ಪುತ್ತೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಮನ ಗೆದ್ದಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ 4ನೇ ಸಂಚಿಕೆಗೆ ಕಡಬ ತಾಲೂಕಿನ ಕುಂತೂರುಪದವಿನ ದೀಕ್ಷಿತ್ ಕುಮಾರ್ ಆಯ್ಕೆಗೊಂಡಿದ್ದಾರೆ.
ಝೀ ಕನ್ನಡ ವಾಹಿನಿಯಲ್ಲಿ ಪ್ರತೀ ಶನಿವಾರ ಮತ್ತು ಆದಿತ್ಯವಾರ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ೩ನೇ ಸಂಚಿಕೆ ಮುಕ್ತಾಯಗೊಂಡು ೪ನೇ ಸಂಚಿಕೆ ಸೆ.17ರಿಂದ ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ 9ರಿಂದ ಪ್ರಸಾರಗೊಳ್ಳಲಿದೆ. ಈಗಾಗಲೇ ಕರಾವಳಿಯ ಹಲವು ಪ್ರತಿಭೆಗಳು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಿ ಕೋಟ್ಯಾಂತರ ವೀಕ್ಷಕರ ಮನಗೆದ್ದಿದ್ದಾರೆ. ಇದೀಗ ಈ ಸಾಲಿನಲ್ಲಿ ಮತ್ತೆರಡು ಕರಾವಳಿ ಪ್ರತಿಭೆಗಳು ಎಂಟ್ರಿ ಕೊಟ್ಟದ್ದು ಅದರಲ್ಲಿ ಕಡಬ ತಾಲೂಕಿನ ದೀಕ್ಷಿತ್ ಕುಮಾರ್ ಒಬ್ಬರಾಗಿದ್ದಾರೆ.
ದೀಕ್ಷಿತ್ ಕುಮಾರ್ : ಕಡಬ ತಾಲೂಕಿನ ಕುಂತೂರುಪದವು ಬೀರಂತಡ್ಕ ನಿವಾಸಿ ದಿ.ಕುಶಾಲಪ್ಪ ಗೌಡ ಮತ್ತು ದಮಯಂತಿ ದಂಪತಿ ಪುತ್ರರಾದ ಇವರು ಇಡಾಲ, ಪಡುಬೆಟ್ಟು ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ರಾಮಕುಂಜದಲ್ಲಿ ಪಿಯುಸಿ ಶಿಕ್ಷಣ ಹಾಗೂ ಸುಬ್ರಹ್ಮಣ್ಯ ಪ್ರ.ದ.ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಬಾಲ್ಯದಲ್ಲಿಯೇ ನಟನೆಯ ಬಗ್ಗೆ ಆಸಕ್ತಿ ಹೊಂದಿರುವ ಇವರು ತುಳುನಾಟಕ, ಮಿಮಿಕ್ರಿಯಲ್ಲಿ ನಟನೆ ಮಾಡಿದ್ದರು. ಪದವಿ ಕಾಲೇಜಿನಲ್ಲಿ ಕುಸುಮ ಸಾರಂಗ ರಂಗಭೂಮಿ ನಾಟಕ ತಂಡ ಹಾಗೂ ಸಂಸ್ಕೃತಿ ಸೌರಭ ತಂಡದಲ್ಲಿ ಮಿಮಿಕ್ರಿ, ಡ್ಯಾನ್ಸ್ ಕಲಾವಿದರಾಗಿ ಹಲವು ನಾಟಕ, ಮಿಮಿಕ್ರಿ ಶೋದಲ್ಲಿ ಅಭಿನಯಿಸಿದ್ದಾರೆ. ಮುತ್ತೂಟ್ ಫಿನ್ ಕಾರ್ಫ್‌ನ ಸುಳ್ಯ ಶಾಖೆಯಲ್ಲಿ ಉದ್ಯೋಗದಲ್ಲಿದ್ದ ಇವರು ಬಳಿಕ ಬೆಂಗಳೂರಿನಲ್ಲಿ ಐಟಿ ಕಛೇರಿಯಲ್ಲಿ ಉದ್ಯೋಗದಲ್ಲಿದ್ದರು. ಕಾಮಿಡಿ ಕಿಲಾಡಿಗಳು ತಂಡಕ್ಕೆ ಆಯ್ಕೆಯಾದ ಬಳಿಕ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
ಆಯ್ಕೆ : ಝೀ ಕನ್ನಡ ಕನ್ನಡ ವಾಹಿನಿಯು ರಾಜ್ಯಾದ್ಯಂತ ಸುಮಾರು 16000 ಜನರನ್ನು ಆಡಿಷನ್ ಮಾಡಿದ್ದು ಮೂರು ಸುತ್ತಿನಲ್ಲಿ ಆಯ್ಕೆ ನಡೆಸಿದೆ. ಮಂಗಳೂರಿನಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಎರಡು ಸುತ್ತಿನಲ್ಲಿ ಆಯ್ಕೆ ನಡೆಸಿ ಅಂತಿಮವಾಗಿ 16 ಜನರನ್ನು 4ನೇ ಸೀಸನ್‌ಗೆ ಆಯ್ಕೆ ಮಾಡಿದೆ. 16 ಜನರಲ್ಲಿ ಒಬ್ಬರು ಮಂಗಳೂರಿನವರು. ಇನೊಬ್ಬರು ದೀಕ್ಷಿತ್ ಕುಮಾರ್.
ತೀರ್ಪುಗಾರರು : 4ನೇ ಸೀಸನ್‌ನಲ್ಲಿಯೂ ಮಾಸ್ಟರ್ ಆನಂದ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು ನವರಸ ನಾಯಕ ಜಗ್ಗೇಶ್, ಕ್ರೇಜಿ ಕ್ವೀನ್ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ತೀರ್ಪುಗಾರರಾಗಿದ್ದಾರೆ.
ಮೊದಲ ಎಪಿಸೋಡ್‌ನ ರೆಕಾರ್ಡಿಂಗ್ ನಡೆದಿದ್ದು ಸೆ.17ರಿಂದ ಎರಡು ವಾರದ ಪ್ರತೀ ಶನಿವಾರ ಹಾಗೂ ಆದಿತ್ಯವಾರ ನಾಲ್ಕು ಸಂಚಿಕೆಯಲ್ಲಿ ಪ್ರಸಾರಗೊಳ್ಳಲಿದೆ. ಇದು ಪ್ರೀಮಿಯರ್ ಶೋ ಆಗಿದ್ದು ತಲಾ ನಾಲ್ಕು ಜನರಂತೆ 16 ಜನ ಕಲಾವಿದರು ತಮ್ಮ ವೈಯುಕ್ತಿಕ ಪ್ರತಿಭೆ ಹೊರಹೊಮ್ಮಿಸಲಿದ್ದಾರೆ.