ಪುತ್ತೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಭಕ್ತಿಗಳ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಅಧಿಸೂಚಿತ ಸಂಸ್ಥೆಗಳ ಹೆಸರಿನಲ್ಲಿ ಅನಧಿಕೃತವಾಗಿ ಸಮಿತಿಗಳನ್ನು ರಚಿಸಿಕೊಂಡು ಭಕ್ತಾಧಿಗಳಿಂದ ಹಾಗೂ ಸಾರ್ವಜನಿಕರಿಂದ ವಂತಿಗೆ ಹಣ ಸಂಗ್ರಹಿಸಿ ದುರುಪಯೋಗ ಪಡಿಸುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ ದೂರು ದಾಖಲಿಸಿ ಕ್ರಮ ಜರಗಿಸಲು ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ದೇವಾಲಯಗಳಲ್ಲಿ ದೈನಂದಿನ ಕಾರ್ಯ ಕಲಾಪಗಳು ಹಾಗೂ ಯಾವುದೇ ಉತ್ಸವ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದಲ್ಲಿ ಇಲಾಖಾ ಕಾನೂನಿನಡಿಯಲ್ಲಿ ರೂಪಿಸಿರುವ ನಿಯಮಾವಳಿಗಳಂತೆ ನಿರ್ವಹಿಸಬೇಕಾಗಿರುತ್ತದೆ. ಇದಕ್ಕಾಗಿ ಕೆಲವು ಅಧಿಸೂಚಿತ ಸಂಸ್ಥೆಗಳ ಹೆಸರಿನಲ್ಲಿ ಅನಧಿಕೃತವಾಗಿ ಸಮಿತಿಗಳನ್ನು ರಚಿಸಿಕೊಂಡು ಭಕ್ತಾದಿಗಳಿಂದ ವಸ್ತು ಹಾಗೂ ಹಣದ ವಂತಿಗೆಯನ್ನು ಸಂಗ್ರಹಿಸಿ ದುರುಪಯೋಗ ಪಡಿಸುವುದಲ್ಲದೆ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿ ದುಂಡಾವರ್ತೆಯಿಂದ ಉತ್ಸವ ಹಾಗೂ ಇತರ ಚಟುವಟಿಕೆಗಳನ್ನು ನಡೆಸುತ್ತಿರುವುದು ಈ ಕಛೇರಿಯ ಗಮನಕ್ಕೆ ಬಂದಿರುತ್ತದೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಆದುದರಿಂದ ಇನ್ನು ಮುಂದೆ ಅಧಿಸೂಚಿತ ಸಂಸ್ಥೆಗಳಲ್ಲಿ ಅನಧಿಕೃತ ಸಮಿತಿಗಳು ಉತ್ಸವ ಇತರ ಕಾರ್ಯಕ್ರಮಗಳನ್ನು ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಸಲು ಅನುಮತಿ ನೀಡದಂತೆ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡದೇ ಇರಲು ಎಲ್ಲಾ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಒಂದು ವೇಳೆ ಇಂತಹ ಅನಧಿಕೃತ ಸಮಿತಿಗಳು ದೇವಾಲಯದ ಆಡಳಿತದಲ್ಲಿ ಹಾಗೂ ಉತ್ಸವಗಳ ಹೆಸರಿನಲ್ಲಿ ಹಸ್ತಕ್ಷೇಪ ನಡೆಸಿ ಭಕ್ತಾದಿಗಳಿಂದ ವಂತಿಗೆ ಸಂಗ್ರಹಿಸಿದ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಅಂತಹವರ ವಿರುದ್ಧ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಲು ಕ್ರಮ ಜರಗಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಸೂಚಿಸಿದ್ದಾರೆ.