





ವೈಚಾರಿಕ ಪುಸ್ತಕಗಳ ಪ್ರಕಟಣೆ ನಮ್ಮ ಪ್ರಕಾಶನದ ಧ್ಯೇಯ-ಹರೀಶ್ ಕುಮಾರ್
ಪುಸ್ತಕವು ಜ್ಞಾನ ಮತ್ತು ಸೃಜನಾತ್ಮಕತೆ ಬೆಳೆಸುತ್ತವೆ-ಡಾ||ಆಂಟನಿ ಪ್ರಕಾಶ್ ಮೊಂತೆರೋ


ಪುತ್ತೂರು : ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು ಇಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ನವಕರ್ನಾಟಕ ಪ್ರಕಾಶನ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025ರ ಅಂಗವಾಗಿ ಕಾಲೇಜಿನ ಸಿಲ್ವರ್ ಜುಬಿಲಿ ಸ್ಮಾರಕ ಸಭಾಂಗಣದಲ್ಲಿ ನ.3ರಿಂದ 7ರವರೆಗೆ ನಡೆಯುವ “ಪುಸ್ತಕ ಪ್ರದರ್ಶನ-ಮಾರಾಟ ಮೇಳ”ದ ಉದ್ಘಾಟನಾ ಕಾರ್ಯಕ್ರಮ ನಡೆಯತು.






ಕಾಲೇಜಿನ ಪ್ರಾಚಾರ್ಯರಾದ ಡಾ||ಆಂಟನಿ ಪ್ರಕಾಶ್ ಮೊಂತೆರೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪುಸ್ತಕಗಳು ನಮ್ಮ ಜೀವನದ ಶಾಶ್ವತ ಸಂಗಾತಿಗಳು. ಅವು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸೃಜನಾತ್ಮಕತೆಯನ್ನು ಬೆಳೆಸುತ್ತವೆ. ತ್ವರಿತ ಮಾಹಿತಿ ಯುಗದಲ್ಲಿ ಪುಸ್ತಕ ಪ್ರದರ್ಶನಗಳು ಮುದ್ರಿತ ಜ್ಞಾನದ ಅವಶ್ಯಕತೆಯನ್ನು ನಮಗೆ ನೆನಪಿಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮತ್ತು ಬರೆಯುವ ಕ್ರಿಯಾಶೀಲತೆಯನ್ನು ಬೆಳೆಸುವ ಸದುದ್ದೇಶದಿಂದ ಸಂತ ಫಿಲೋಮಿನಾ ಕಾಲೇಜಿನಲ್ಲಿ ನವೆಂಬರ್ ತಿಂಗಳನ್ನು ಗ್ರಂಥಾಲಯ ತಿಂಗಳಾಗಿ ಘೋಷಿಸಿದ್ದೇವೆ. ಆ ಪ್ರಯುಕ್ತ ಐದು ದಿವಸ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ನವಕರ್ನಾಟಕ ಪ್ರಕಾಶನ, ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಅಲ್ಲದೆ ಪುಸ್ತಕ ನೋಡುವುದು ಮಾತ್ರವಲ್ಲದೆ ಖರೀದಿಸಿ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ನವಕರ್ನಾಟಕ ಪ್ರಕಾಶನ, ಮಂಗಳೂರು ಶಾಖೆಯ ವ್ಯವಸ್ಥಾಪಕ ಹರೀಶ್ ಕುಮಾರ್ ಮಾತನಾಡಿ ನವಕರ್ನಾಟಕ ಪ್ರಕಾಶನದ ಉದ್ದೇಶವನ್ನು ವಿವರಿಸಿ ಪುಸ್ತಕದ ಮೂಲಕ ಮಾನವ ಕುಲದ ಸೇವೆ ಸಾಧ್ಯ. ವೈಚಾರಿಕ ಪುಸ್ತಕಗಳ ಪ್ರಕಟಣೆಯೇ ನಮ್ಮ ಪ್ರಕಾಶನದ ಧ್ಯೇಯ. ಗುಣಮಟ್ಟದ ಪುಸ್ತಕಗಳನ್ನು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ಇಂತಹ ಪ್ರದರ್ಶನಗಳು ಓದುಗರ ಮತ್ತು ಲೇಖಕರ ನಡುವಿನ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಇಂದಿನ ಮೊಬೈಲ್ ಯುಗದಿಂದ ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕ ಓದಿದರೆ ಮುಂದೆ ನಿಮಗೂ ಸಾಹಿತಿಯಾಗುವ ಅವಕಾಶವಿರುತ್ತದೆ ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ|ವಿಜಯ ಕುಮಾರ್ ಮೊಳೆಯಾರ್, ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಹರಿನಾರಾಯಣ ಮಾಡಾವು, ನಿವೃತ್ತ ಹಿಂದಿ ಉಪನ್ಯಾಸಕ ಪ್ರೊ. ವಿಷ್ಣು ಭಟ್, ಕಾಲೇಜಿನ ಬೋಧಕ ವೃಂದ, ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು, ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಮುಖ್ಯ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಜಿ. ಸ್ವಾಗತಿಸಿ ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ವಂದಿಸಿದರು. ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.
ನ.7ರವರೆಗೆ ಮೇಳ ನಡೆಯಲಿದ್ದು, ಸಾಹಿತ್ಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ, ತಂತ್ರಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಮೇಳದಲ್ಲಿ ಲಭ್ಯವಿದೆ. ಪುಸ್ತಕ ಖರೀದಿಯಲ್ಲಿ ಶೇ.10 ರಿಯಾಯಿತಿ ದರ ಲಭ್ಯವಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದು ಎಂದು ನವಕರ್ನಾಟಕ ಪ್ರಕಾಶನ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಪ್ರಕಟಣೆ ತಿಳಿಸಿದೆ.


            







