ಆರ್ಟಿಒದಿಂದ ಆಟೋ ರಿಕ್ಷಾ ಚಾಲಕರೊಬ್ಬರಿಗೆ ನೋಟೀಸ್
ಪುತ್ತೂರು: ಅಧಿಕ ಬಾಡಿಗೆ ಹಣ ನೀಡುವಂತೆ ಪ್ರಯಾಣಿಕರ ಮೇಲೆ ಒತ್ತಡ ಹೇರಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ಪ್ರಯಾಣಿಕರೋರ್ವರು ನೀಡಿದ ದೂರಿನಂತೆ ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಟೋ ರಿಕ್ಷಾ ಚಾಲಕರೊಬ್ಬರಿಗೆ ನೋಟೀಸ್ ಮಾಡಿ ವಿಚಾರಣೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ದರ್ಬೆ ನಿವಾಸಿ ಕೆ.ನಾರಾಯಣ ಕುಡ್ವರವರ ಪತ್ನಿ ನಂದಿತಾ ಕುಡ್ವ ಮತ್ತು ಅವರ ಪುತ್ರ ಕೆಎಸ್ಸಾರ್ಟಿಸಿ ಬಸ್ನಿಲ್ದಾಣದ ಮುಂಭಾಗದಿಂದ ಕೆ.ಎ.21 ಬಿ 4656ರ ಆಟೋ ರಿಕ್ಷಾದಲ್ಲಿ ಕಲ್ಲಾರೆಗೆ ಬಾಡಿಗೆ ಮಾಡಿಕೊಂಡು ಹೋದಾಗ ಚಾಲಕ ಉಮೇಶ್ ನಾಯ್ಕ್ರವರು 80 ರೂ., ಬಾಡಿಗೆ ಕೇಳಿದ್ದಾರೆ. ಅಧಿಕ ಹಣಕ್ಕೆ ಬೇಡಿಕೆಯಿಟ್ಟ ಕುರಿತು ಪ್ರಶ್ನಿಸಿದಕ್ಕೆ ಆಟೋ ಚಾಲಕ ಉಮೇಶ್ ನಾಯ್ಕ್ರವರು ನಂದಿತಾ ಕುಡ್ವಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತು ಅವರ ಪತಿ ನಾರಾಯಣ ಕುಡ್ವರವರು ರಿಕ್ಷಾ ನಿಲ್ದಾಣದಲ್ಲಿ ಹೋಗಿ ವಿಚಾರಿಸಿದಾಗ ರಿಕ್ಷಾ ಚಾಲಕ ಉಮೇಶ್ ನಾಯ್ಕ್ ಮತ್ತು ಇತರ ರಿಕ್ಷಾ ಚಾಲಕರು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಟೋ ರಿಕ್ಷಾ ಚಾಲಕ ಉಮೇಶ್ ನಾಯ್ಕರವರಿಗೆ ವಿಚಾರಣೆಗಾಗಿ ನೋಟೀಸ್ ಜಾರಿ ಮಾಡಿದ್ದರು. ಅದರಂತೆ ಆಟೋ ಚಾಲಕ ಉಮೇಶ್ ನಾಯ್ಕ್ರವರನ್ನು ಸೆ.19ರಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.