ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ಸೂರ್ಯನಾಥ ಆಳ್ವ,ಪ್ರ.ಕಾರ್ಯದರ್ಶಿ: ಮನೋಜ್ ಟಿ.ವಿ,ಕೋಶಾಧಿಕಾರಿ: ಮುಹಮ್ಮದ್ ನೌಶಾದ್

ಪುತ್ತೂರು:ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್ ನಲ್ಲಿ ಕಳೆದ 46 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಪೂರ್ವಾಧ್ಯಕ್ಷ ಸುರೇಂದ್ರ ಕಿಣಿರವರ ನೇತೃತ್ವದಲ್ಲಿ ಜರಗಿತು.

ನೂತನ ಅಧ್ಯಕ್ಷರಾಗಿ ಪದ್ಮ ಟ್ರೇಡರ್ಸ್ ನ ಮಿತ್ತಳಿಕೆ ಸೂರ್ಯನಾಥ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ದರ್ಬೆ ಸುದರ್ಶನ್ ಎಂಟರ್ಪ್ರೈಸ್ ನ ಮನೋಜ್ ಟಿ.ವಿ, ಕೋಶಾಧಿಕಾರಿಯಾಗಿ ಬೊಳ್ವಾರು ಅಮನ್ ಟ್ರೇಡರ್ಸ್ ನ ಮುಹಮ್ಮದ್ ನೌಶಾದ್ ಹಾಜಿ, ಉಪಾಧ್ಯಕ್ಷರುಗಳಾಗಿ ಎಪಿಎಂಸಿ ಫಾಹೀದ ಟ್ರೇಡರ್ಸ್ ನ ಉಮ್ಮರ್ ಫಾರೂಕ್ ಹಾಗೂ ವಿನ್ನರ್ ಸಾಪ್ಟ್ ಡ್ರಿಂಕ್ಸ್ ನ ರಮೇಶ್ ಪ್ರಭು, ಕಾರ್ಯದರ್ಶಿಗಳಾಗಿ ಮಾರ್ಕ್ ಟೆಲಿಕಾಂನ ಶಶಿರಾಜ್ ರೈ ಹಾಗೂ ದರ್ಬೆ ಪುತ್ತೂರು ಟ್ರೇಡರ್ಸ್ ನ ಇಸುಬು ಕೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ದರ್ಬೆ ಗಣೇಶ್ ಟ್ರೇಡರ್ಸ್ ನ ನರಸಿಂಹ ಪೈ, ಅನೀಶ್ ಎಲೆಕ್ಟ್ರಿಕಲ್ಸ್ ನ ಮುರಳೀ ಎಚ್, ಪ್ರೀಮಾ ಮೆಟಲ್ ಮಾರ್ಟ್ ನ ಲ್ಯಾನ್ಸಿ ಮಸ್ಕರೇನ್ಹಸ್, ರಿಯಲ್ ಎಸ್ಟೇಟ್ ಉದ್ಯಮಿ ಸದಾನಂದ ಕೆ, ಸೇಡಿಯಾಪು ಕೋಸ್ಟಲ್ ಕೋಕನಟ್ ನ ಡೆನ್ನಿಸ್ ಮಸ್ಕರೇನ್ಹಸ್, ಉದ್ಯಮಿ ಶಿವಪ್ರಸಾದ್ ಶೆಟ್ಟಿ, ಎಪಿಎಂಸಿ ಅಪೂರ್ವ ಟ್ರೇಡರ್ಸ್ ನ ಜಯಕುಮಾರ್ ರೈ ಎಂ.ಆರ್, ವಿದ್ಯಾಮಾತಾ ಅಕಾಡೆಮಿಯ ಭಾಗ್ಯೇಶ್ ರೈ, ಲಹರಿ ಡ್ರೈಫ್ರುಟ್ಸ್ ನ ಕುಸುಮಾಧರ್ ಎಸ್.ಕೆ, ಏಳ್ಮುಡಿ ಶ್ರೀದುರ್ಗಾ ಎಂಟರ್ಪ್ರೈಸ್ ನ ವೆಂಕಟ್ರಾಜ್ ಪಿ.ಜಿ, ಪ್ರಸನ್ನ ಪ್ರೆಸ್ ನ ಗುರುರಾಜ್, ಲುಶ್ ಫ್ಯಾಷನ್ ನ ಮಾಲಿನಿ ಎಸ್.ಕಶ್ಯಪ್ ರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಿತ್ತಳಿಕೆ ಸೂರ್ಯನಾಥ ಆಳ್ವರವರು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿಯಾಗಿದ್ದು, ತನ್ನ ವೃತ್ತಿಯನ್ನು ವಿದ್ಯುತ್ ಉಪಕರಣಗಳ ಮಾರಾಟ ಹಾಗೂ ವಿತರಣಾ ಗುತ್ತಿಗೆದಾರರಾಗಿ 1987 ರಿಂದ ಪುತ್ತೂರಿನಲ್ಲಿ ಪದ್ಮ ಟ್ರೇಡರ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ತನ್ನ ಹುಟ್ಟೂರಾದ ಅಳಿಕೆಯಲ್ಲಿ 1991 ರಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿ ಅದರ ಅಧ್ಯಕ್ಷರಾಗಿ ಕಳೆದ 36 ವರ್ಷಗಳಿಂದ ವಿಶ್ರಂಭಣೆಯಿಂದ ನಡೆಸುತ್ತಿದ್ದಾರೆ. ಅಳಿಕೆ ಗ್ರಾಮದ ದೇವಸ್ಥಾನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾರ್ವಜನಿಕ ಸೇವೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾಗಿ, ನರೇಂದ್ರ ಪಿಯು ಕಾಲೇಜಿನ ಆಡಳಿತ ಸಮಿತಿಯ ಸದಸ್ಯರಾಗಿದ್ದಾರೆ. ರೋಟರಿ ಕ್ಲಬ್‌ ಪುತ್ತೂರು ಈಸ್ಟ್ ಅಧ್ಯಕ್ಷರಾಗಿಯೂ, ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1992 ರಿಂದ ಪುತ್ತೂರು ಚೇಂಬರ್ ಆಫ್ ಕಾಮರ್ಸ್ ನ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಪ್ರಸ್ತುತ ಎಪಿಎಂಸಿ ರಸ್ತೆಯ ಮಿತ್ತಳಿಕೆ ಏಜೆನ್ಸೀಸ್ ಎಂಬ ಸ್ವಂತ ಕಟ್ಟಡದಲ್ಲಿ ವೃತ್ತಿಯನ್ನು ನಡೆಸುತ್ತಿದ್ದಾರೆ.

