ಉಜಿರೆ: ನಮ್ಮ ದೇಶದ ಸಂವಿಧಾನ ಜಗತ್ತಿನ ಶ್ರೇಷ್ಠವಾದ ಸಂವಿಧಾನ ಎಂದು ಪ್ರತಿಯೊಬ್ಬ ಪ್ರಜೆಯೂ ಕಂಡುಕೊಂಡ ದಿನ ಸಮಾಜಕ್ಕೊಂದು ದೃಢತೆ. ಜನರಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯ ಎಂದು ಬೆಳ್ತಂಗಡಿ ( ಸೀನಿಯರ್ ಅಡ್ವೋಕೇಟ್) ಹಿರಿಯ ನ್ಯಾಯವಾದಿ ಅಗರ್ಥ ಸುಬ್ರಹ್ಮಣ್ಯ ಕುಮಾರ್ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಬಾರ್ ಅಸೋಸಿಯೇಷನ್ (ರಿ) ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನ ಆಚರಣಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶ ಯಾವ ರೀತಿ ಮುಂದುವರಿಯಬೇಕು, ಈ ಸಮಾಜಕ್ಕೆ ಏನು ಬೇಕು ಎಂಬುದನ್ನು ಒದಗಿಸಿದ್ದು ಸಂವಿಧಾನ ಒಂದು ರೀತಿಯ ಆಶಾಕಿರಣವಿದ್ದಂತೆ ಎಂದರು.
ಬೇರೆ ಬೇರೆ ಭೂಪ್ರದೇಶ, ಸಂಸ್ಕೃತಿ, ದೇಶ ಬೆಳೆದು ಬಂದ ರೀತಿ, ಸಾಂಸ್ಕೃತಿಕ ಮೌಲ್ಯಗಳೆಲ್ಲವನ್ನು ಅಧ್ಯಯನಗೈದರೆ ಮಾತ್ರ. ಅಲ್ಲಿಗೆ ಸೂಕ್ತ ಸಂವಿಧಾನ ನಿರ್ಮಿಸಲು ಸಾಧ್ಯ. ಸಂವಿಧಾನ ಕರಡು ಸಮಿತಿಯ ಸದಸ್ಯರು ಅದನ್ನರಿತು ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಜೊತೆಗೆ ಅವಿಭಜಿತ ದ.ಕ.ದ ಬೆನಗಲ್ ನರಸಿಂಹರಾವ್ರನ್ನು ನೆನಪಿಸಿಕೊಂಡರು.
ಅಂತರಂಗವನ್ನು ತೆರೆದಿಟ್ಟು ಸಂವಿಧಾನದ ಪುಸ್ತಕವನ್ನು ಓದೋಣ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ ಕೆ.ಎಸ್ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ಸಂವಿಧಾನದ ವಿವಿಧ ವಿಧಿಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಬೆಳ್ತಂಗಡಿಯ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಶೈಲೇಶ್ ಆರ್.ಟಿ ಮಾತನಾಡಿ ಶುಭ ಹಾರೈಸಿದರು.
ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಮಂಗಳೂರು. ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ (ರಿ) ಬೆಳ್ತಂಗಡಿಯ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಕೀಲರಾದ ವೈ. ರಾಧಾಕೃಷ್ಣ, ಸ್ವರ್ಣಲತಾ, ಪ್ರಿಯಾಂಕ, ಚಿದಾನಂದ, ಪ್ರಶಾಂತ್, ನವೀನ್.ಕೆ. ಆನಂದ್ ಎಂ.ಸಿ, ಉಮೇಶ್ ಉಪಸ್ಥಿತರಿದ್ದು ಪ್ರಶ್ನೆಗಳಿಗೆ ಉತ್ತರಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶಲಿಪ್. ಎ.ಪಿ ಸ್ವಾಗತಿಸಿ, ಪ್ರಾಧ್ಯಾಪಕ ನಟರಾಜ್ ಹೆಚ್.ಕೆ. ವಂದಿಸಿದರು. ವಿದ್ಯಾರ್ಥಿನಿಯರಾದ ಅನನ್ಯ, ಸಿಂಚನಾ ಎಚ್.ವಿ, ಪ್ರಗತಿ ಎಸ್.ಆರ್ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಭಾಗ್ಯ ಶ್ರೀ ಕಾರ್ಯಕ್ರಮ ನಿರೂಪಿಸಿದರು.