ಕುಂಜಾರು ಮದಗ ಜನಾರ್ದನ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ, ನಿವೃತ್ತ ಅರ್ಚಕರಿಗೆ ಮನೆ ಹಸ್ತಾಂತರ

0

ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಚಂಡಿಕಾ ಯಾಗ ಸಮಿತಿಯ ವತಿಯಿಂದ ಮದಗ ಜನಾರ್ದನ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾಯಾಗ ಹಾಗೂ ದೇವಸ್ಥಾನದ ನಿವೃತ್ತ ಅರ್ಚಕರಿಗೆ ಗ್ರಾಮಸ್ಥರ ನೆರವಿನಿಂದ ನಿರ್ಮಾಣಗೊಂಡಿರುವ ಸುಂದರ ಮನೆಯ ಹಸ್ತಾಂತರವು ಅ.2ರಂದು ನಡೆಯಿತು.

ಕ್ಷೇತ್ರದ ತಂತ್ರಿಗಳಾಗಿರುವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಚಂಡಿಕಾಯಾಗದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಚಂಡಿಕಾಯಾಗ ಪ್ರಾರಂಭ ಹಾಗೂ ಸಂಕಲ್ಪ ನಡೆಯಿತು. ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಸುಹಾಸಿನಿ ಪೂಜೆ, ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.

ಧಾರ್ಮಿಕ ಸಭೆ:

ಚಂಡಿಕಾ ಯಾಗದ ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಧಾರ್ಮಿಕ ಕೇಂದ್ರಗಳು ಕೇವಲ ಆರಾಧನಾ ಕೇಂದ್ರವಲ್ಲ. ಸನಾತನ ಸಂಸ್ಕೃತಿಯ ಕೇಂದ್ರಗಳಾಗಬೇಕು. ನಮಗೂ ಜವಾಬ್ದಾರಿ ಇದೆ. ಎಲ್ಲರನ್ನೂ ಒಟ್ಟು ಸೇರಿಸಿಕೊಂಡ ಹೋಗುವ ಕೇಂದ್ರಗಳಾಗಿದೆ. ಧಾರ್ಮಿಕ ಕೇಂದ್ರದಲ್ಲಿ ಸಾನಿಧ್ಯ ವೃದ್ಧಿಯ ಜೊತೆಗೆ ಪ್ರತಿಯೊಬ್ಬ ಹಿಂದುಗಳು ಒಟ್ಟು ಸೇರುವ ಕಾರ್ಯವಾಗಬೇಕು. ಇನ್ನಷ್ಟು ಪರಂಪರೆಯ ಎತ್ತಿ ಹಿಡಿಯುವ ಕಾರ್ಯ ದೇವಸ್ಥಾನದಲ್ಲಿ ಆಗುತ್ತಿದೆ. ಅತ್ಯಂತ ಅಪರೂಪ, ವಿರಳವಾದ ವ್ಯಕ್ತಿತ್ವ ಚಂದ್ರಶೇಖರ ಮಯ್ಯರವರದ್ದು. ನಿಷ್ಕಲ್ಮಶದ ವ್ಯಕ್ತಿತ್ಬದ ಅರ್ಚಕರಿಗೆ ಮನೆ ನಿರ್ಮಿಸುವ ಕಾರ್ಯ ಗ್ರಾಮಸ್ಥರಿಂದ ನಡೆದಿರುವ ಶ್ಲಾಘನೀಯವಾಗಿದ್ದು ಮನೆ ನಿರ್ಮಿಸಲು ಸಹಕರಿಸಿದ ಊರಿನ ಗ್ರಾಮಸ್ಥರು ಅಭಿನಂದನೀಯರು ಎಂದರು.

ಮುಖ್ಯ ಅತಿಥಿಯಾಗಿದ್ದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ ಮಾತನಾಡಿ, ನಿವೃತ್ತ ಅರ್ಚಕರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಮದಗ ಜನಾರ್ದನ ದೇವಸ್ಥಾನದ ಕಾರ್ಯ ರಾಜ್ಯದಲ್ಲಿ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿದೆ. ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಒಟ್ಟು ಸೇರುತ್ತಿದ್ದ ಒಗ್ಗಟ್ಟಿನ ಬಲವನ್ನು ಪಡ್ನೂರಿನಲ್ಲಿ ಕಾಣಬಹುದು ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ಚಕ ಚಂದ್ರಶೇಖರ ಮಯ್ಯರವರು ತಮ್ಮ ಮನೆಯ ಕೆಲಸದಂತೆ ದೇವಸ್ಥಾನದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಆರ್ಥಿಕ ತೊಂದರೆ ಇದ್ದ ಸಮಯದಲ್ಲಿಯೂ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ದೇವಸ್ಥಾನದ ಪ್ರತಿಯೊಂದು ಕಾರ್ಯಗಳಲ್ಲಿಯೂ ಪ್ರಥಮ ದೇಣಿಗೆ ನೀಡಿ ಸಹಕಾರ ನೀಡುತ್ತಿದ್ದು ಎಲ್ಲರ ಅಭಿಪ್ರಾಯದಂತೆ ರೂ.15 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ ಎಂದರು.

ಮನೆ ಹಸ್ತಾಂತರ;

ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿತವಾದ ಮನೆಯ ಕೀಲಿ ಕೈ ಹಾಗೂ ಫಲಪುಷ್ಪ ನೀಡಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕರವರು ನಿವೃತ್ತ ಅರ್ಚಕ ಚಂದ್ರಶೇಖರ ಮಯ್ಯ ಮತ್ತು ರಾಧಾ ದಂಪತಿಗೆ ಮನೆ ಹಸ್ತಾಂತರಿಸಿದರು.

ಚಂಡಿಕಾಯಾಗ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂಡಿಕಾಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪೂವಪ್ಪ ದೇಂತಡ್ಕ ಸ್ವಾಗತಿಸಿದರು. ಶ್ರೀಧರ ಕುಂಜಾರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಯಶೋಧರ ಕುಂಜಾರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here