- ಸ್ವಚ್ಛತೆಯನ್ನು ಕೂಡ ಭಗವಂತನ ಕೆಲಸ ಎಂದು ಭಾವಿಸಬೇಕು: ಮಠಂದೂರು
ಪುತ್ತೂರು: ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಆರೋಗ್ಯ ಮತ್ತು ನೆಮ್ಮದಿ ಇರುತ್ತದೆ. ಸ್ವಚ್ಛತೆ ಕೂಡ ಭಗವಂತನ ಕೆಲಸ ಎಂಬ ಭಾವನೆ ನಮ್ಮಲ್ಲಿ ಬರಬೇಕು, ಸ್ವಚ್ಛತೆ ಒಬ್ಬ ವ್ಯಕ್ತಿ, ಮನೆ, ಕುಟುಂಬದಿಂದ ಆರಂಭವಾಗಿ ಗ್ರಾಮಕ್ಕೆ ಬರಬೇಕು ಆದ್ದರಿಂದಲೇ ಸ್ವಚ್ಚತೆ ಪ್ರತಿ ಮನೆಯಿಂದ ಅಲ್ಲಿರುವ ವ್ಯಕ್ತಿಯಿಂದ ಆರಂಭವಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು ಮತ್ತು ಒಳಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸುಮಾರು ೧೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಸ್ವಚ್ಛ ಸಂಕೀರ್ಣ ಕಟ್ಟಡವನ್ನು ಗ್ರಾಮದ ಕೈಕಾರದಲ್ಲಿ ಸೆ.೨೬ ರಂದು ದೀಪ ಬೆಳಗಿಸಿ, ಹಣ್ಣಿನ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸ್ವಚ್ಛತೆ ನಮ್ಮೆಲ್ಲರ ಜವಬ್ದಾರಿಯಾಗಿದ್ದು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಆರೋಗ್ಯ ಮತ್ತು ಪರಿಸರವನ್ನು ಕೂಡ ಕಾಪಾಡಿಕೊಳ್ಳಬಹುದು ಎಂದ ಶಾಸಕರು, ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಗ್ರಾಮದ ಪ್ರತಿಯೊಬ್ಬರು ಸಹಕಾರ ನೀಡಬೇಕು, ಕೆದಂಬಾಡಿಯಲ್ಲಿ ಎಂ.ಆರ್.ಎಫ್ ಘಟಕ ನಿರ್ಮಾಣವಾಗುತ್ತಿದ್ದು ಮೂರು ತಾಲೂಕುಗಳ ಕಸ ವಿಲೇವಾರಿ ಈ ಘಟಕದಲ್ಲಿ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕರಿಂದ ಸ್ವಚ್ಛತೆಯ ಬಗ್ಗೆ ಇರುವ ಕರಪತ್ರದ ಬಿಡುಗಡೆ, ಅನುಗ್ರಹ ಸಂಜೀವಿನಿ ಒಕ್ಕೂಟಕ್ಕೆ ಒಪ್ಪಂದ ಪತ್ರದ ಹಸ್ತಾಂತರ ಹಾಗೂ ಸ್ವಚ್ಛ ವಾಹಿನಿ ವಾಹನದ ಕೀ ಹಸ್ತಾಂತರ ಮತ್ತು ಕಸ ತುಂಬಿಸುವ ಕೈಚೀಲದ ವಿತರಣೆ ನಡೆಯಿತು.
ಪ್ರಜಾಪ್ರಭುತ್ವದ ಯಶಸ್ಸು ಇರುವುದು ಜನರ ಸಹಭಾಗಿತ್ವದಲ್ಲಿ: ಪ್ರತಾಪಸಿಂಹ ನಾಯಕ್
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್‌ರವರು ಫಲಕ ಅನಾವರಣಗೊಳಿಸಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಇರುವುದು ಜನರ ಸಹಭಾಗಿತ್ವದಲ್ಲಿ, ಗ್ರಾಮದ ಪ್ರತಿಯೊಂದು ಕಾರ್ಯಕ್ರಮ ಕೂಡ ಅದು ಜನರ, ಗ್ರಾಮಸ್ಥರ ಕಾರ್ಯಕ್ರಮವಾಗಬೇಕು, ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅತೀ ಅಗತ್ಯ ಎಂದರು. ಸ್ವಚ್ಛತೆಯ ಬಗ್ಗೆ ಪ್ರಧಾನಿ ಮೋದಿಯವರು ದೇಶಕ್ಕೆ ನೀಡಿದ ಸಂದೇಶವನ್ನು ನಾವು ತಿಳಿದುಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಸ್ವಚ್ಛ ಗ್ರಾಮದತ್ತ ಹೆಜ್ಜೆ ಹಾಕಲು ಹೊರಟಿರುವ ಒಳಮೊಗ್ರು ಗ್ರಾಮ ಪಂಚಾಯತ್ ಯಶಸ್ವಿಯನ್ನು ಕಾಣಲಿ ಇದಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರ ಕೊಡಬೇಕು ಎಂದು ಹೇಳಿ ಶುಭ ಹಾರೈಸಿದರು.
