲೂ ಐಎಎಸ್ ಬರೆಯಿರಿ ಎಂಬ ಅಭಿಯಾನದಡಿ ದರ್ಶನ್ ಗರ್ತಿಕೆರೆ ಅವರಿಂದ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ ನಡೆಯಲಿದೆ. ಜೊತೆಗೆ ಸುಮಾರು 55 ಮಂದಿ ಸಾಹಿತ್ಯ ಸೇವಕರಿಗೆ ಗೌರವ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಪುತ್ತೂರು ಉಮೇಶ್ ನಾಯಕ್ ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ನ ಕೋಶಾಧ್ಯಕ್ಷರು ಮತ್ತು ಸಾಹಿತ್ಯೋತ್ಸವದ ಡಾ. ಹರ್ಷ ಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು.










