ಪುತ್ತೂರಿನ ಪತ್ರಕರ್ತರಿಗೆ ಗುರುತಿನ ಚೀಟಿ, ಆರೋಗ್ಯ ಕಾರ್ಡ್ ವಿತರಣೆ

0

ವೃತ್ತಿ ಹೆಸರಿನಲ್ಲಿ ದಂಧೆ ನಡೆಸುವ ಪತ್ರಕರ್ತರು ವರ್ತನೆ ಬದಲಾಯಿಸಿಕೊಳ್ಳಬೇಕು -ಶಿವಾನಂದ ತಗಡೂರು

ಸುದ್ದಿ ಬಿಡುಗಡೆ ಪತ್ರಿಕೆ ರಾಷ್ಟ್ರಕ್ಕೇ ಮಾದರಿಯಾಗಿದೆ -ಮದನ ಗೌಡ

ಪುತ್ತೂರು: ವೃತ್ತಿ ಹೆಸರಿನಲ್ಲಿ ದಂಧೆ ಮಾಡುವ ಪತ್ರಕರ್ತರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೂಚನೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಸಾರ ಹೊಂದುವ ಮೂಲಕ ಸುದ್ದಿ ಬಿಡುಗಡೆ ಪತ್ರಿಕೆ ಬಹುದೊಡ್ಡ ಸಾಧನೆ ಮಾಡಿದೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸೆ.10ರಂದು ಪುತ್ತೂರು ಪತ್ರಿಕಾ ಭವನಕ್ಕೆ ಭೇಟಿ ನೀಡಿ ಪತ್ರಕರ್ತರಿಗೆ ಗುರುತಿನ ಚೀಟಿ ಮತ್ತು ಆರೋಗ್ಯ ಕಾರ್ಡ್ ವಿತರಿಸಿದ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರೂ ಆಗಿರುವ ಶಿವಾನಂದ ತಗಡೂರು ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಹುಟ್ಟು, ಇತಿಹಾಸ, ಸಾಧನೆ ಮತ್ತು ಸಂಘದ ಹೋರಾಟ ಹಾಗೂ ಮುಂದಿನ ಯೋಜನೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದಲ್ಲಿರುವ ಅತೀ ದೊಡ್ಡ ಪತ್ರಕರ್ತರ ಸಂಘವಾಗಿದೆ. ಸುಮಾರು ಎಂಟು ಸಾವಿರ ಸದಸ್ಯರನ್ನು ನಮ್ಮ ಸಂಘ ಒಳಗೊಂಡಿದೆ. ಎಲ್ಲಾ ಸದಸ್ಯ ಪತ್ರಕರ್ತರು ಮತ್ತು ಅವರ ಕುಟುಂಬದವರ ರಕ್ಷಣೆಗೆ ನಮ್ಮ ಸಂಘ ಬದ್ಧವಾಗಿದೆ ಎಂದ ಅವರು, ಪತ್ರಕರ್ತರು ತಮ್ಮ ವೃತ್ತಿಯನ್ನು ದಂಧೆ ಮಾಡಲು, ಬ್ಲ್ಯಾಕ್ಮೇಲ್ ಮಾಡಲು ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ವ್ಯಕ್ತಿಗಳು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎಂದು ಸೂಚಿಸಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದೊಳಗೆ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಇಲ್ಲಿಗೆ ಭೇಟಿ ನೀಡಿದ್ದೇನೆ. ಪುತ್ತೂರು ಪತ್ರಕರ್ತರ ಸಂಘದ ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದ ಶಿವಾನಂದ ತಗಡೂರು ಅವರು, ಈ ಭಾಗದಲ್ಲಿ ಪ್ರಭಾವಿಯಾಗಿರುವ ಸುದ್ದಿ ಬಿಡುಗಡೆ ಪತ್ರಿಕೆ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿದೆ. ಹಾಗಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದರಲ್ಲದೆ ಎಲ್ಲಾ ಪತ್ರಕರ್ತರು ಒಗ್ಗಟ್ಟಿನಿಂದ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿ ಬಿಡುಗಡೆ ಪತ್ರಿಕೆ ರಾಷ್ಟ್ರಕ್ಕೇ ಮಾದರಿ-ಮದನ ಗೌಡ : ಕರ್ನಾಟಕ ಸರಕಾರದ ಪತ್ರಿಕಾ ಭವನ ನಿರ್ಮಾಣ ಸಮಿತಿ ಸದಸ್ಯ ಮದನಗೌಡರವರು ಮಾತನಾಡಿ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆ ರಾಷ್ಟ್ರಕ್ಕೇ ಮಾದರಿಯಾಗಿದೆ ಎಂದು ಶ್ಲಾಸಿದರು. ಎಲ್ಲಾ ಪತ್ರಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಿದೆ. ನಮ್ಮ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿಯಮದ ಪ್ರಕಾರ ಪುತ್ತೂರು ಪತ್ರಕರ್ತರ ಸಂಘಕ್ಕೂ ಚುನಾವಣೆ ನಡೆಯಬೇಕಿದೆ ಎಂದು ಹೇಳಿ ವಿವಿಧ ಸಲಹೆ ಸೂಚನೆ ನೀಡಿದ ಏಷ್ಯಾ ಪತ್ರಕರ್ತರ ಬಳಗದ ಪ್ರಭಾವಿ ಮುಖಂಡರೂ ಆಗಿರುವ ಹಾಸನದ ಮದನ ಗೌಡರವರು ಕೋವಿಡ್ ಸಮಯದ ಬಳಿಕ ಹಲವು ಪತ್ರಿಕೆಗಳು ಮುಚ್ಚಿವೆ, ಹಲವು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಇದೆಲ್ಲದರ ನಡುವೆ 35 ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆ ತನ್ನ ಕಾರ್ಯಶೈಲಿ ಮೂಲಕ ರಾಷ್ಟ್ರದಲ್ಲಿಯೇ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ನಾವು ಸುದ್ದಿ ಬಿಡುಗಡೆ ಪತ್ರಿಕೆಯ ಸಾಧನೆಯನ್ನು ಉದಾಹರಣೆಯಾಗಿ ನೀಡುತ್ತಿದ್ದೇವೆ ಎಂದರು.

