







ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಮತ್ತು ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯ ಆಶ್ರಯದಲ್ಲಿ 71ನೇ ಕನ್ನಡ ರಾಜ್ಯೋತ್ಸವ ನ.1ರಂದು ಪೂರ್ವಾಹ್ನ 9.30ಕ್ಕೆ ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಸಾಪ ಕಡಬ ತಾಲೂಕು ಅಧ್ಯಕ್ಷರಾದ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ನಾಗಪ್ಪ ಗೌಡ ಮರುವಂತಿಲ ಅವರಿಗೆ ಸನ್ಮಾನ ನಡೆಯಲಿದೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಆಲಂಕಾರು ಜಿಲ್ಲಾ ಬೋರ್ಡ್ ಶಾಲೆಯಲ್ಲಿ, ಆರನೇ ತರಗತಿಯಿಂದ ಎಸ್.ಎಸ್.ಎಲ್.ಸಿವರೆಗಿನ ಶಿಕ್ಷಣವನ್ನು ರಾಮಕುಂಜೇಶ್ವರ ಓರಿಯಂಟಲ್ ಪ್ರೌಢ ಶಾಲೆಯಲ್ಲಿ ಪಡೆದು ಶಿಕ್ಷಕ ವೃತ್ತಿಯ ಮೇಲಿನ ಆಸಕ್ತಿಯಿಂದ ಉಜಿರೆಯಲ್ಲಿ ಶಿಕ್ಷಕರ ತರಬೇತಿ ಪಡೆದು, 1963ರ ನ.1 ರಂದು ನೂಜಿಬಾಳ್ತಿಲ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಪುತ್ತಿಗೆ, ಕುಂತೂರು, ಇಡಾಳ ಹಾಗೂ ಪೆರಾಬೆ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿ ಕುಟ್ರುಪ್ಪಾಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಸುಮಾರು 36 ವರ್ಷಗಳ ಸಾರ್ಥಕ ಸೇವೆಯ ಬಳಿಕ 1999ರ ಏ.30ರಂದು ನಿವೃತ್ತರಾದರು. ಇವರು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದಷ್ಟೇ ಅಲ್ಲದೆ, ತಮ್ಮ ಬದುಕಿನ ಮೂಲಕ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ತೋರಿಸಿಕೊಟ್ಟವರು. ಶರವೂರು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ನಿವೃತ್ತ ಸರ್ಕಾರಿ ನೌಕರರ ಸಂಘದ ನಾಮ ನಿರ್ದೇಶಕರಾಗಿ, ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶಿಕ್ಷಕ ವೃತ್ತಿ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.
ಈ ಸಮಾರಂಭದಲ್ಲಿ ಕಸಾಪ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ರಾಮಕುಂಜ ಆ.ಮಾ.ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗೌಡ ಸಾನಿಧ್ಯ ವಳೆಂಜ ಉಪಸ್ಥಿತಿ ಇರಲಿದ್ದಾರೆ ಎಂದು ಕಸಾಪ ಕಡಬ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಕಿಶೋರ್ಕುಮಾರ್ ಬಿ.ತಿಳಿಸಿದ್ದಾರೆ.












