ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಿ-ಎ.ಪಿ ಉಸ್ತಾದ್
ಪುತ್ತೂರು: ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಮಕ್ಕಳ ವಿದ್ಯಾರ್ಜನೆಯನ್ನು ಉತ್ತೇಜಿಸುವ ಕಾರ್ಯ ಆಗಬೇಕು. ತ್ವೈಬಾ ಎಜುಕೇಶನ್ ಸೆಂಟರ್‌ನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹೃದಯಿಗಳು ನೆರವು ನೀಡಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.
ಈಶ್ವರಮಂಗಲ ಅಹ್ದಲ್ ನಗರದಲ್ಲಿ ಆ.21ರಂದು ನಡೆದ ತ್ವೈಬ ಎಜುಕೇಶನ್ ಸೆಂಟರ್ ಈಶ್ವರಮಂಗಲ ಇದರ ದಶ ವಾರ್ಷಿಕ ಮಹಾ ಸಮ್ಮೇಳನ ಸನದುದಾನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳಿಗೆ ಊರವರ ಪ್ರೋತ್ಸಾಹ ದೊರಕಿದಾದ ಆ ಸಂಸ್ಥೆ ಬೆಳಗುತ್ತದೆ ಎಂದ ಅವರು ಖುರ್‌ಆನ್ ಪಾರಾಯಣ ಮತ್ತು ಕಲಿಕೆಯ ಮಹತ್ವವನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಇಲ್ಲಿ ಖುರ್‌ಆನ್ ಕಂಠಪಾಠ ಮಾಡಿದ ಮಕ್ಕಳು ಅದನ್ನು ಹಾಗೆಯೇ ಜೀವನದಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಉದ್ಘಾಟಿಸಿದ ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾತನಾಡಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತ್ವೆ ಬಾ ಎಜುಕೇಶನ್ ಸೆಂಟರ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯಾಚರಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಎಮ್ಮೆಸ್ಸೆಂ ಝೈನಿ ಕಾಮಿಲ್, ಸುಫಿಯಾನ್ ಸಖಾಫಿ, ರಫೀಕ್ ಸಹದಿ ದೇಲಂಪಾಡಿ, ಸಮಯೋಚಿತವಾಗಿ ಮಾತನಾಡಿದರು.
ಅಝೀಝ್ ಮಿಸ್ಬಾಹಿರವರಿಗೆ ಪುರಸ್ಕಾರ: ಮುಹಿಮ್ಮಾತ್ ಶಿಲ್ಪಿ ಮರ್‌ಹೂಂ ತ್ವಾಹಿರುಲ್ ಅಹ್ದಲ್ ತಂಳ್ ಸ್ಮರಣಾರ್ಥ ನೀಡುವ ಝೈನುಲ್ ಮುಹಖ್ಖಿಕೀನ್ ಪುರಸ್ಕಾರವನ್ನು ಧಾರ್ಮಿಕ, ಸಾಮಾಜಿಕ, ಸಂಘಟನಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ತ್ವೆ ಬಾ ಸೆಂಟರ್‌ನ ಪ್ರಾಂಶುಪಾಲರಾದ ಅಬ್ದುಲ್ ಅಝೀಝ್ ಮಿಸ್ಬಾಹಿರವರಿಗೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೀಡಿದರು.
ಸನದು ಪ್ರದಾನ: ಖುರ್‌ಆನ್ ಕಂಠಪಾಠ ಮಾಡಿದ ಹಾಫಿಳ್‌ಗಳಿಗೆ ಎ.ಪಿ ಉಸ್ತಾದ್‌ರವರು ಸನದು ಪ್ರದಾನ ಮಾಡಿದರು. ಸಯ್ಯದ್ ಅಶ್ರಫ್ ತಂಳ್ ಮಜ್ಲಿಸ್ ಆದೂರು ದುವಾ ನೆರವೇರಿಸಿದರು.
ನೂತನ ಕಟ್ಟಡಕ್ಕೆ ಶಿಲಾನ್ಯಾಸ : ನೂತನವಾಗಿ ನಿರ್ಮಿಸಲುದ್ದೇಶಿಸಿರುವ ತ್ವೈಬ ಖುರ್‌ಆನ್ ಅಕಾಡೆಮಿ ಕಟ್ಟಡಕ್ಕೆ ಎ.ಪಿ. ಉಸ್ತಾದ್ ಶಿಲಾನ್ಯಾಸ ನೆರವೇರಿಸಿದರು.
ತ್ವೈಬ ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಝೈನುಲ್ ಆಬಿದೀನ್ ಮುತ್ತುಕೋಯ ತಂಳ್ ಕಣ್ಣವಂ ಅಧ್ಯಕ್ಷತೆ ವಹಿಸಿದ್ದರು.
