ಹಗರಣ ಹೊರಗೆ ತರುತ್ತೇವೆ-ತನ್ನಿ, ಜೈಲಿಗೆ ಕಳುಹಿಸುತ್ತೇವೆ-ಕಳುಹಿಸಿ
ಯಾರೂ ತಡೆಯುವುದಿಲ್ಲ, ಚಪ್ಪಾಳೆ ತಟ್ಟಿ ಸ್ವಾಗತಿಸುತ್ತೇವೆ
ಭಾರತ್ ಜೋಡೋ ಯಾತ್ರೆ – ಜನಸ್ಪಂದನ ಸಮಾವೇಶ ಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಘೋಷಿಸಿ ಇಲ್ಲದಿದ್ದರೆ ಭ್ರಷ್ಟಾಚಾರಿಗಳ ಜೋಡಣೆ ಮತ್ತು ಸಮಾವೇಶವಾದೀತು
ಸಿದ್ಧರಾಮಯ್ಯ ಸಮಾವೇಶ, ಕಾಂಗ್ರೆಸ್ನಿಂದ ಭಾರತ್ ಜೋಡೋ ಯಾತ್ರೆ, ಬಿಜೆಪಿಯಿಂದ ಜನಸ್ಪಂದನ ಸಮಾವೇಶ ಬಹಳಷ್ಟು ಜನ ಸೇರುತ್ತಿದ್ದಾರೆ. ಅವುಗಳಲ್ಲಿ ಇತರ ಪಕ್ಷಗಳ, ವ್ಯಕ್ತಿಗಳ ಟೀಕೆ-ಟಿಪ್ಪಣಿಗಳ ಸುರಿಮಳೆಯಾಗುತ್ತದೆ. ಎಷ್ಟೋ ವರ್ಷಗಳಿಂದ ಹಗರಣ ಮಾಡಿದ ವ್ಯಕ್ತಿ ಮತ್ತು ಪಕ್ಷಗಳ ಭ್ರಷ್ಟಾಚಾರಗಳನ್ನು ಬೆಳಕಿಗೆ ತಂದು ಜೈಲಿಗೆ ಕಳುಹಿಸುತ್ತೇವೆ ಎಂದು ಎಲ್ಲಾ ಪಕ್ಷದವರು ಇತರ ಪಕ್ಷಗಳ ಮತ್ತು ವಿರೋಧ ಪಕ್ಷದ ವ್ಯಕ್ತಿಗಳ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ಜನರು ಆ ಹಗರಣಗಳನ್ನು, ಭ್ರಷ್ಟಾಚಾರವನ್ನು ಮುಚ್ಚಿಡಲು ಅಥವಾ ರಕ್ಷಿಸಲು ಎಂದೂ ಹೇಳಿರುವುದಿಲ್ಲ. ಅದನ್ನು ಬಯಸುವುದೂ ಇಲ್ಲ. ಆದಷ್ಟು ಬೇಗ ಅವುಗಳನ್ನು ಬೆಳಕಿಗೆ ತಂದು ಇತರ ಪಕ್ಷಗಳವರನ್ನು, ತಮ್ಮ ಪಕ್ಷದವರನ್ನೂ, ವ್ಯಕ್ತಿಗಳನ್ನೂ ಜೈಲಿಗೆ ಕಳುಹಿಸಿದರೆ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಹಾಗೆ ಮಾಡಿದವರನ್ನು ಹೀರೋಗಳು ಎಂದು ಗೌರವಿಸುತ್ತಾರೆ. ಹೀಗಿದ್ದರೂ ಅದನ್ನು ಯಾಕೆ ಬೆಳಕಿಗೆ ತರುವುದಿಲ್ಲ? ಭ್ರಷ್ಟಾಚಾರಿಗಳನ್ನು ಯಾಕೆ ಜೈಲಿಗೆ ಕಳುಹಿಸುವುದಿಲ್ಲ. ಯಾವ ಲಾಭಕ್ಕಾಗಿ, ಯಾರ ಹೆದರಿಕೆಯಿಂದ ಅದನ್ನು ಮುಚ್ಚಿಡುತ್ತಿದ್ದೀರಿ? ಅದನ್ನು ಕಾರ್ಯರೂಪಕ್ಕೆ ತರದೆ ಬರೀ ಬಾಯಲ್ಲಿ ಹೇಳುವುದರಿಂದ ಜನರಿಗೆ ಆಗುವ ಲಾಭವೇನು ವಿವರಣೆ ನೀಡುತ್ತೀರಾ?
