ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಂಗೀತ -ನೃತ್ಯ ಸಂಭ್ರಮ

0

ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಐದೂವರೆ ತಾಸು ಸಂಗೀತ, ನೃತ್ಯ ಪ್ರದರ್ಶನ

ನವ ನೃತ್ಯಗುರು ಪರಂಪರೆಯಿಂದ ವಿದ್ಯಾರ್ಥಿಗಳಿಗೆ ಆಶೀರ್ವಾದ ಭಾಗ್ಯ

ವಿದ್ವಾನ್ ದೀಪಕ್ ಕುಮಾರ್ ನೃತ್ಯ ಕ್ಷೇತ್ರದ ಬಹು ದೊಡ್ಡ ಕಲಾವಿದ – ವಿದ್ವಾನ್ ಕಮಲಾಕ್ಷ ಆಚಾರ್
ಸಂಸ್ಕಾರ, ಸಂಸ್ಕೃತಿ ಮೈಗೂಡಿಸಲು ಶಾಸ್ತ್ರೀಯ ನೃತ್ಯ ಅಗತ್ಯ – ಇಂದಿರಾ ಪಿ ಆಚಾರ್ಯ
ಕೊರೋನಾದ ಬಳಿಕ ವಾರ್ಷಿಕೋತ್ಸವ – ವಿದ್ವಾನ್ ದೀಪಕ್ ಕುಮಾರ್

ಪುತ್ತೂರು: ಭರತನಾಟ್ಯ ಕಲೆಯಲ್ಲಿ ವಿವಿಧ ರೂಪಗಳನ್ನು ಪ್ರಸ್ತುತಿ ಪಡಿಸುತ್ತಾ ಅಂತರಾಷ್ಟ್ರೀಯ ಕಲಾವಿದರಿಂದ ಪುತ್ತೂರಿನಲ್ಲಿ ವಿವಿಧ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 26ನೇ ವರ್ಷದ ಪುತ್ತೂರು ಶಾಖೆಯ ವಾರ್ಷಿಕೋತ್ಸವ ನ.27ರಂದು ಸಂಜೆ ಪುತ್ತೂರು ಜೈನ ಭವನದಲ್ಲಿ ನಡೆಯಿತು. ಕೊರೋನಾದ 2 ವರ್ಷಗಳ ಬಳಿಕ ವಾರ್ಷಿಕೋತ್ಸವದಲ್ಲಿ ಕರಾವಳಿಯ 9 ಮಂದಿ ನೃತ್ಯಗುರುಗಳು ಒಂದೇ ವೇದಿಕೆಯಲ್ಲಿ ಸಮಾಗಮಗೊಂಡು ವಿದ್ಯಾರ್ಥಿಗಳಿಗೆ ಶುಭಾಶೀರ್ವಾದ ನೀಡಿದರು. ಸುಮಾರು ಐದೂರವರೆ ತಾಸುಗಳ ಕಾಲ ವಿದ್ಯಾರ್ಥಿಗಳ ಸಂಗೀತ ಮತ್ತು ನೃತ್ಯಪ್ರದರ್ಶನ ಜರುಗಿತು.

ವಿದ್ವಾನ್ ದೀಪಕ್ ಕುಮಾರ್ ನೃತ್ಯ ಕ್ಷೇತ್ರದ ಬಹು ದೊಡ್ಡ ಕಲಾವಿದ:
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಕಮಲಾಕ್ಷ ಆಚಾರ್ ಅವರು ಕರಾವಳಿಯ ನೃತ್ಯಗುರುಗಳ ಪರವಾಗಿ ಮಾತನಾಡಿದರು. ಸಂಸ್ಕೃತಿಯ ಅರಿವಿನೊಂದಿಗೆ ಸಹೃದಯವಂತ ವಿದ್ಯಾರ್ಥಿಗಳ ನಿರ್ಮಾಣಕ್ಕೆ ವಿದ್ವಾನ್ ದೀಪಕ್ ಕುಮಾರ್ ಪಾತ್ರ ಮಹತ್ವ ನೀಡಿದೆ. ದೀಪಕ್ ಕುಮಾರ್ ಅವರು ನೃತ್ಯ ಕ್ಷೇತ್ರದ ಬಹು ದೊಡ್ಡ ಕಲಾವಿದ. ಅವರ ಪತ್ನಿ, ಸಹೋದರ ಕೂಡಾ ಉತ್ತಮ ಕಲಾವಿದರು. ಅವರಿಂದ ಕರಾವಳಿ ಭಾಗಕ್ಕೆ ಕಲಾ ಕ್ಷೇತ್ರದಲ್ಲಿ ಉತ್ತಮ ಹೆಸರು ಬಂದಿದೆ ಎಂದರು.

