







ಶರೀಅತ್ ನಿಯಾಮಾವಳಿ ಪ್ರಕಾರ ಧರ್ಮ ಬೋಧನೆಗೆ ಒತ್ತು: ಜಿಫ್ರಿ ತಂಙಳ್


ಉಪ್ಪಿನಂಗಡಿ: ಖಾಝಿ ಸ್ವೀಕಾರ ಮಾಡುವ ಮಸೀದಿ, ಮಹಲ್‌ಗಳಿಗೆ ಅದರದ್ದೇ ಆದ ಶರೀಅತ್ ನಿಯಾಮಾವಳಿಗಳಿವೆ, ಆ ಪ್ರಕಾರ ಧರ್ಮ ಬೋಧನೆಗೆ ಒತ್ತು ಕೊಡಬೇಕು ಎಂದು ಸಮಸ್ತ ಕೇರಳ ಜಮೀಯ್ಯತ್ ಉಲಮಾ ಇದರ ಅಧ್ಯಕ್ಷ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಅ. 23ರಂದು ಉಪ್ಪಿನಂಗಡಿಯ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭದಲ್ಲಿ ಜಮಾಅತ್‌ಗಳಿಗೆ ದೃಢೀಕರಣ ಪತ್ರ ನೀಡಿ ಮಾತನಾಡಿದ ಅವರು, ಜಮಾಅತ್‌ಗಳು ಪ್ರತಿಯೊಂದು ವಿಚಾರಗಳಿಗೂ ಖಾಝಿಯನ್ನು ಅವಲಂಭಿತವಾಗುವಂತಾಗಬಾರದು. ಕೆಲವೊಂದು ಸಂದರ್ಭಗಳಲ್ಲಿ ಸ್ವಯಂ ತೀರ್ಮಾನ ತೆಗದುಕೊಳ್ಳುವುದಕ್ಕೆ ಅಸಾಧ್ಯವಾಗುವ ವಿಷಯಗಳಲ್ಲಿ ಖಾಝಿ ಮುಖೇನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಜಮಾಅತ್ ಸಮಿತಿಗಳು ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಬೇಕು ಎಂದರು.
ಬೆಳ್ತಂಗಡಿ ದಾರುಸ್ಸಲಾಂ ಸಂಸ್ಥೆಯ ಜೈನುಲ್ ಆಬಿದೀನ್ ಜಿಫ್ರಿ ತಂಙಳ್ ಮಾತನಾಡಿ, ಜಿಫ್ರಿ ತಂಙಳ್ ಅವರನ್ನು ಖಾಝಿಯಾಗಿ ಸ್ವೀಕಾರ ಮಾಡುವಂತದ್ದು ಹೆಮ್ಮೆಯ ವಿಚಾರ, ಅವರ ನಿರ್ದೇಶನಗಳಿಗೆ ನಾವುಗಳು ಬದ್ಧರಾಗಿರಬೇಕು, ಮಸೀದಿ, ಮಹಲ್‌ಗಳಲ್ಲಿ ಅಧಿಕಾರದ ವ್ಯಾಮೋಹವನ್ನು ದೂರ ಇಟ್ಟು ಧರ್ಮ ರಕ್ಷಣೆಯೊಂದೇ ನಮ್ಮ ಗುರಿ ಆಗಿರಬೇಕು ಎಂದರು.
ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುರ‍್ರಿಸ್ ಅಬ್ದುಲ್ ಸಲಾಂ ಫೈಝಿ ಮಾತನಾಡಿ, ಉಪ್ಪಿನಂಗಡಿ ಸಮಸ್ತದ ಅಗ್ರಗಣ್ಯರಾದ ಸಂಶುಲ್ ಉಲೇಮಾರವರು ಆಗಮಿಸಿ ಧರ್ಮ ಭೋದನೆ ಮಾಡಿರುವ ಪಾವನ ಕೇಂದ್ರ ಇದಾಗಿದೆ. ಇದೀಗ ನಾವುಗಳು ಜಿಫ್ರಿ ಮುತ್ತುಕೋಯ ತಂಙಳ್‌ರನ್ನು ಖಾಝಿಯಾಗಿ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕರುವೇಲ್ ಜುಮಾ ಮಸೀದಿ ಖತೀಬ್ ಅನಸ್ ತಂಙಳ್ ಮಾತನಾಡಿ, ಖಾಝಿ ಸ್ವೀಕಾರ ಮಾಡಿದ ಜಮಾಅತ್‌ನವರಿಗೆ ಇದೊಂದು ಜವಾಬ್ದಾರಿಯುತವಾದ ಸ್ಥಾನ ದೊರಕಿದಂತೆ, ಇದರ ಗೌರವವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
5 ಮಸೀದಿಯಿಂದ ಖಾಝಿ ಸ್ವೀಕಾರ:
ಸಮಾರಂಭದಲ್ಲಿ ಉಪ್ಪಿನಂಗಡಿ ರೇಂಜ್ ವ್ಯಾಪ್ತಿಯಲ್ಲಿರುವ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ, ಕರುವೇಲ್ ಬದ್ರಿಯಾ ಜುಮಾ ಮಸೀದಿ, ಅಡೆಕ್ಕಲ್ ಬದ್ರಿಯಾ ಜುಮಾ ಮಸೀದಿ, ಬೆದ್ರೋಡಿ ಜುಮಾ ಮಸೀದಿ, ಮಾಪಲ ಜುಮಾ ಮಸೀದಿ ಹೀಗೆ 5 ಮಸೀದಿಯ ಪರವಾಗಿ ಅಧ್ಯಕ್ಷರುಗಳಾದಿಯಾಗಿ ಖಾಝಿಯವರಿಂದ ದೃಢೀಕರಣ ಪತ್ರ ಸ್ವೀಕರಿಸಿದರು.ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹೆಚ್. ಯೂಸುಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಅಮೀರ್ ತಂಙಳ್ ಕಿನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.













