ಪುತ್ತೂರು : ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಪುತ್ತೂರಿನ ಬಹುಭಾಷಾ ಮಕ್ಕಳ ಸಾಹಿತಿ, ಶಿಶು ಶಿಕ್ಷಣ ತಜ್ಞ, ಸಂದರ್ಶಕ ಗೌರವ ಶಿಕ್ಷಕ ‘ಉಲ್ಲಾಸಣ್ಣ’ ಎಂದೇ ಚಿರಪರಿಚಿತರಾಗಿರುವ ಯು.ಕೆ.ಪೈರವರು ಆಯ್ಕೆಯಾಗಿದ್ದಾರೆ.
ಮಕ್ಕಳ ತುಳು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.24ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ| ವೀರೇಂದ್ರ ಹೆಗಡೆ, ಡಾ|ಮೋಹನ ಆಳ್ವ, ಮೂಡಬಿದ್ರೆ ಮಟ್ಟೂರು ರತ್ನಾಕರ ಹೆಗ್ಡೆ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಸಮ್ಮುಖದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪಲಿಮಾರು ಕೃಷ್ಣ ಪೈ ಮತ್ತು ರಾಧಾ ಪೈ ದಂಪತಿ ಪುತ್ರರಾಗಿರುವ ಯು.ಕೆ.ಪೈಯವರು ವಿಜ್ಞಾನ ಪಧವೀಧರರಾಗಿದ್ದು ಕೊಂಕಣಿ, ತುಳು, ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ 180ಕ್ಕೂ ಮಿಕ್ಕಿ ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ. ಚಿತ್ರರಚನೆ, ಚಿತ್ರಾಕ್ಷರ, ಪದಬಂಧ ಇತ್ಯಾದಿ ಅನೇಕ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಕಳೆದ ಮೂರು ದಶಕಗಳಿಂದ ಜಿಲ್ಲೆಯ ಹಲವು ಶಾಲೆಗಳಿಗೆ ಭೇಟಿ ನೀಡಿ ಅಭಿನಯಗೀತೆ, ಸುಲಭಚಿತ್ರಗಳನ್ನು ಕಲಿಸಿಕೊಟ್ಟಿದ್ದಾರೆ. ನಾಡಗೀತೆ, ರಾಷ್ಟ್ರನಾಯಕರ ಕುರಿತ ಹಾಡು, ಆರೋಗ್ಯ ಸೂತ್ರ, ರಸ್ತೆ ಸುರಕ್ಷತಾ ಮಾರ್ಗದರ್ಶಿ ಇತ್ಯಾದಿ 150 ಪ್ರಕಾರದ 15 ಲಕ್ಷಕ್ಕೂ ಮಿಕ್ಕಿ ಕಿರುಕೃತಿಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.