ಅಷ್ಟಮಂಗಲ ಪ್ರಶ್ನಾ ಚಿಂತನೆಯ ಮೂಲಕ ಅಭಿವೃದ್ಧಿ – ಸೆ.4ರಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಸಭೆ

0

ಪುತ್ತೂರು: ದೇವಳದ ಆವರಣದ ಪರಿಸರವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವ ದೃಷ್ಟಿಯನ್ನು ಇಟ್ಟುಕೊಂಡು ಅಷ್ಟಮಂಗಲ ಪ್ರಶ್ನಾ ಚಿಂತನೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಆಧ್ಯತೆಯ ಮೇರೆಗೆ ಕಾರ್ಯಗತಗೊಳಿಸುವ ಚಿಂತನೆ ನಡೆಸಲು ಭಕ್ತಾದಿಗಳ ಅಭಿಪ್ರಾಯವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಸೆ.4ರಂದು ಸಂಜೆ ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಭೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಮ್ಮ ಆಡಳಿತ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಶೈಕ್ಷಣಿಕ, ದಾರ್ಮಿಕ, ಸಾಮಾಜಿಕ, ಅಭಿವೃದ್ಧಿ, ಆರ್ಥಿಕ, ಸಾಂಸ್ಕೃತಿಕವಾಗಿ ಮತ್ತು ರಾಷ್ಟ್ರಭಕ್ತಿಯ ಚಿಂತನೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರಾಜ್ಯದ 25 ಪ್ರಮುಖ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ’ದೈವ ಸಂಕಲ್ಪ’ ಎಂಬ ನೂತನ ಯೋಜನೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನವೂ ಸೇರ್ಪಡೆಗೊಂಡಿದೆ. ಸುಮಾರು ಎಕ್ರೆಗಟ್ಟಲೇ ಜಾಗ ಇರುವ ದೇವಸ್ಥಾನಗಳು ಬಹಳ ಕಡಿಮೆ ಇರುವ ಸಂದರ್ಭದಲ್ಲಿ 18 ಎಕ್ರೆ ಜಾಗ ಇರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ನೀಲನಕಾಶೆಯನ್ನು ಕಮೀಷನರ್ ಮತ್ತು ಉಸ್ತುವಾರಿ ಸಚಿವರಿಗೆ ಶಾಸಕರ ಮೂಲಕ ನೀಡಿದ್ದರ ಪರಿಣಾಮ ದೈವ ಸಂಕಲ್ಪ ಯೋಜನೆ ದೇವಸ್ಥಾನಕ್ಕೆ ಕೈಗೂಡುವಲ್ಲಿ ಸಹಕರಾವಾಗಿದೆ. ಸುಮಾರು ರೂ. 36 ಕೋಟಿಯ ಅಭಿವೃದ್ಧಿ ಕಾರ್ಯಕ್ಕೆ ಯೋಜನೆ ಸಿದ್ದಪಡಿಸಲಾಗಿದ್ದು, ಅದರಲ್ಲಿ ಯಾವುದನ್ನು ಆದ್ಯತೆ ಮೇಲೆ ತೆಗೆದು ಕೊಳ್ಳಬೇಕೆಂದು ನಿಶ್ಚಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದೆ ಅನುಮೋದನೆಯೂ ಸಿಗಬೇಕಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ಭಕ್ತರ ಅಭಿಪ್ರಾಯ ಮುಖ್ಯ ಎಂದರು. ಈಗಾಗಲೇ ಅಷ್ಟಮಂಗಲ ಪ್ರಶ್ನೆಯು ನಡೆದಿದ್ದು, ದೋಷ ಪರಿಹಾರರ್ಥವಾಗಿ ಕೊಲ್ಲುರು, ಕಾಶಿ, ಉಜ್ಜೈನಿ, ಗುರುವಾಯೂರು, ಕುಂಟಾರು ಭೇಟಿನೀಡಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ದೇವಳದಲ್ಲಿ ದೋಷ ಪರಿಹಾರ ಕಾರ್ಯಕ್ರಮ ನಡೆಸಲಾಗಿದೆ. ಮೂಲ ನಾಗದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಲಾಗಿದೆ.