ಪ್ರಧಾನಿ ಮೋದೀಜೀಯವರು ಸಿದ್ದರಾಮಯ್ಯ ಸರಕಾರ ಆಡಳಿತವಿದ್ದಾಗ 10% ಸರಕಾರ ಎಂದು ಹೇಳಿದ್ದಾರೆ. ಈಗಿನ ಬೊಮ್ಮಾಯಿಯವರದ್ದು 40% ಸರಕಾರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾಂಗ್ರೆಸ್ ಸರಕಾರ 100% ಭ್ರಷ್ಟಾಚಾರದ ಸರಕಾರ, ಕೆಲಸವೇ ಮಾಡದೆ ಹಣ ಹೊಡೆದಿದ್ದಾರೆ ಎಂದು ಬೊಮ್ಮಾಯಿ ಜನಸ್ಪಂದನ ಸಮಾವೇಶದಲ್ಲಿ ಘೋಷಿಸಿದ್ದಾರೆ. ಸಾರ್ವಜನಿಕವಾಗಿ ಅದನ್ನು ಹೇಳಿದ ಮೇಲೆ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲೇ ಬೇಕು. ಓಟಿಗಾಗಿ ಅಲ್ಲದಿದ್ದರೂ ಜನ ಹಿತಕ್ಕಾಗಿ, ದೇಶ ಸೇವೆಗಾಗಿ ಅದನ್ನು ಮಾಡಿರಿ. ಆ ಮೂಲಕ ಜನರ ವಿಶ್ವಾಸವನ್ನು ಗಳಿಸಿರಿ. ಭಾರತ್ ಜೋಡೋ ಮತ್ತು ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸೇರುವ ತಮ್ಮ ಜನರಿಗೆ ತಿಳಿಸಲಿಕ್ಕಾಗಿ ಇತರರ ಬಗ್ಗೆ ಆರೋಪ ಮಾಡುವುದು ತಪ್ಪಲ್ಲ. ಆದರೆ ತಮ್ಮ ಸರಕಾರ ಲಂಚ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಭರವಸೆ ನೀಡಿರಿ. ಅದು ತಮ್ಮಿಂದ ಸಾಧ್ಯವಾಗದಿದ್ದರೆ ಆರಿಸಿ ಬಂದಿದ್ದರೂ ಪಕ್ಷ ಆಡಳಿತಕ್ಕೆ ಬಂದಿದ್ದರೂ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿರಿ. ಆ ಮೂಲಕ ಜನ ಬೆಂಬಲ ಪಡೆಯಿರಿ, ಜನರ ವಿಶ್ವಾಸ ಉಳಿಸಿರಿ.
ಯಾವುದೇ ವ್ಯಕ್ತಿಗಳಿಗೆ, ಯಾವುದೇ ಪಕ್ಷಕ್ಕೆ ಅಥವಾ ಯಾವುದೇ ನಾಯಕರುಗಳಿಗೆ ಲಂಚ, ಭ್ರಷ್ಟಾಚಾರಕ್ಕೆ ಪುರಾವೆ ಬೇಕಾದರೆ ಸಾಮಾನ್ಯ ಜನರನ್ನು ಕೇಳಿರಿ, ನಮ್ಮನ್ನೂ ಕೇಳಿ. ನೇರ ಪುರಾವೆ ಬೇಕಾದರೆ ಸರಕಾರಿ ಕಚೇರಿಯ ಪ್ರತಿಯೊಂದು ಕಂಬಗಳನ್ನು ಮತ್ತು ಡೆಸ್ಕ್ ಗಳನ್ನು ವಿಚಾರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ಅದುವೇ ದೊಡ್ಡ ಭಾರತ್ ಜೋಡೋ ಮತ್ತು ಜನಸ್ಪಂದನ ಸಮಾವೇಶ ಎಂದು ಅರ್ಥ ಮಾಡಿಕೊಳ್ಳಿರಿ. ಇಲ್ಲದಿದ್ದರೆ ಅದು ಭ್ರಷ್ಟಾಚಾರಿಗಳ ಜೋಡಣೆ ಮತ್ತು ಭ್ರಷ್ಟಾಚಾರದ ಸಾಧನೆ ಸಮಾವೇಶ ಎಂದೇ ಜನರು ಅರ್ಥ ಮಾಡಿಕೊಳ್ಳಬೇಕಾದೀತು.