 

ಸಂಸ್ಕಾರ, ಸಂಸ್ಕೃತಿ ಮೈಗೂಡಿಸಲು ಶಾಸ್ತ್ರೀಯ ನೃತ್ಯ ಅಗತ್ಯ:
ಅಭ್ಯಾಗತರಾಗಿ ಭಾಗವಹಿಸಿದ ನಗರಸಭಾ ಸದಸ್ಯೆ ಇಂದಿರಾ ಪಿ ಆಚಾರ್ಯ ಅವರು ಮಾತನಾಡಿ ಭರತನಾಟ್ಯ ಕೇವಲ ಸ್ತ್ರೀಯರಿಗೆ ಮಾತ್ರವಲ್ಲ. ಪುರುಷರಿಗೂ ಕೂಡಾ ಭೂಷಣವಾಗಿದೆ ಎಂದು ನಾನು ದೀಪಕ್ ಕುಮಾರ್ ಅವರ ನೃತ್ಯ ನೋಡಿ ಅರಿತು ಕೊಂಡೆ. ಬಳಿಕ ನನ್ನ ಮಗನನ್ನು ಭರತನಾಟ್ಯ ತರಗತಿಗೆ ಸೇರಿಸಿದೆ. ಇವತ್ತು ನನ್ನ ಮಗ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದಾನೆ ಎಂದ ಅವರು ಶಾಸ್ತ್ರೀಯ ನೃತ್ಯದ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮಕ್ಕಳು ಮೈಗೂಡಿಸಿಕೊಳ್ಳುತ್ತಾರೆ ಎಂದರು.

ಕೊರೋನಾದ ಬಳಿಕ ವಾರ್ಷಿಕೋತ್ಸವ:
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕೊರೋನಾದ ಸಂದರ್ಭದಲ್ಲಿ ನಮ್ಮ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಮಾಡಲಾಗಿಲ್ಲ. ಕೊರೋನಾದ ಬಳಿಕ ಮತ್ತೆ ವಾರ್ಷಿಕೋತ್ಸವವನ್ನು ಮಾಡಲಾಗಿದೆ. ಅದೇ ರೀತಿ ಕರಾವಳಿ ಭಾಗದ ನೃತ್ಯಗುರುಗಳು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಸಿಗುವುದು ಬಹಳ ಅಪರೂಪ. ಇವತ್ತು ನಮ್ಮ ಕಾರ್ಯಕ್ರಮದಲ್ಲಿ ಅವರೆಲ್ಲ ಒಂದೇ ವೇದಿಕೆಯಲ್ಲಿ ಕಂಡಿರುವುದು ಸಂತೋಷದ ವಿಚಾರ ಎಂದರು.

ನಿವೃತ್ತ ಯೋಧನಿಗೆ ಸನ್ಮಾನ:
ಸಿಆರ್‌ಪಿಎಫ್ ನಿವೃತ್ತ ಯೋಧ ನೆಲಪ್ಪಾಲು ನಿವಾಸಿ ವಿಜಯ ಕುಮಾರ್ ಎನ್.ಆರ್ ಅವರನ್ನು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕಿ ಪ್ರಭಾ ಬಿ.ಶಂಕರ್, ನೃತ್ಯ ಗುರು ವಿದ್ವಾನ್ ಗಿರೀಶ್ ಕುಮಾರ್ ಜೊತೆಯಲ್ಲಿದ್ದರು. ವಿದುಷಿ ಪ್ರೀತಿಕಲಾ ಅವರು ವಿದ್ಯಾರ್ಥಿಗಳಿಗೆ ಸ್ಮರಣಿಕೆ ಕಾರ್ಯಕ್ರಮ ನಿರ್ವಹಿಸಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಮೋದ್ ಅತಿಥಿಗಳನ್ನು ಗೌರವಿಸಿದರು. ಸುಮಂಗಲ ಗಿರೀಶ್ ವಂದಿಸಿದರು. ಲತಾ ಯತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಸಂಗೀತ ನೃತ್ಯ ಸಂಭ್ರಮದ ನಡುವೆ ಸರಳ ಸಮಾರಂಭ ನಡೆದ ಬಳಿಕ ಮತ್ತೆ ನೃತ್ಯ ಕಾರ್ಯಕ್ರಮ ಮುಂದುವರಿಯಿತು.

