ಬೆಟ್ಟಂಪಾಡಿ: ಸೋಣ (ಸಿಂಹ ಮಾಸ) ಶನಿವಾರದ ವಿಶೇಷ ಪೂಜೆಯು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದು, ಸೆ. 17 ರಂದು ಕೊನೆಯ ಸೋಣ ಶನಿವಾರದ ವಿಶೇಷ ಪೂಜೆ ಮಧ್ಯಾಹ್ನ ನಡೆಯಲಿದೆ. ಇದೇ ವೇಳೆ ಬಲಿವಾಡು ಕೂಟವೂ ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.
ಸೋಣ ಶನಿವಾರ ಮಹತ್ವ
ಶ್ರಾವಣ ಶನಿವಾರ ಮೃತ್ಯುಂಜಯನಾದ ಶಿವನ ವಿಶೇಷ ಆರಾಧನೆಯಿಂದ ದಿವ್ಯಾನುಗ್ರಹ ಪ್ರಾಪ್ತಿಯಾಗುತ್ತದೆ ಮತ್ತು ಶನಿ ದೋಷಗಳಿಂದ ವಿಮುಕ್ತಿ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.ಹಾಗಾಗಿ ಶ್ರಾವಣ ಮಾಸವನ್ನು ದೇವರ ತಿಂಗಳು ಎಂದೇ ಕರೆಯಲಾಗುತ್ತದೆ. ಈ ತಿಂಗಳಲ್ಲಿ ಪ್ರತಿದಿನವೂ ವಿಶೇಷ ಆರಾಧನೆ, ಪೂಜೆ ಪುನಸ್ಕಾರಗಳಿಗೆ ಮೀಸಲಿರಿಸಿದ ದಿನಗಳಾಗಿವೆ. ಹೆಚ್ಚಾಗಿ ಶುಭ ಕಾರ್ಯಗಳಿಗೆ ಈ ತಿಂಗಳಲ್ಲಿ ದಿನಮುಹೂರ್ತ ನೋಡಬೇಕಿಲ್ಲ ಎನ್ನುವ ಮಾತು ಪರಿಪಾಠದಲ್ಲಿದೆ. ಈ ತಿಂಗಳಲ್ಲಿ ಬರುವ ಶನಿವಾರಗಳಂದು ಮಾಡುವ ವಿಶೇಷ ಪೂಜೆಗಳಿಗೆ ಶನಿ, ಹನುಮಂತ ಮತ್ತು ಶಿವನ ವಿಶೇಷ ಕಾರುಣ್ಯ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ತುಳುನಾಡಿನ ಹಬ್ಬ ಸಂಪ್ರದಾಯಗಳಲ್ಲಿ ಸೋಣ ತಿಂಗಳಿಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಕೃಷಿಕಾಯಕ ಸೇರಿದಂತೆ ವರ್ಷದ ಮೊದಲ ಕೆಲಸ ಕಾರ್ಯಗಳನ್ನು ಸೋಣ ತಿಂಗಳಲ್ಲಿ ಮಾಡುವುದು ರೂಢಿ. ಇಡೀ ತಿಂಗಳು ದೇವರ ಆರಾಧನೆಯೊಂದಿಗೆ ವರ್ಷದ ಸಕಲ ಕಾರ್ಯಗಳು ಸಿದ್ದಿಯಾಗಲಿ ಎಂಬ ಆಶಯದೊಂದಿಗೆ ಸೋಣ ವೃತಾಚರಣೆ ಮಾಡಲಾಗುತ್ತಿದೆ. ಸೋಣ ಶನಿವಾರ ವೃತಧಾರಿಗಳಾಗಿಯೂ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಶನಿ ದೋಷ ದುರಿತಗಳಿಂದ ದೂರವಾಗಲು ಶನಿ ಅಧಿಪತಿಯಾದ ಮೃತ್ಯುಂಜಯನ ಆರಾಧನೆ ಶಿವಾಲಯಗಳಲ್ಲಿ ನಡೆಯುತ್ತದೆ.
ವಿಶೇಷ ಯಕ್ಷಗಾನ ಕೂಟ
ಸೋಣ ಶನಿವಾರದ ಅಂಗವಾಗಿ ವಿಶೇಷ ಯಕ್ಷಗಾನ ತಾಳಮದ್ದಳೆ ‘ಸುಗ್ರೀವ ಸಖ್ಯ – ವಾಲಿಮೋಕ್ಷ’ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ. ಅತಿಥಿ ಕಲಾವಿದರಾಗಿ ಪ್ರಸಿದ್ದ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ, ಪ್ರಶಾಂತ್ ರೈ ಮುಂಡಾಳ, ಗಣೇಶ್ ಪಾಲೆಚ್ಚಾರು, ಭಾಸ್ಕರ ಶೆಟ್ಟಿ, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಲಕ್ಷ್ಮೀಶ ಬೇಂಗ್ರೊಡು ಭಾಗವಹಿಸಲಿದ್ದಾರೆ.