ಆಡಳಿತ ಮಂಡಳಿಯ ಕಾರ್ಯಸಾಧನೆಗಳು:

ದೇವಳದ ಆಡಳಿತ ಮಂಡಳಿಯ ವಿವಿಧ ಕಾರ್ಯ ಸಾಧನೆ ಮತ್ತು ಕಾರ್ಯಕ್ರಮಗಳ ಕುರಿತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಅವರ ವಿವರಣೆ ನೀಡಿದರು. ಶೈಕ್ಷಣಿಕವಾಗಿ ರಾಜ್ಯಮಟ್ಟದ ಪುಸ್ತಕ ಮೇಳ, ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣದ ಪ್ರಾರಂಭಕ್ಕೆ ನಾಂದಿ, ಧಾರ್ಮಿಕ ಕೇಂದ್ರಗಳ ಮೂಲಕ 650ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ, ಧಾರ್ಮಿಕ ಗ್ರಂಥಾಲಯ ಪ್ರಾರಂಭವಾಗಿದೆ. ಧಾರ್ಮಿಕವಾಗಿ ಅಷ್ಟಾವಧಾನ ಸೇವೆ, ಮನೆ ಮನೆ ಬಿಲ್ವ ಪತ್ರೆ ಗಿಡ ವಿತರಣೆ, 22 ದಿನಗಳ ಅಷ್ಟಮಂಗಲ ಪ್ರಶ್ನಾ ಚಿಂತನೆ, ದೋಷ ಪರಿಹಾರ ಕಾರ್ಯ, ಆಟಿ ತಿಂಗಳ ವಿಶೇಷ ದುರ್ಗಾಪೂಜೆ, ಸರಣಿ ಉಪನ್ಯಾಸ, ರಾತ್ರಿ ಪ್ರಸಾದ ಭೋಜನ, ಪ್ರತಿ ತಿಂಗಳ 3ನೇ ಶುಕ್ರವಾರ ಲಲಿತ ಸಹಸ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ, ಧನುರ್ಮಾಸ ತಿಂಗಳ ಶಿವೋಹಂ ಹೆಸರಿನಲ್ಲಿ ಕಾಶಿ ಪುರಾಣ ಶಿವ ಶ್ರವಣ ಕಾರ್ಯಕ್ರಮ, ವಾರ್ಷಿಕ ರಜಾದಿನಗಳಲ್ಲಿ ಮಕ್ಕಳಿಗೆ ವೇದಪಾಠ ಶಿಬಿರ, ನಿತ್ಯ ಏಕಾದಶರುದ್ರಾ ಪಠಣ ಪುನರಾರಂಭ, ದೇವಳದ ಆಗ್ನೇಯ ಭಾಗದಲ್ಲಿ ಮಹಾರುದ್ರ ಯಾಗ ಶಾಲೆ ನಿರ್ಮಾಣ, ವಿಶೇಷ ಕಾರ್ಯಕ್ರಮಗಳ ಸಂದರ್ಭ ರಾತ್ರಿಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ, ವಿಶೇಷವಾಗಿ ಸುಮಾರು 300 ಜನ ವಿದ್ಯಾರ್ಥಿಗಳಿಗೆ ವಿದ್ಯಾದಾಸೋಹ, 500 ಜನ ಭಕ್ತಾದಿಗಳಿಗೆ ನಿತ್ಯ ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗದ್ದೆಗಿಳಿಯೋಣ ಬಾ ಭತ್ತ ಬೆಳೆಯೋಣ ಯೋಜನೆಯಡಿಯಲ್ಲಿ ಹಡೀಲು ಬಿದ್ದ 110 ಎಕ್ರೆ ಜಾಗದಲ್ಲಿ ಭತ್ತ ಕೃಷಿಗೆ ಚಾಲನೆ, ಯೋಗ ಜೀವನ ಕಾರ್ಯಕ್ರಮ, ಗದ್ದೆ ಮತ್ತು ಆವರಣ ಸ್ವಚ್ಛತಾ ಕಾರ್ಯಕ್ರಮ, ಜಾತ್ರೆಯ ಸಂದರ್ಭ ಹಸಿರು ವಾಣಿ ಸಮರ್ಪಣಾ ಕಾರ್ಯಕ್ರಮ ನಡೆಸಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ದೇವಳದ 14 ಎಕ್ರೆ ಜಾಗಕ್ಕೆ ಶಿಲಾಮಯ ಆವರಣ ಗೋಡೆ ರಚನಾ ಕಾರ್ಯಕ್ಕೆ ಒಡಿಯೂರು ಶ್ರೀಗಳಿಂದ ಶಿಲಾನ್ಯಾಸ, ಅನ್ನಪೂರ್ಣ ಛತ್ರಕ್ಕೆ ಶಿಲಾನ್ಯಾಸ, ಪುರಸಭಾ ಅನುದಾನದಿಂದ ದೇವಳದ ಮುಂಭಾಗದ ಚರಂಡಿಗೆ ಸ್ಲಾಬ್ ಅಳವಡಿಕೆ, ಅಯ್ಯಪ್ಪ ಗುಡಿ, ನವಗ್ರಹಗುಡಿಗಳ ದಕ್ಷಿಣ ಭಾಗ ಗದ್ದೆಗೆ ಇಂಟರ್‌ಲಾಕ್, ರಥಮಂದಿರದ ಪಶ್ಚಿಮ ಭಾಗ ಇಂಟರ್‌ಲಾಕ್ ಅಳವಡಿಕೆ, ಹಸಿಕಸ ವಿಲೇವಾರಿಗೆ ಗೊಬ್ಬರ ಮಾಡುವ ಕಂಪೋಸ್ಟ್ ಹೊಂಡ, ಈ ಕುರಿತು ರೂ. 