ಪತ್ರಕರ್ತರಿಗೆ ನೆರವು- ಶ್ರೀನಿವಾಸ ನಾಯಕ್ ಇಂದಾಜೆ : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಅಕಾಲಿಕವಾಗಿ ನಿಧನರಾಗಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯ ನಾರಾಯಣ ನಾಯ್ಕ್ ಅಮ್ಮುಂಜ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯ ಖಾದರ್ ಸಾಹೇಬ್ ಕಲ್ಲುಗುಡ್ಡೆ ಅವರ ಮನೆಯವರಿಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಶ್ರಮದಿಂದ ಸರಕಾರ ಈಗಾಗಲೇ ತಲಾ ಐದು ಲಕ್ಷ ರೂ ಬಿಡುಗಡೆ ಮಾಡಿದೆ. ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಅವರ ಮನೆಯವರಿಗೂ ನೆರವು ನೀಡಲು ಪ್ರಯತ್ನ ನಡೆಯುತ್ತಿದೆ ಎಂದರು. ಪತ್ರಕರ್ತರೆಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸೋಣ ಎಂದು ಅವರು ಹೇಳಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಽಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಮತ್ತು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಕಾರ್ಯಕ್ರಮ ನಿರ್ವಹಿಸಿದರು.

