ಬೆಂಗಳೂರು:ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಉದ್ಯೋಗವನ್ನು ಭರ್ತಿ ಮಾಡುವಲ್ಲಿ ವಿಫಲವಾಗಿದ್ದು, ಈಗಾಗಲೇ ನಡೆದಿರುವ ಭರ್ತಿ ಪ್ರಕ್ರಿಯೆಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ಬೆಳಕಿಗೆ ಬಂದಿರುವುದನ್ನು ವಿರೋಧಿಸಿ, ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ’ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಒಕ್ಕೂಟ’ದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’ ಎಂದು ಕವರ್‌ನಲ್ಲಿ ಬರೆದು ವಿಭಿನ್ನವಾಗಿ ಪ್ರತಿಭಟಿಸಿದರು. ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಖಾಲಿಯಿದ್ದರೂ ಸರ್ಕಾರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ.ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ನಡೆದಿರುವ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ಅಕ್ರಮಗಳ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳದ ಕಾರಣಕ್ಕೆ ಪದವೀಧರರು ಉದ್ಯೋಗದಿಂದ ವಂಚಿತರಾಗುವ ಸ್ಥಿತಿಯಿದೆ. ಕೆಪಿಎಸ್‌ಸಿ, ಕೆಎಸ್‌ಪಿ, ಕೆಇಎ ನಡೆಸುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಅಽಸೂಚನೆಯ ಜತೆಗೆ ಪ್ರಕಟಿಸಬೇಕು.ಯುಪಿಎಸ್‌ಸಿ ಮಾದರಿಯಲ್ಲಿ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆ ಶೀಘ್ರವೇ ಪೂರ್ಣಗೊಳಿಸಿ, 545 ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಬೇಕು. ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಯ ಅರ್ಹತಾ ವಯೋಮಿತಿ ಹೆಚ್ಚಿಸಬೇಕು. ಕೆಪಿಟಿಸಿಎಲ್ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಸ್ಥಾನ ಮಾದರಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಭವ್ಯಾ ನರಸಿಂಹಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಪದವೀಧರರು ಪಾಲ್ಗೊಂಡಿದ್ದರು.