ಉಪ್ಪಿನಂಗಡಿ: ಇಲ್ಲಿನ ಖಾಸಗಿ ವಸತಿ ಸಮುಚ್ಛಯದಿಂದ ಶಾಲಾ ಬಳಿಯೇ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದಲ್ಲಿ ಸೆ. 1ರಂದು ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರು ಎಚ್ಚರಿಕೆ ನೀಡಿದ್ದಾರೆ.
ಶಾಲಾ ಎಸ್‌ಡಿಎಂಸಿ ಸದಸ್ಯ ಮೊಯ್ದೀನ್ ಕುಟ್ಟಿ ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ನೀಡಿದ ಮಕ್ಕಳ ಪೋಷಕರ ನಿಯೋಗವು, ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುವುದಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ಇದರ ಬಳಿಯೇ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ತರಗತಿ ಕೊಠಡಿಗಳು ಇದ್ದು, ಇಲ್ಲಿರುವ ಸುಮಾರು 120ರಷ್ಟು ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವಂತಾಗಿದೆ. ಈ ಬಗ್ಗೆ ಈ ಹಿಂದೆಯೇ ಮನವಿ ನೀಡಿದ್ದರೂ, ಯಾವುದೇ ಕ್ರಮ ಗ್ರಾ.ಪಂ.ನಿಂದ ಆಗಿಲ್ಲ. ಆದ್ದರಿಂದ ಕೂಡಲೇ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ತಪ್ಪಿದ್ದಲ್ಲಿ ಸೆ.೧ರಂದು ಗ್ರಾ.ಪಂ. ಕಚೇರಿಯೆದುರು ಮಕ್ಕಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮನವಿ ನೀಡಿದ ನಿಯೋಗದಲ್ಲಿ ಮಕ್ಕಳ ಪೋಷಕರಾದ ಫಾರೂಕ್ ಜಿಂದಗಿ, ಕಲಂದರ್ ಶಾಫಿ, ಹರೀಶ್ , ಅಬ್ದುಲ್ ಮಜೀದ್, ಫಯಾಝ್ ಉಪಸ್ಥಿತರಿದ್ದರು.