ಪತ್ರಕರ್ತರಾದ ಕರುಣಾಕರ ರೈ ಸಿ.ಎಚ್, ಸಂತೋಷ್ ಕುಮಾರ್ ಶಾಂತಿನಗರ, ಹರೀಶ್ ಬಾರಿಂಜ, ಸಿದ್ದೀಕ್ ನೀರಾಜೆ, ದೀಪಕ್ ಉಬಾರ್, ಉಮಾಪ್ರಸಾದ್ ರೈ ನಡುಬೈಲು, ಲೋಕೇಶ್ ಬನ್ನೂರು,ಶೇಕ್ ಜೈನುದ್ದೀನ್ ನೆಲ್ಲಿಕಟ್ಟೆ, ಯತೀಶ್ ಉಪ್ಪಳಿಗೆ, ದಾಮೋದರ ದೊಂಡೋಲೆ, ಶಿವಪ್ರಸಾದ್ ರೈ ಪೆರುವಾಜೆ, ಸುಧಾಕರ ಪಡೀಲ್, ಗೌತಮ್ ಕುಮಾರ್, ಸಿದ್ದೀಕ್ ಕುಂಬ್ರ, ನಝೀರ್ ಕೊಯಿಲ, ಉದಯ ಕುಮಾರ್ ಯು.ಎಲ್, ಸರ್ವೇಶ್ ಕುಮಾರ್, ಮೇಘ ಪಾಲೆತ್ತಡಿ, ಶಶಿಧರ ರೈ ಕುತ್ಯಾಳ, ಸಂಶುದ್ದೀನ್ ಸಂಪ್ಯ, ಶ್ಯಾಮಸುದರ್ಶನ್ ಹೊಸಮೂಲೆ, ಗಣೇಶ್ ಕೆ, ರಾಜೇಶ್ ಪಟ್ಟೆ, ಅಜಿತ್ ಕುಮಾರ್, ಅನಿಶ್ ಕುಮಾರ್, ಉಮಾಶಂಕರ್ ಪಾಂಗಳಾಯಿ, ಕುಮಾರ್ ಕಲ್ಲಾರೆ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಪತ್ರಕರ್ತರ ಸಂಘದ ಚುನಾವಣೆಗೆ ಪುಷ್ಪರಾಜ್ ಬಿ.ಯನ್. ಉಸ್ತುವಾರಿ


ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆಯ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ನಮ್ಮ ಪತ್ರಕರ್ತರ ಸಂಘದ ಬೈಲಾದ ಪ್ರಕಾರ ಚುನಾವಣೆ ನಡೆಸಲಾಗುವುದು, ಅದರ ಮುಂಚಿತವಾಗಿ ಚುನಾವಣೆಗೆ ಉಸ್ತುವಾರಿ ಮತ್ತು ಚುನಾವಣಾಽಕಾರಿ ನೇಮಕ ಮಾಡಲಾಗುವುದು ಎಂದು ಹೇಳಿದ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪುತ್ತೂರು ಪತ್ರಕರ್ತರ ಸಂಘದ ಚುನಾವಣೆಗೆ ಉಸ್ತುವಾರಿಯನ್ನಾಗಿ ಪುಷ್ಪರಾಜ್ ಬಿ.ಯನ್. ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿದರು. ಚಪ್ಪಾಳೆಯ ಮೂಲಕ ಪತ್ರಕರ್ತರು ಪುಷ್ಪರಾಜ್ ಅವರ ನೇಮಕವನ್ನು ಬೆಂಬಲಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಽಕಾರಿಯಾಗಿರುವ ಪುಷ್ಪರಾಜ್ ಬಿ.ಯನ್. ಅವರು ಮೂಲತಃ ರಾಮಕುಂಜ ನಿವಾಸಿಯಾಗಿದ್ದು ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀ- ಆಗಿದ್ದಾರೆ. ಈ ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾಗಿದ್ದ ಪುಷ್ಪರಾಜ್ ಅವರು ಆ ಸಂದರ್ಭದಲ್ಲಿ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು.

ಅಜಿತ್ ಅಳಲು!

