







ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ವತಿಯಿಂದ ಮುಳಿಯ-ದಂಬೆ ಶಾಖೆಯ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಅ.25ರಂದು ಮಾತೃ ವಂದನಾ, ಮಾತೃ ಧ್ಯಾನ ಹಾಗೂ ಮಾತೃ ಭೋಜನ ಕಾರ್ಯಕ್ರಮ ನಡೆಯಿತು.



ದುರ್ಗಾಪರಮೇಶ್ವರಿ ಶಾಖೆ ಅಡ್ಯನಡ್ಕದ ಶಿಕ್ಷಕಿ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹ ಸಂಚಾಲಕಿ (ಮಾತೆಯರ ವಿಭಾಗ) ಮಾಧುರಿ ಮುಖ್ಯ ಮಾತುಗಾರರಾಗಿ ಭಾಗವಹಿಸಿ, ಮಾತೃ ಧ್ಯಾನ ನಡೆಸಿಕೊಟ್ಟರು. ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಸ್ಕಾರವನ್ನು ಜೀವನದುದ್ದಕ್ಕೂ ಸ್ಮರಿಸಬೇಕು. ಮಾತೃ-ಪಿತೃ ಭಕ್ತಿಯಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಬೊಳಂತಿಮೊಗರು ಶಾಖೆಯ ಶಿಕ್ಷಕಿ ಲತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.



ಕಾರ್ಯಕ್ರಮದಲ್ಲಿ ಸುಮಾರು 300 ಮಂದಿ ಯೋಗಪಟುಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಯೋಗಪಟುಗಳು ತಮ್ಮ ಮನೆಗಳಿಂದ ಸಾತ್ವಿಕ ಆಹಾರ ತಂದು ಪರಸ್ಪರ ಹಂಚಿಕೊಂಡು ಮಾತೃ ಭೋಜನ ಆಚರಿಸಿದರು.
ತುಳಸಿ, ಆನಂದ, ಸುಗುಣ ಸುರೇಶ, ಗೀತಾ ವಿನೋದ, ರಾಮ ಅಣ್ಣ, ಮೋಹನದಾಸ, ಹರೀಶ್ ಮತ್ತಿತರರು ಯೋಗದಿಂದ ಆದ ಅನುಭವ ಹಂಚಿಕೊಂಡರು. ವಿಟ್ಲ ನಗರದ ಎಲ್ಲಾ ಶಾಖೆಗಳ ಯೋಗ ಬಂಧುಗಳು, ನಗರ ಪ್ರಮುಖರು, ಬೆಳ್ತಂಗಡಿ ಶಾಖೆಯ ಯೋಗ ಬಂಧುಗಳು, ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು.

ಸುಧಾ ನಿರೂಪಿಸಿದರು. ವಂಶಿ ಪ್ರಾರ್ಥಿಸಿದರು. ಜಯಲಕ್ಷ್ಮಿ ಸ್ವಾಗತಿಸಿದರು. ಹರಿಣಾಕ್ಷಿ 48 ದಿನಗಳ ವರದಿ ವಾಚಿಸಿದರು. ಸೌಮ್ಯ ವಂದಿಸಿದರು.










