ಸೌದಿಯಲ್ಲಿ ಸಿಲುಕಿದ ಕನ್ನಡಿಗರ ಸುರಕ್ಷತೆಗೆ ಸರ್ಕಾರದ ಆದ್ಯತೆ: ಡಿಸಿಎಂ ಡಾ. ಜಿ. ಪರಮೇಶ್ವರ

0

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಪ್ರಸ್ತುತ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಉಮ್ರಾ ಯಾತ್ರಾರ್ಥಿಗಳ ಸುರಕ್ಷತೆಯ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ವಿಮಾನಗಳ ಹಾರಾಟದಲ್ಲಿ ವ್ಯತ್ಯಯದಿಂದ ಕರ್ನಾಟಕದಿಂದ ಉಮ್ರಾ ಯಾತ್ರೆಗೆ ತೆರಳಿರುವ ಸುಮಾರು 600 ಯಾತ್ರಾರ್ಥಿಗಳು ಸೌದಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸುರಕ್ಷತೆ ಮತ್ತು ಅಗತ್ಯ ನೆರವು ಒದಗಿಸಲು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಿಲುಕಿರುವ ಕನ್ನಡಿಗರಿಗೆ ನೆರವು ಮತ್ತು ಪ್ರಯಾಣ ವ್ಯವಸ್ಥೆ ಲಭ್ಯವಾದ ತಕ್ಷಣ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕಂದಾಯ ಇಲಾಖೆಯ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಜ್ ಇಲಾಖೆ ಮತ್ತು SEOC ಮೂಲಕ ವಿಶೇಷ ಸಹಾಯವಾಣಿ ಸಂಖ್ಯೆಗಳನ್ನು ಸಕ್ರಿಯಗೊಳಿಸಲಾಗಿದೆ.

ಸೌದಿಯಲ್ಲಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ ಜಾಗರೂಕರಾಗಿರಬೇಕು, ಸ್ಥಳೀಯ ಆಡಳಿತ ಮತ್ತು ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕು, ವೈಮಾನಿಕ ದಾಳಿ ಸಂಭವಿಸಿದಲ್ಲಿ ಸುರಕ್ಷಿತ ಕಟ್ಟಡದೊಳಗೆ ಇರಬೇಕು ಮತ್ತು ಭದ್ರತಾ ಘಟನೆಗಳ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಉಮ್ರಾ ಯಾತ್ರೆಗೆ ತೆರಳಲು ಉದ್ದೇಶಿಸಿರುವವರು ಪ್ರಸ್ತುತ ಪರಿಸ್ಥಿತಿ ಗಮನಿಸಿ ಎಚ್ಚರಿಕೆ ವಹಿಸಿ, ರಾಯಭಾರ ಕಚೇರಿ ಸೂಚನೆಗಳನ್ನು ಗಮನಿಸಿ, ವಿಮಾನಯಾನ ಸಂಸ್ಥೆಗಳಿಂದ ವೇಳಾಪಟ್ಟಿ ಖಚಿತಪಡಿಸಿಕೊಂಡು ಪ್ರಯಾಣ ಮಾಡಬೇಕು ಎಂದು ತಿಳಿಸಿದ್ದಾರೆ.

24×7 ತುರ್ತು ಸಹಾಯವಾಣಿ:
ಕರ್ನಾಟಕ ಹಜ್ ಇಲಾಖೆ: 9483503132 / 7899707775
SEOC: 1070 / 080-22253707
ಭಾರತೀಯ ರಾಯಭಾರ ಕಚೇರಿ, ರಿಯಾದ್: +966 554412016 / +966 542126784 (ವಾಟ್ಸಾಪ್: +966 536216082)
ಭಾರತೀಯ ಕಾನ್ಸುಲೇಟ್, ಜೆಡ್ಡಾ: +966 122614093 / +966 556122301 (ವಾಟ್ಸಾಪ್: +966 536209704) ಟೋಲ್ ಫ್ರೀ: 8002471234

LEAVE A REPLY

Please enter your comment!
Please enter your name here