ಇತ್ತೀಚೆಗೆ ಉಪ್ಪಿನಂಗಡಿ ಕಾಲೇಜಿನಲ್ಲಿ ಉಂಟಾಗಿದ್ದ ಹಿಜಾಬ್ ಕುರಿತ ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲದೆ, ಪತ್ರಕರ್ತರ ವಿರುದ್ಧವೇ ಕೇಸು ದಾಖಲಾಗಿದೆ. ಈ ಪ್ರಕರಣದಲ್ಲಿ ಪತ್ರಕರ್ತರಿಗೆ ನ್ಯಾಯ ದೊರಕಿಲ್ಲ. ಆದ್ದರಿಂದ ಪತ್ರಕರ್ತರ ಸಂಘ ಸೂಕ್ತವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿ ಉದಯ ಕುಮಾರ್ ಯು.ಎಲ್. ಅವರು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಮನವಿ ಸಲ್ಲಿಸಿದರು. ಸಂಬಂಧಿಸಿದವರ ಗಮನಕ್ಕೆ ತರುವುದಾಗಿ ಶಿವಾನಂದ ತಗಡೂರು ತಿಳಿಸಿದರು. ಈ ವೇಳೆ ಮಾತನಾಡಿದ ಪುತ್ತೂರು ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಅಜಿತ್ ಕುಮಾರ್ ಅವರು ಉಪ್ಪಿನಂಗಡಿಯಲ್ಲಿ ನಮ್ಮ ಮೇಲೆ ಕೇಸು ದಾಖಲಾದಾಗ ಸುದ್ದಿ ಬಿಡುಗಡೆ ಪತ್ರಿಕೆಯವರು ನನ್ನ -ಟೋ ಹಾಕಿ ಆರೋಪಿ ಎಂದು ಬರೆದಿದ್ದಾರೆ ಎಂದು ಅಳಲು ತೋಡಿಕೊಂಡರು. ಇಂತಹ ವಿಚಾರದ ಬಗ್ಗೆ ಮತ್ತೆ ಮಾತಾಡುವ ಎಂದು ಶಿವಾನಂದ ತಗಡೂರು ಹೇಳಿದರು. ಬಳಿಕ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತಾದರೂ ಅಜಿತ್ ಕುಮಾರ್ ಪ್ರಸ್ತಾಪಿಸಿದ ವಿಷಯ ಮತ್ತೆ ಪ್ರಸ್ತಾಪ ಆಗಲಿಲ್ಲ.