25ಲಕ್ಷ ಮೊತ್ತದ ಹೊಸ ಯೋಜನೆಗೆ ಮಂಜೂರಾತಿ ದೊರಕಿದೆ. ಸಿಯಾಳದ ಸಿಪ್ಪೆಯನ್ನು ಹುಡಿಮಾಡಿ ಗೊಬ್ಬರವನ್ನಾಗಿ ಉಪಯೋಗಿಸುವುದರ ಮೂಲಕ ವಾರ್ಷಿಕ ವೆಚ್ಚಕ್ಕೆ ಕಡಿವಾಣ ಹಾಕಿದೆ. ನಟರಾಜ ವೇದಿಕೆಯ ಬದಿಯ ಚರಂಡಿ ದುರಸ್ಥಿಗೊಳಿಸಿ ಸಿಮೆಂಟ್ ಸ್ಲಾಬ್ ಅಳವಡಿಸಲಾಗಿದೆ. ದೇವಳದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಯೋಜನಾ ನಕ್ಷೆ ಸಿದ್ದಪಡಿಸಿ ಸಕರಾಕ್ಕೆ ಮಂಜೂರಾತಿಗಾಗಿ ಒಪ್ಪಿಸಿರುವುದು, ಗೋ ಶಾಲೆ ಪ್ರಾರಂಭಿಸಲು ಈಗಾಗಲೇ ಜಾಗ ಮಂಜೂರಾತಿ ಹಂತಕ್ಕೆ ತಲುಪಿದೆ. ದೇವರಮಾರು ಗದ್ದೆಯಲ್ಲಿ 40 ವರ್ಷದ ಬಳಿಕ 2.5 ಎಕ್ರೆ ಜಾಗದಲ್ಲಿ ಭತ್ತದ ಕೃಷಿ ಪ್ರಾರಂಭ, ಸಭಾಭವನದ ಪಕ್ಕ ಸಭೀಕರ ಉಪಯೋಗಕ್ಕೆ ಶೌಚಾಲಯ ನಿರ್ಮಾಣ, ಸಭಾಭವನದ ಬಳಿಯಲ್ಲಿ ಯೋಜನಾ ಬದ್ಧವಾದ ಚರಂಡಿ ನಿರ್ಮಾಣ, ದೇವದಳದ ಗದ್ದೆ ಮತ್ತುಇತರ ಜಾಗಗಳನ್ನು ಸಂಪೂರ್ಣ ಸರ್ವೆ ಮಾಡಿಸಿ ಸ್ವಾಧೀನತೆಯನ್ನು ಖಚಿತ ಪಡಿಸಿಕೊಂಡಿದೆ. ತೆಂಕಿಲದಲ್ಲಿರುವ 4 ಎಕ್ರೆ ಜಾಗದ ಸರ್ವೆ ಕಾರ್ಯಕ್ಕೆ ಕ್ರಮ, ದ್ರಾವಿಡ ಬ್ರಾಹ್ಮಣ ಹಾಸ್ಟೇಲ್ ಪಕ್ಕದಲ್ಲಿ ದೇವಳದ ಹೆಸರಿನಲ್ಲಿದ್ದ ಜಾಗ ಆಡಳಿತದ ಗಮನದಲ್ಲಿ ಇಲ್ಲದಿರುವುದನ್ನು ಸರ್ವೆ ಮಾಡಿಸಿ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ. ಆರ್ಥಿಕವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಮೇಲಂತಸ್ತಿನಲ್ಲಿ ಎರಡು ತಿಂಗಳುಗಳ ಕಾಲ ನಡೆದ ಬಟ್ಟೆ ವ್ಯಾಪಾರದಿಂದ ದೇವಳಕ್ಕೆ ರೂ. 3ಲಕ್ಷದಷ್ಟು ಆದಾಯ ಬಂದಿದೆ. ಜಾತ್ರೆಗೆ ವ್ಯವಹಾರ ಮೇಳ ಆಯೋಜಿಸಲಾಗಿತ್ತು. ತೆಂಗಿನಕಾಯಿ, ಬಾಳೆಹಣ್ಣು ಖರೀದಿಯಲ್ಲಿ ಪಾರದರ್ಶಕ ವ್ಯವಸ್ಥೆ, ಸಭಾಭವನದ ಬಾಡಿಗೆದಾರರಿಗೆ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಕೆ ಮಾಡುವ ಮೂಲಕ ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕಲಾಗಿದೆ. ಸಾಂಸ್ಕೃತಿಕವಾಗಿ ಶಿವರಾತ್ರಿ ಉತ್ಸವದಲ್ಲಿ ಛದ್ಮವೇಷ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ವಾರ್ಷಿಕ ಜಾತ್ರೆಯಲ್ಲಿ ರಾಜ್ಯದ 36 ತಂಡಗಳಿಂದ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಉಪನ್ಯಾಸ ನಡೆಸಲಾಗಿದೆ. ಆ.14ರಂದು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಟರಾಜ ವೇದಿಕೆಯಲ್ಲಿ ಸಂವಿಧಾನದ ಬಗ್ಗೆ ಉಪನ್ಯಾಸ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮ ನಡೆಸುವ ಮೂಲಕ ರಾಷ್ಟ್ರಭಕ್ತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ವಿವರಣೆ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here