ಮಹಾನಕ್ಷತ್ರ ಸ್ವಾತಿ ಮಳೆನೀರು ಮಹತ್ವ

0

ಸ್ವಾತಿ ಮಹಾನಕ್ಷತ್ರದಲ್ಲಿ ಸುರಿಯುವ ಮಳೆನೀರು ಸಾಧಾರಣ ನೀರಾಗಿರದೆ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಈ ವರ್ಷದ ಸ್ವಾತಿ ಮಹಾನಕ್ಷತ್ರವು, ಇದೇ ಅಕ್ಟೋಬರ್ 24 ರಿಂದ ನವೆಂಬರ್ 5ರ ವರೆಗಿದೆ. ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು, ನೀರು ನೆಲಕ್ಕೆ ಬೀಳುವ ಮೊದಲೇ, ಆಕಾಶದಿಂದ ನೇರವಾಗಿ ಬೀಳುವ ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ.


ಈ ನೀರು ಕೆಲವು ರೋಗಗಳಿಗೆ ದಿವ್ಯೌಷಧಿಯಾಗಿರುವುದು ಅನುಭವದಿಂದ ಸಾಬೀತಾಗಿದೆ. ಯಾವುದೇ ಔಷಧಿಯಿಂದ ಗುಣವಾಗದ ನನ್ನ ಕೈ ಉಗುರಿನ ದೀರ್ಘ ಕಾಲದ ನೋವು, ಸ್ವಾತಿ ನೀರಿನ ಉಪಯೋಗದಿಂದ ಸುಮಾರು ಎರಡು ತಿಂಗಳುಗಳಲ್ಲಿ ಸರಿಯಾಗಿ ಗುಣವಾಗಿದೆ. ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ.


ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಲು ಉಪಯೋಗಿಸಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಬಹುದು. ಇದನ್ನು ಹೆಪ್ಪು ಹಾಕಿ ತಯಾರಿಸಿದ ಮೊಸರು ವಿಶೇಷ ರುಚಿ ಹಾಗೂ ಸುವಾಸನೆಯನ್ನು ಹೊಂದಿರುತ್ತದೆ. ನಮ್ಮೂರಿನ ಶಾಲಾ ವಿದ್ಯಾರ್ಥಿಗಳಿಂದ ಪ್ರಯೋಗ ಶಾಲೆಯಲ್ಲಿ ಇದರ ಕುರಿತು ವಿಶೇಷವಾದ ಸಂಶೋಧನೆಯು ನಡೆಯುತ್ತಿದ್ದು, ಈ ನೀರಿನ ಹೆಪ್ಪಿನಿಂದ ಅತ್ಯುತ್ಕೃಷ್ಟ ಮೊಸರು ಪಡೆಯಬಹುದೆಂಬುದು ಸಾಬೀತಾಗಿದೆ.

ವರ್ಷಕ್ಕೊಮ್ಮೆ ರೇಶ್ಮೆ ಸೀರೆಗಳನ್ನು ಈ ಸಮಯದಲ್ಲಿ ಎಳೆ ಬಿಸಿಲಿಗೆ ಒಂದು ತಾಸು ಅಥವಾ ಮನೆಯೊಳಗೆ ನೆರಳಿನಲ್ಲಿ ನಾಲ್ಕೈದು ತಾಸು ಗಾಳಿಯಾಡಲು ಹಾಕಿದರೆ ವರ್ಷವಿಡೀ ಸೀರೆಗೆ ಕೀಟ ಬಾಧೆ ಇರುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ನೆಟ್ಟ ಗಿಡಗಳು ಚೆನ್ನಾಗಿ ಬದುಕಿದ ನಿದರ್ಶನವಿದೆ. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ. ಈ ನೀರು ಪುಟ್ಟ ಮಗುವಿಗೆ ತಾಯಿಯ ಎದೆ ಹಾಲಿನಷ್ಟೇ ಆರೋಗ್ಯಕರವೆಂದು ಹಿರಿಯರು ಹೇಳುತ್ತಿದ್ದರು.


ಹಲವು ಮಂದಿ ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ, ಚಿಕ್ಕಂದಿನಲ್ಲಿಅವರಿಗೆ ಸ್ವತ: ಚರ್ಮ ಸುಟ್ಟಿರುವ ಸಂದರ್ಭದಲ್ಲಿ ಬೇರೆ ಔಷಧಿಗಳ ಜೊತೆಗೆ ಈ ಸ್ವಾತಿ ನೀರನ್ನು ಬಳಸಿ, ಇದರಿಂದ ಸುಟ್ಟಗಾಯವು ಬಹುತೇಕ ಮಾಯವಾಗಿರುವ ಬಗ್ಗೆ ಮಾಹಿತಿಯು ಅವರ ಹೆತ್ತವರಿಂದ ಲಭಿಸಿದ ಕುರಿತು ತಿಳಿಸಿದರು. ಕೆಲವರು ಈ ನೀರನ್ನು ಹೆಪ್ಪು ಹಾಕಿ ತಯಾರಿಸಿದ ರುಚಿಕರವಾದ ಮೊಸರಿನ ಕುರಿತು ಪ್ರಾಸ್ತಾಪಿಸಿದರು.
ನಮಗೆ ತಿಳಿದ ಹಾಗೂ ತಿಳಿಯದ ಅತ್ಯದ್ಭುತ ಔಷಧೀಯ ಗುಣ ಹೊಂದಿದ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತು ಇದರ ಸದುಪಯೋಗವನ್ನು ನಾವೆಲ್ಲರೂ ಪಡೆಯೋಣ.
ಶಂಕರಿ ಶರ್ಮ, ಪುತ್ತೂರು

LEAVE A REPLY

Please enter your comment!
Please enter your name here