ಸ್ವಚ್ಛ ಗ್ರಾಮದ ಕನಸಿಗೆ ಗ್ರಾಮಸ್ಥರ ಸಹಕಾರ ಮುಖ್ಯ: ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಒಳಮೊಗ್ರು ಗ್ರಾಮವನ್ನು ಸ್ವಚ್ಛ ಗ್ರಾಮ ಮತ್ತು ಭ್ರಷ್ಟಚಾರ ಮುಕ್ತ ಗ್ರಾಮವನ್ನಾಗಿಸುವ ಕನಸು ಇದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯ. ಈಗಾಗಲೇ ಸ್ವಚ್ಛ ಸಂಕೀರ್ಣ ಕಟ್ಟಡ ನಿರ್ಮಾಣಗೊಂಡಿದ್ದು ಹಸಿ ಕಸ ವಿಲೇವಾರಿ ಕೂಡ ಮುಂದಿನ ದಿನಗಳಲ್ಲಿ ಹಂತಹಂತವಾಗಿ ನಡೆಯಲಿದೆ ಎಂದರು. ಇಲ್ಲಿ ಸಂಗ್ರಹವಾದ ಕಸವನ್ನು ಕೆದಂಬಾಡಿಯಲ್ಲಿ ನಿರ್ಮಾಣವಾಗಲಿರುವ ಎಂ.ಆರ್.ಎಫ್ ಘಟಕಕ್ಕೆ ರವಾನೆ ಮಾಡಲಿದ್ದೇವೆ. ಒಟ್ಟು ೪ ಮಂದಿಗೆ ಕೆಲಸ ನೀಡಿದ್ದೇವೆ. ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕೇಳಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ತಾಪಂ ನರೇಗಾದ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ತಾಪಂ ಯೋಜನಾಧಿಕಾರಿ ಸುಕನ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರೂಪ್ಲಾ ನಾಯಕ್ ಎಸ್, ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಂಯೋಜಕ ನವೀನ್ ಕುಮಾರ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ, ಅಶ್ರಫ್ ಯು, ಲತೀಪ್, ಸಿರಾಜುದ್ದೀನ್, ಪ್ರದೀಪ್, ವಿನೋದ್ ಶೆಟ್ಟಿ ಮುಡಾಲ, ಚಿತ್ರಾ ಬಿ.ಸಿ, ನಿಮಿತಾ ರೈ, ಶಾರದಾ, ರೇಖಾ, ನಳಿನಾಕ್ಷಿ, ವನಿತಾ ಹಾಗೂ ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ತಾಪಂ ಮಾಜಿ ಸದಸ್ಯರುಗಳಾದ ಸಾಜ ರಾಧಾಕೃಷ್ಣ ಆಳ್ವ ಮತ್ತು ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಗ್ರಾಮಸ್ಥರಾದ ನಿತೀಶ್ ಕುಮಾರ್ ಶಾಂತಿವನ, ರಾಜೇಶ್ ರೈ ಪರ್ಪುಂಜ, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. ಗ್ರಾಪಂ ಸದಸ್ಯ ಮಹೇಶ್ ಕೇರಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ ಸಹಕರಿಸಿದ್ದರು.
“ಪ್ರಥಮವಾಗಿ ಒಣಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದ್ದು ಮುಂದಿನ ಹಂತದಲ್ಲಿ ಹಸಿ ಕಸವನ್ನು ಸಂಗ್ರಹ ಮಾಡುವ ಕೆಲಸ ನಡೆಯಲಿದೆ. ಹಸಿಕಸವನ್ನು ಗೊಬ್ಬರವನ್ನಾಗಿಸಲು ಕಾಂಪೋಸ್ಟ್ ಪಿಟ್ ನಿರ್ಮಾಣಕ್ಕಾಗಿ ಗ್ರಾಪಂ ೨೦೨೦-೨೧ ನೇ ಸಾಲಿನ ೧೫ ನೇ ಹಣಕಾಸು ಅನುದಾನದಡಿ ರೂ.೧.೭೫ ಲಕ್ಷ ಮತ್ತು ೨೦೨೨-೨೩ ನೇ ಸಾಲಿನಲ್ಲಿ೩.೦೪ ಲಕ್ಷ ಒಟ್ಟು ೪ ಲಕ್ಷದ ೮೨ ಸಾವಿರ ರೂಪಾಯಿ ಕಾಯ್ದಿರಿಸಲಾಗಿದ್ದು ಮುಂದಿನ ೩ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.” ಅವಿನಾಶ್ ಬಿ.ಆರ್, ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