ಪ್ರಧಾನ ಕಾರ್ಯದರ್ಶಿ ಪರಿಚಯ:
ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಮನೋಜ್ ಟಿ.ವಿರವರು 2001ರಲ್ಲಿ ಪುತ್ತೂರಿನ ದರ್ಬೆಯಲ್ಲಿ ತಮ್ಮ ಸ್ವಂತ ಕಟ್ಟಡದಲ್ಲಿ ಹಾರ್ಡ್‌ವೇರ್, ಏಷ್ಯನ್ ಪೇಂಟ್ಸ್, ಸ್ಯಾನಿಟರಿ ವೇರ್ ಹಾಗೂ ಪೈಪ್ ಫಿಟ್ಟಿಂಗ್ಸ್ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕಾಗಿ ಮೆ|ಸುದರ್ಶನ್ ಎಂಟರ್ಪ್ರೈಸ್ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ 2015ರಲ್ಲಿ ಏಷ್ಯನ್ ಪೇಂಟ್ಸ್‌ನ ವಿಶೇಷ ಶೋರೂಮ್ ಆಗಿರುವ ಸುದರ್ಶನ್ ಕಲರ್ಸ್ ಎಂಬ ಸಹೋದರ ಸಂಸ್ಥೆಯನ್ನು ಆರಂಭಿಸಿ ವ್ಯಾಪಾರವನ್ನು ವಿಸ್ತರಿಸಿದರು. ಇದರೊಂದಿಗೆ ತಂದೆ ದಿ. ಗೋವಿಂದ ಮೇಸ್ತ್ರಿಯವರು ನಡೆಸಿಕೊಂಡು ಬಂದಿದ್ದ ಸಿವಿಲ್ ಗುತ್ತಿಗೆ ಕಾಮಗಾರಿಗಳನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಜೀವ ಸದಸ್ಯರಾಗಿರುವ ಮನೋಜ್ ಅವರು ಈ ಹಿಂದೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರಲ್ಲೂ ವಿವಿಧ ಹುದ್ದೆಗಳನ್ನು ನಿಭಾಯಿಸಿರುತ್ತಾರೆ.

ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಬೊಳ್ವಾರು ಅಮಾನ್ ಟ್ರೇಡರ್ಸ್ ಪಾಲುದಾರ ಮುಹಮ್ಮದ್ ನೌಶಾದ್ ಹಾಜಿ ಬೊಳ್ವಾರುರವರು ಧಾರ್ಮಿಕ ಕ್ಷೇತ್ರದಲ್ಲಿ ಅಧ್ಯಕ್ಷರಾಗಿ, ಸಾಮಾಜಿಕ, ಕ್ರೀಡಾ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯಾಗಿ ಸೇವೆ,
ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಅಗತ್ಯ ಔಷಧಗಳ ಒದಗಿಸುವಿಕೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರಗಳ ಆಯೋಜನೆ, ಕ್ರೀಡಾ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ನೌಶಾದ್ ಹಾಜಿ ಅವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಫುಟ್ಬಾಲ್ ಹಾಗೂ ವಾಲಿಬಾಲ್ ಕ್ರೀಡೆಗಳಲ್ಲಿಯೂ ಉತ್ತಮ ಆಟಗಾರರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಜೀವ ಸದಸ್ಯರಾಗಿರುವ ಇವರು ಹಲವು ಬಾರಿ ಸಂಘದ ಕಾರ್ಯದರ್ಶಿಯಾಗಿ ಹಾಗೂ ಕ್ರೀಡಾ ಸಂಯೋಜಕರಾಗಿ ಜವಾಬ್ದಾರಿ ನಿರ್ವಹಿಸಿರುತ್ತಾರೆ.

LEAVE A REPLY

Please enter your comment!
Please enter your name here