 

ಕಲಾ ಶಾಲೆಯ ಸಂಗೀತ ಮತ್ತು ನೃತ್ಯದ ಸುಮಾರು 125 ವಿದ್ಯಾರ್ಥಿಗಳಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನ ನಡೆಯಿತು. ಆರಂಭದಲ್ಲಿ ಸಂಗೀತದ ವಿದ್ಯಾರ್ಥಿಗಳಿಂದ ವಿದುಷಿ ಪ್ರೀತಿಕಲಾ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ವಿದ್ವಾನ್ ದೀಪಕ್ ಕುಮಾರ್ ಅವರ ನಟುವಾಂಗ ಮತ್ತು ವಿದುಷಿ ಪ್ರೀತಿಕಲಾ ಅವರ ಹಾಡುಗಾರಿಕೆಯಲ್ಲಿ ವಿದ್ಯಾರ್ಥಿಗಳು ಸುಮಾರು ಐದೂವರೆ ಗಂಟೆ ಕಾಲ 26 ನೃತ್ಯ ಪ್ರದರ್ಶನ ನೀಡಿದರು. ಮೃದಂಗದಲ್ಲಿ ವಿದ್ವಾನ್ ಗಿತೇಶ್ ಉಪ್ಪಂಗಳ, ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ, ಕೊಳಲಿನಲ್ಲಿ ಗಿತೇಶ್ ನಿಲೇಶ್ವರ, ಆರ್ಗನ್‌ನಲ್ಲಿ ಸುಹಾಸ್ ಹೆಬ್ಬಾರ್ ಸಹಕರಿಸಿದರು. ಗಣೇಶ ಪಂಚರತ್ನದೊಂದಿಗೆ ಸಂಗೀತ ಕಾರ್ಯಕ್ರಮ ಆರಂಭಗೊಂಡಿತು. ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಆರಂಭಗೊಂಡಿತ್ತು.

ನವ ನೃತ್ಯಗುರು ಪರಪಂಪರೆಯ ಆಶೀರ್ವಾದ ಭಾಗ್ಯ
ಕರಾವಳಿ ಭಾಗದ ನೃತ್ಯಗುರುಗಳು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದು ಅಪರೂಪ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಪುತ್ತೂರು ಶಾಖೆಯ ವಾರ್ಷಿಕೋತ್ಸವದ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಕಮಲಾಕ್ಷ ಆಚಾರ್, ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ವಿದುಷಿ ರಾಜಶ್ರೀ ಉಳ್ಳಾಲ್, ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರಲ್‌ನ ನೃತ್ಯಗುರು ವಿದುಷಿ ನಯನಾ ವಿ ರೈ ಮತ್ತು ನೃತ್ಯಗುರುಗಳಾಗಿರುವ ವಿದುಷಿ ಸುಮಂಗಲ ರತ್ನಾಕರ್, ವಿದ್ವಾನ್ ಸುದರ್ಶನ್, ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರನ್ನು ವೇದಿಕೆಗೆ ಬರಮಾಡಿಕೊಂಡ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ದೀಪಕ್ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಅವರು ಅವರನ್ನು ಗೌರವಿಸಿದರು. ಈ ಸಂದರ್ಭ ವೇದಿಕೆಯಲ್ಲಿ 9 ಮಂದಿ ನೃತ್ಯಗುರು ಪರಂಪರೆಯಿಂದ ವಿದ್ಯಾರ್ಥಿಗಳಿಗೆ ಆಶೀರ್ವಾದ ಭಾಗ್ಯ ಲಭಿಸಿತು.

LEAVE A REPLY

Please enter your comment!
Please enter your name here