ಅನೀಶ್ ಕುಮಾರ್‌ಗೆ ಸದಸ್ಯತ್ವ ನಿರಾಕರಣೆ


ದ.ಕ. ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿದ್ದರೂ ತನಗೆ ಸದಸ್ಯತ್ವ ನಿರಾಕರಿಸಲಾಗಿದೆ ಎಂದು ಅಬೂಬಕ್ಕರ್ ಸಿದ್ದೀಕ್ ಕುಂಬ್ರ ಅವರು ಸಭೆಯಲ್ಲಿ ಗಮನ ಸೆಳೆದರು. ಹದಿನೈದು ವರ್ಷದಿಂದ ಪುತ್ತೂರಿನಲ್ಲಿ ಪತ್ರಕರ್ತನಾಗಿದ್ದೇನೆ, ಮೂರು ಸಲ ಜಿಲ್ಲಾ ಸಂಘಕ್ಕೆ ಸದಸ್ಯತ್ವ ಕೇಳಿ ಅರ್ಜಿ ಸಲ್ಲಿಸಿದ್ದೇನೆ. ಪತ್ರಿಕೆಯ ಸಂಪಾದಕರ ಪತ್ರ ಮತ್ತು ಇತರ ದಾಖಲೆ ಎಲ್ಲಾ ನೀಡಿದರೂ ಸದಸ್ಯತ್ವ ನಿರಾಕರಿಸಲು ಕಾರಣ ಏನು ಎಂದು ಸಿದ್ದೀಕ್ ಕುಂಬ್ರ ಪ್ರಶ್ನಿಸಿದರು. ಈ ಬಗ್ಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ತಾಲೂಕು ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರೊಂದಿಗೆ ಚರ್ಚೆ ನಡೆಸಿದರು. ಬಳಿಕ ತಮಗೆ ಸದಸ್ಯತ್ವ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಾನಂದ ತಗಡೂರು ಅವರು ಸಿದ್ದೀಕ್ ಕುಂಬ್ರಗೆ ತಿಳಿಸಿದರು. ಈ ವೇಳೆ ಎದ್ದು ನಿಂತ ಪುತ್ತೂರು ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿದ ಕಾರಣಕ್ಕಾಗಿ ಪುತ್ತೂರು ಪತ್ರಕರ್ತರ ಸಂಘದಿಂದ ಉಚ್ಚಾಟಿಸಲ್ಪಟ್ಟಿದ್ದ ಮತ್ತು ಪತ್ರಿಕಾ ಭವನ ಪ್ರವೇಶಕ್ಕೆ ನಿರ್ಬಂಽಸಲ್ಪಟ್ಟಿದ್ದ ಹಾಗೂ ಪತ್ರಕರ್ತ ವೃತ್ತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಎದುರಿಸುತ್ತಿರುವ ಅನೀಶ್ ಕುಮಾರ್ ಅವರು ನನಗೂ ಜಿಲ್ಲಾ ಸಂಘದ ಸದಸ್ಯತ್ವ ನೀಡಿಲ್ಲ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ನಮ್ಮ ಬೈಲಾದ ಪ್ರಕಾರ ಎಲ್ಲಾ ಪತ್ರಕರ್ತರಿಗೂ ಸದಸ್ಯತ್ವ ನೀಡಲಾಗಿದೆ. ಅನೀಶ್ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಜತೆ ನಾವು ಮಾತನಾಡಿದ್ದೇವೆ. ತಮ್ಮ ಸಂಸ್ಥೆಗೆ ನಿಯಮ ಪ್ರಕಾರ ನಿಗದಿತ ಸಂಖ್ಯೆಯ ಸದಸ್ಯತ್ವ ನೀಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ಅನೀಶ್ ಕುಮಾರ್ ಅವರ ಅರ್ಜಿಯೂ ಇದೆ ಎಂದು ಹೇಳಿದ್ದೇವೆ. ಆಗ ಅವರ ಮಾಧ್ಯಮದ ಮುಖ್ಯಸ್ಥರು ಅನೀಶ್ ಕುಮಾರ್ ಅವರಿಗೆ ಸದಸ್ಯತ್ವ ಬೇಡ ಎಂದು ಹೇಳಿದ್ದಾರೆ. ಹಾಗಾಗಿ ಸದಸ್ಯತ್ವ ನೀಡಿಲ್ಲ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಸುದ್ದಿ, ಕಹಳೆ ಚಾನೆಲ್ ಕಛೇರಿಗೆ ಭೇಟಿ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರಿಕಾ ಭವನದ ಸಭೆಯ ಬಳಿಕ ಸುದ್ದಿ ನ್ಯೂಸ್ ಚಾನೆಲ್ ಕಛೇರಿಗೆ ಭೇಟಿ ನೀಡಿದರು. ಈ ವೇಳೆ ಅವರ ಚಿಟ್ ಚಾಟ್ ನಡೆಸಲಾಯಿತು. ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಚಿಟ್ ಚಾಟ್ ನಡೆಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿಇಓ ಸೃಜನ್ ಊರುಬೈಲು, ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಪ್ರಧಾನ ನಿರೂಪಕ ಗೌತಮ್ ಕುಮಾರ್ ಅವರು ಶಿವಾನಂದ ತಗಡೂರು, ಮದನ ಗೌಡ, ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರನ್ನು ಕಛೇರಿಯಲ್ಲಿ ಸ್ವಾಗತಿಸಿದರು. ಶಿವಾನಂದ ತಗಡೂರು ನೇತೃತ್ವದ ತಂಡ ಕಹಳೆ ನ್ಯೂಸ್‌ನ ಕಚೇರಿಗೂ ಭೇಟಿ ನೀಡಿದರು.

LEAVE A REPLY

Please enter your comment!
Please enter your name here