ಸಯ್ಯದ್ ಶಿಹಾಬುದ್ದೀನ್ ಅಹ್ದಲ್ ತಂಳ್ ಮುತ್ತನ್ನೂರು, ಸಯ್ಯದ್ ಉಮರ್ ಜಿಫ್ರಿ ತಂಳ್ ಮಲಪ್ಪುರಂ, ಸಯ್ಯದ್ ಪೂಕುಂಞಿ ತಂಳ್ ಅಲ್ ಅಹ್ದಲ್ ಆದೂರು, ಕುಂಞಿಕೋಯ ತಂಳ್ ಸುಳ್ಯ, ಸಯ್ಯದ್ ಹಸನ್ ಅಬ್ದುಲ್ಲ ತಂಳ್, ಮುಸ್ತ- ದಾರಿಮಿ ಕಡಂಗೋಡು, ಅಬ್ದುಲ್ ಲತೀಫ್ ತಂಳ್, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬೈತಡ್ಕ, ಉಪಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಕೋಶಾಧಿಕಾರಿ ಯೂಸುಫ್ ಹಾಜಿ ಕೈಕಾರ, ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಸುಳ್ಯ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫ ಹಾಜಿ ಸುಳ್ಯ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯರಾದ ಶ್ರೀರಾಂ ಪಕ್ಕಳ, ಚಂದ್ರಹಾಸ ಸೇರಿದಂತೆ ಅನೇಕ ಸಾಮಾಜಿಕ ನಾಯಕರು, ಉಲಮಾ, ಉಮರಾ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಮಿಸ್ಬಾಹಿ ಸ್ವಾಗತಿಸಿ ವಂದಿಸಿದರು.
ಸಾಂಘಿಕ ಸಂಗಮ: ಆ.21ರಂದು ಬೆಳಿಗ್ಗೆ ಸಾಂಘಿಕ ಸಂಗಮ ನಡೆಯಿತು. ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬೂಬಕ್ಕರ್ ಸಅದಿ ಮಜೂರ್, ಪ್ರ.ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಹಾಫಿಲ್ ಸುಫ್ಯಾನ್ ಸಖಾಫಿ, ಸ್ವಾದಿಕ್ ಸಖಾಫಿ ಪೆರಿಂದಾಟೇರಿ ಮಾತನಾಡಿದರು.
ಪೇರೋಡ್ ಉಸ್ತಾದ್ ಪ್ರಭಾಷಣ: ರಾತ್ರಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರಿಂದ ಪ್ರಭಾಷಣ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.
ಜನಸಾಗರಕ್ಕೆ ಸಾಕ್ಷಿಯಾದ ಕಾರ್ಯಕ್ರಮ
ತ್ವೈಬ ಎಜ್ಯುಕೇಶನ್ ಸೆಂಟರ್ ದಶವಾರ್ಷಿಕ ಸಂಭ್ರಮಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಆಗಮಿಸಿದ ಹಿನ್ನೆಲೆಯಲ್ಲಿ ಜನಸ್ತೋಮವೇ ಹರಿದು ಬಂದಿತ್ತು. ಪುತ್ತೂರು, ಸುಳ್ಯ, ಗಾಳಿಮುಖ, ಕೊಟ್ಯಾಡಿ ಸೇರಿದಂತೆ ನಾನಾ ಕಡೆಗಳಿಂದ ಸಾವಿರಾರು ಮಂದಿ ಭಾಗಿಯಾಗಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಮೂರು ದಿನಗಳ ಕಾರ್ಯಕ್ರಮವನ್ನು ಸಂಘಟಕರು ಅಚ್ಚುಕಟ್ಟಾಗಿ, ಶಿಸ್ತುಬದ್ದವಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು.
ಎಲ್ಲರ ಸಹಕಾರ ಸಿಗುತ್ತಿದೆ
ತ್ವೆ ಬಾ ಎಜುಕೇಶನ್ ಸೆಂಟರ್ 10 ವರ್ಷಗಳನ್ನು ಪೂರೈಸಿದ್ದು ಈ ವಿದ್ಯಾಸಂಸ್ಥೆಯ ಯಶಸ್ಸಿಗೆ ಹಲವರು ಕಾರಣಕರ್ತರಾಗಿದ್ದಾರೆ. ಪಾರ್ಟಿ, ಪಂಗಡ, ಜಾತಿ, ಮತ ಬೇಧವಿಲ್ಲದೇ ಎಲ್ಲರೂ ಈ ಸಂಸ್ಥೆಗೆ ಸಹಕರಿಸುತ್ತಿದ್ದಾರೆ. ನಾಡಿನ ಪ್ರಕಾಶಮಾನವಾಗಿ ಈ ವಿದ್ಯಾ ಸಂಸ್ಥೆ ಬೆಳಗುತ್ತಿದ್ದು ದಶಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಂಸ್ಥೆಯ ಇನ್ನಷ್ಟು ಅಭಿವೃದ್ಧಿಗೆ ಮತ್ತು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಎಲ್ಲರ ಸಹಕಾರವನ್ನು ಮುಂದೆಯೂ ಬಯಸುತ್ತಿದ್ದೇವೆ.
-ಅಬ್ದುಲ್ ಅಝೀಝ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿ
ತ್ವೆ ಬ ಎಜುಕೇಶನ್ ಸೆಂಟರ್