ಪುತ್ತೂರು:ನರಿಮೊಗರು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂಡಳಿ, ಶ್ರೀಶಾರದಾಂಬಾ ಸೇವಾ ಟ್ರಸ್ಟ್ ಸೇರಾಜೆ ಇದರ ವತಿಯಿಂದ ೩೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.೩೧ರಂದು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬೆಳಿಗ್ಗೆ ಶ್ರೀಗಣೇಶ ವಿಗ್ರಹದ ಆಗಮನದ ಬಳಿಕ ಗಣೇಶನ ವಿಗ್ರಹ ಪ್ರತಿಷ್ಠೆ, ಗಣಹೋಮ ಜರುಗಿತು. ಬಳಿಕ ಮಹಿಳೆಯರು, ಪುರುಷರು, ಮಕ್ಕಳು ಹಾಗೂ ಅಂಗನವಾಡಿ ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ೬೮ ಕೆ.ಜಿ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟಗಳು ನಡೆಯಿತು. ಕಬಡ್ಡಿ ಪಂದ್ಯಾಟದಲ್ಲಿ ಒಟ್ಟು ೧೮ ತಂಡಗಳು ಭಾಗವಹಿಸಿದ್ದು ನವಜ್ಯೋತಿ ನರಿಮೊಗರು ಪ್ರಥಮ ಹಾಗೂ ಹನುಮಾನ್ ಫ್ರೆಂಡ್ಸ್ ನರಿಮೊಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀಗಣಪತಿ ದೇವರಿಗೆ ರಂಗಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಶ್ರೀಗಣೇಶನ ವಿಗ್ರಹದ ವೈಭವದ ಶೋಭಾಯಾತ್ರೆಯು ನಡೆಯಿತು.
ಭಜನಾ ಮಂದಿರದ ಬಳಿಯಿಂದ ಹೊರಟ ಶೋಭಾಯಾತ್ರೆಯು ನರಿಮೊಗರು, ಪುರುಷರಕಟ್ಟೆ, ಇಂದಿರಾನಗರ ನಂತರ ಭಜನಾ ಮಂದಿರದ ಬಳಿಯಿಂದಾಗಿ ಮೈರನಕೆರೆಯಲ್ಲಿ ಗಣೇಶನ ವಿಗ್ರಹ ಜಲಸ್ಥಂಬನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಶಾರದಾಂಬಾ ಭಜನಾ ಮಂಡಳಿ, ಶ್ರೀಶಾರದಾಂಬಾ ಸೇವಾ ಟ್ರಸ್ಟ್ ಸೇರಾಜೆ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.