ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು, ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಚಿಕ್ಕಮುಡ್ನೂರು ಮತ್ತು ಬನ್ನೂರು ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಸೆ.4ರಂದು ಕೆಮ್ಮಾಯಿಯ ವಿಷ್ಣುಮಂಟಪದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾಮಧೇನು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ವಿನಂತಿಸಿದರು.
ಅವರು ಆ.23ರಂದು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು. ದಾನಗಳಲ್ಲಿ ರಕ್ತದಾನವು ಅತೀ ಶ್ರೇಷ್ಠ ದಾನವಾಗಿದೆ.ನಾವು ಜೀವಂತವಾಗಿದ್ದಾಗಲೇ ಮತ್ತೊಬ್ಬರ ಜೀವವನ್ನು ಉಳಿಸುವ ಪುಣ್ಯದ ಕಾರ್ಯ ರಕ್ತದಾನದಿಂದ ಸಾಧ್ಯ. ರಕ್ತದಾನಕ್ಕೆ ಪರ್ಯಾಯ ವ್ಯವಸ್ಥೆಗಳು ಇಲ್ಲ ಹೀಗಾಗಿ ರಕ್ತದಾನವು ಶ್ರೇಷ್ಠ ದಾನವಾಗಿದೆ. ರಕ್ತದಾನದ ಜೊತೆಗೆ ಜಿಲ್ಲೆಯಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದವರನ್ನು ಗುರುತಿಸುವ ಯೋಜನೆಯನ್ನು ನಾವು ಹಮ್ಮಿಕೊಂಡಿದ್ದೇವೆ ಆದ್ದರಿಂದ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿರುವವರು ತಮ್ಮ ದೃಢೀಕರಣ ಪತ್ರದೊಂದಿಗೆ ನಮ್ಮ ಗಮನಕ್ಕೆ ತರಬೇಕು.ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ರಕ್ತದಾನ ಮಾಡಿ ಈ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ದಿವ್ಯ ಪ್ರಭಾ ಚಿಲ್ತಡ್ಕ ಹೇಳಿದರು.
ಒಕ್ಕಲಿಗ ಸ್ವ-ಸಹಾಯ ಒಕ್ಕೂಟಗಳ ಪುತ್ತೂರು ವಲಯ ಮೇಲ್ವಿಚಾರಕಿ ಸುಮಲತಾ ಮಾತನಾಡಿ ಒಕ್ಕಲಿಗ ಸ್ವ-ಸಹಾಯ ಸಂಘವು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ವೇದಿಕೆಯ ಅವಕಾಶವನ್ನು ಕಲ್ಪಿಸುತ್ತಿದೆ ಆ ಮೂಲಕ ಸಮಾಜದ ಬಂಧುಗಳನ್ನು ಮುನ್ನಲೆಗೆ ತರುವ ಕೆಲಸ ಮಾಡುತ್ತಿದೆ.ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಸ್ವ-ಸಹಾಯ ಟ್ರಸ್ಟ್ ಮೂಲಕ ವಿವಿಧ ಉದ್ಯೋಗ ಕೌಶಲ್ಯಗಳ ತರಬೇತಿ,ಕೃಷಿ ಮಾಹಿತಿ ಕಾರ್ಯಕ್ರಮ,ಜೇನು ಕೃಷಿ ತರಬೇತಿ,ಸಹಾಯಧನ ಹಸ್ತಾಂತರ ಈ ರೀತಿ ಸಮಾಜದಲ್ಲಿರುವ ವಿವಿಧ ಸ್ತರದ ಜನರಿಗೆ ಸಹಾಯ ಮಾಡುವ ಕೆಲಸವನ್ನು ಸಂಘ ಮಾಡುತ್ತಿದ್ದು. ಇದೀಗ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿ ಎಂದರು.
ಚಿಕ್ಕಮುಡ್ನೂರು ಸ್ವ-ಸಹಾಯ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಗೌಡ ಕೆಮ್ಮಾಯಿ ಮಾತನಾಡಿ ಸೆ.4ರಂದು ನಡೆಯುವ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಬೈಪಡಿತ್ತಾಯ ನಡೆಸಲಿದ್ದು, ಚಿಕ್ಕಮುಡ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಬಡಾವು ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಸ್ವ-ಸಹಾಯ ಒಕ್ಕೂಟದ ಪ್ರೇರಕಿ ನಮಿತಾ ಉಪಸ್ಥಿತರಿದ್ದರು.