







ಪುತ್ತೂರು: ಸಾಹಿತ್ಯ, ಮಾಧ್ಯಮ, ಕನ್ನಡದ ಛಂದಸ್ಸು, ಯಕ್ಷಗಾನ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕನ್ನಡದ ಮೂವರು ಸಾಧಕರಿಗೆ ಶ್ರೀ ಮಹಾಬಲ ಶೋಧ ಸಂಸ್ಥಾನಂ ವತಿಯಿಂದ ಡಾ. ಮಹಾಬಲ ಹೆಗಡೆ ಅವರ ಸ್ಮರಣೆಯಲ್ಲಿ ನೀಡಲಾಗುವ ಮೂರು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.


ಕನ್ನಡಪ್ರಭ ಪತ್ರಿಕೆಯ ಸಂಪಾದಕ ಗಿರೀಶ್ ರಾವ್ ಹತ್ವಾರ್ ಅವರಿಗೆ ಅಕ್ಷರ ಮಹಾಬಲ ಪ್ರಶಸ್ತಿ ಘೋಷಿಸಲಾಗಿದ್ದು ವಿದ್ವಾಂಸ, ಸಾಹಿತಿ, ಸಂಶೋಧಕ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಛಂದಸ್ಸು ಮಹಾಬಲ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ರಂಗ ಮಹಾಬಲ ಪ್ರಶಸ್ತಿ ಪ್ರಕಟಿಸಲಾಗಿದೆ. ಡಿ.25ರಂದು ಗೋಕರ್ಣದ ಅಶೋಕೆಯಲ್ಲಿ ಶ್ರೀರಾಮ ಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.



ಜೋಗಿ ಪರಿಚಯ:
ಕನ್ನಡಪ್ರಭ ದಿನ ಪತ್ರಿಕೆಯ ಸಂಪಾದಕರಾಗಿರುವ ಗಿರೀಶ್ ರಾವ್ ಹತ್ವಾರ್ ಅವರು ಜೋಗಿ ಎಂದೇ ಖ್ಯಾತರಾಗಿದ್ದಾರೆ. ಪ್ರಸಿದ್ಧ ಸಾಹಿತಿ, ಬರಹಗಾರ, ವಿಮರ್ಶಕ, ಅಂಕಣಕಾರ ಮತ್ತು ಹಿರಿಯ ಪತ್ರಕರ್ತರಾಗಿರುವ ಗಿರೀಶ್ ರಾವ್ ಹತ್ವಾರ್ ಅವರು ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಮನೆತನಕ್ಕೆ ಸೇರಿದವರು. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಮತ್ತು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ವಿದ್ಯಾಭ್ಯಾಸ ಪಡೆದ ಜೋಗಿ ಅವರು 18ನೇ ವಯಸ್ಸಿಗೆ ಬರಹ ಆರಂಭಿಸಿದ್ದರು. ಬಿ.ಕಾಂ. ಪದವೀಧರರಾದ ಇವರು 1989ರಲ್ಲಿ ಬೆಂಗಳೂರಿಗೆ ಕಾಲಿಟ್ಟರಲ್ಲದೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಓದುಗರಿಗೆ ಪರಿಚಿತರಾದರು. ಕನ್ನಡಪ್ರಭ ಪತ್ರಿಕೆಗೆ ‘ಬಾಲಿವುಡ್ ಗಾಸಿಪ್’ ಎಂಬ ಅಂಕಣ ಬರೆಯುತ್ತಿದ್ದ ಜೋಗಿ ಅವರ ‘ಹಾಯ್ ಬೆಂಗಳೂರು’ ಪತ್ರಿಕೆಯ ರವಿ ಕಾಣದ್ದು ಅಂಕಣ ಹೆಸರುವಾಸಿಯಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಜೋಗಿ ಅವರು ‘ಅಚ್ಚರಿ’ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಚಲನಚಿತ್ರ, ಪುಸ್ತಕಗಳ ವಿಮರ್ಶೆಗಳಿಂದ ಗಮನ ಸೆಳೆದ ಜೋಗಿ ಜೊತೆಗೆ ಕಥೆಗಾರನಾಗಿಯೂ ಹೊರ ಹೊಮ್ಮಿದವರು. ಕ್ರಮೇಣ ಕಾದಂಬರಿಗಳ ರಚನೆಯಲ್ಲೂ ತೊಡಗಿಸಿಕೊಂಡರು. ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೆ ಜೋಗಿ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ, ಶೀರ್ಷಿಕೆ ಗೀತೆಗಳನ್ನು ಕೂಡಾ ಬರೆದಿದ್ದಾರೆ. ಇವರದ್ದೇ ಕಥೆ ‘ಕಾಡ ಬೆಳದಿಂಗಳು’ ಚಲನಚಿತ್ರವಾಗಿದ್ದು ಈ ಕಥೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ. ಪತ್ರಿಕೋದ್ಯಮದ ಸಾಧನೆಗಾಗಿ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ. ‘ನದಿಯ ನೆನಪಿನ ಹಂಗು’, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾ ಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಸಲಾಂ ಬೆಂಗಳೂರು ಸೇರಿದಂತೆ ಹಲವು ಕಾದಂಬರಿಗಳನ್ನು ಇವರು ಬರೆದಿದ್ದಾರೆ. ಸೀಳು ನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕಥೆಗಳು, ನಾಳೆ ಮುಂತಾದವು ಇವರ ಕಥಾ ಸಂಕಲನಗಳಾಗಿವೆ. ಬಾಲಿವುಡ್ ಗಾಸಿಪ್, ರವಿ ಕಾಣದ್ದು, ಜಾನಕಿ ಕಾಲಂ-1, ಜಾನಕಿ ಕಾಲಂ-2, ಜೋಗಿ ಮನೆ, ಜೋಗಿ ಕಾಲಂ, ಸೀಕ್ರೇಟ್ ಡೈರಿ, ಮಹಾನಗರ ಮುಂತಾದವುಗಳು ಇವರ ಅಂಕಣ ಸಾಹಿತ್ಯಗಳಾಗಿವೆ. ಕಥೆಗಾರ, ಕಾದಂಬರಿಗಾರ, ಅಂಕಣ, ವಿಮರ್ಶೆ, ಸಾಹಿತ್ಯಗಾರನಾಗಿ ಗುರುತಿಸಿಕೊಂಡಿರುವ ಜೋಗಿ ಮಾತುಗಾರಿಕೆಯ ಕಲೆಯನ್ನೂ ಮೈಗೂಡಿಸಿಕೊಂಡವರು. ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿದ್ದ ಜೋಗಿ ಇತ್ತೀಚೆಗೆ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿ ಪದೋನ್ನತಿ ಪಡೆದಿದ್ದಾರೆ. ಹಿರಿಯ ಪತ್ರಕರ್ತ ವೈ.ಎನ್ಕೆ. ಅವರ ಶಿಷ್ಯರಾಗಿರುವ ಜೋಗಿ ಇದುವರೆಗೆ 108 ಪುಸ್ತಕಗಳನ್ನು ಬರೆದಿದ್ದಾರೆ. ಶ್ರೀಧರ ರಾವ್ ಮತ್ತು ಶಾರದಾ ರಾವ್ ದಂಪತಿಯ ಪುತ್ರರಾದ ಜೋಗಿ ಅವರು ಪತ್ನಿ ಜ್ಯೋತಿ ಮತ್ತು ಪುತ್ರಿ ಖುಷಿ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ.










