ದುರ್ಗೆಯಂತೆ ಮಹಿಳಾ ತಂಡ ಜಯಶಾಲಿಗಳಾಗಿ ರಾಜ್ಯಕ್ಕೆ ಕೀರ್ತಿ ತನ್ನಿ-ಮಠಂದೂರು
ಚಿತ್ರ: ಜೀತ್ ಪುತ್ತೂರು
ಪುತ್ತೂರು: ಫಿಲೋಮಿನಾ ಕಾಲೇಜು ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ಕ್ರೀಡೆಯಲ್ಲಿ ನೂರಾರು ಪ್ರತಿಭೆಗಳನ್ನು ಹುಟ್ಟು ಹಾಕಿದ ಈ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಮಿತೃವೃಂದ ವಾಲಿಬಾಲ್ ಅಕಾಡೆಮಿಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸೀನಿಯರ್ ಮಹಿಳಾ ತಂಡವು ತರಬೇತಿ ನಡೆಸುತ್ತಿದೆ. ಶಿಷ್ಟರ ರಕ್ಷಕ, ದುಷ್ಟರ ಸಂಹಾರದ ಅವತಾರವೆತ್ತಿದ ದುರ್ಗೆಯಂತೆ ರಾಜ್ಯ ಮಹಿಳಾ ತಂಡವು ಜಯಶಾಲಿಗಳಾಗಿ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಗುಜರಾತ್ನ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12ರ ವರೆಗೆ 36ನೇ ರಾಷ್ಟ್ರೀಯ ಕ್ರೀಡೆಯು ಜರಗಲಿದ್ದು, ಗುಜರಾತ್ನ ಭಾವ್ನಗರದಲ್ಲಿ ನಡೆಯಲಿರುವ ಸೀನಿಯರ್ ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ರಾಜ್ಯ ಸೀನಿಯರ್ ಮಹಿಳಾ ತಂಡಕ್ಕೆ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾಗೆ ಸಂಯೋಜಿತವಾಗಿರುವ ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ಅಡ್-ಹೋಕ್ ಸಮಿತಿ ಮತ್ತು ಪುತ್ತೂರು ಮಿತೃವೃಂದ ವಾಲಿಬಾಲ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಇವುಗಳ ಜಂಟಿ ನೇತೃತ್ವದಲ್ಲಿ ನಡೆದಿರುವ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಕಾಲೇಜಿನ ಸ್ಪಂದನಾ ಸಭಾಂಗಣದಲ್ಲಿ ಜರಗಿದ್ದು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಮನರಂಜನೆ ಮಾತ್ರವಲ್ಲ, ಕ್ರೀಡೆಯು ಸಮಾಜಮುಖಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಿದೆ. ಗ್ರಾಮೀಣ ಕ್ರೀಡೆಯಾಗಿರುವ ವಾಲಿಬಾಲ್, ಕಬಡ್ಡಿ, ಚೆಸ್ ಇವುಗಳು ಕ್ರಿಕೆಟ್ನಂತೆ ಸ್ಟಾರ್ವ್ಯಾಲ್ಯೂ ಹೊಂದಿಲ್ಲ. ಹಳ್ಳಿಗಾಡಿನಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಂತಹ ಮಹಿಳಾ ಓಟಗಾರ್ತಿ ಪಿ.ಟಿ ಉಷಾರವರು ಮಹಿಳಾ ತಂಡಕ್ಕೆ ಪ್ರೇರಣೆಯಾಗಲಿ ಎಂದ ಅವರು ಪ್ರತಿಭೆ ಉಳ್ಳವರು ಸತತ ಪ್ರಯತ್ನ ಹಾಗೂ ಆಟದ ಕಡೆಗಿನ ಕೇಂದ್ರೀಕೃತ ಗಮನದಿಂದಾಗಿ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ದೇಶಕ್ಕೆ ಕೀರ್ತಿಯನ್ನು ತರಬೇಕು. ಇತ್ತೀಚೆಗಿನ ಕಾಮನ್ವೆಲ್ತ್ ಕ್ರೀಡೆಯಲ್ಲಿ ಪದಕ ವಿಜೇತರಾದ ಭಾರತದ 61 ಮಂದಿ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿಯವರು ಸನ್ಮಾನಿಸುವ ಮೂಲಕ ನಮ್ಮ ವ್ಯಕ್ತಿತ್ವವು ದೇಶಕ್ಕೆ ಪರಿಚಯನ್ನುಂಟು ಮಾಡಿದೆ ಎಂದು ಅವರು ಹೇಳಿದರು.
ಮಹಿಳಾ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಲಿ-ವಂ|ಸ್ಟ್ಯಾನಿ ಪಿಂಟೋ:
ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ವಾಲಿಬಾಲ್ ಆಟಗಾರ್ತಿಯರ ನೂತನ ಜೆರ್ಸಿಯನ್ನು ಅನಾವರಣಗೊಳಿಸಿ ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯು ಅಂದಿನಿಂದ ಇಂದಿನವರೆಗೂ ಕ್ರೀಡೆಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಕರ್ಮಭೂಮಿಯಲ್ಲಿ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈಯವರಂತೆ ನೂರಾರು ಪುರುಷ ಹಾಗೂ ಮಹಿಳಾ ಕ್ರೀಡಾ ಪ್ರತಿಭೆಗಳು ಉದ್ಭವಗೊಂಡು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ ಮಾತ್ರವಲ್ಲದೆ ಪ್ರತಿಷ್ಠಿತ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಇಲ್ಲಿನ ಪ್ರತಿಭೆಗಳು ಅರಳಿದ್ದಾರೆ. ಮೇಜರ್ ವೆಂಕಟ್ರಾಮಯ್ಯರವರ ಶಕ್ತಿಯನ್ನು ಹೊಂದಿರುವ ಈ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿರುವ ಮಹಿಳಾ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.
ಕರ್ನಾಟಕದ ಧ್ವಜವನ್ನು ಮಹಿಳಾ ತಂಡ ಎತ್ತಿ ಹಿಡಿಯಲಿ-ಇಬ್ರಾಹಿಂ ಗೋಳಿಕಟ್ಟೆ:
ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ನ ಅಡ್-ಹೋಕ್ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಪ್ರತಿಯೊಬ್ಬರೂ ದೇಶಕ್ಕೆ ಸೇವೆ ಸಲ್ಲಿಸಿದಾಗ ದೇಶ ಬೆಳೆಯುತ್ತದೆ. ಫಿಲೋಮಿನಾ ಕ್ರೀಡಾಂಗಣದಲ್ಲಿ ನಮ್ಮ ಮಹಿಳಾ ತಂಡಕ್ಕೆ ತರಬೇತಿಗೆ ಅವಕಾಶ ಬೇಕೆಂದಾಗ ಇಲ್ಲಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ನಾವು ಸದಾ ಬದ್ಧ ಎಂದಿದ್ದರು. ನಮ್ಮ ಮಿತೃವೃಂದದ ಪ್ರತಿಯೋರ್ವ ಸದಸ್ಯರೂ ಕಟ್ಟಡದ ಪಿಲ್ಲರ್ಗಳಾಗೆ. ಮನುಷ್ಯ ಹುಟ್ಟುವಾಗ ಕೇವಲ ಉಸಿರು, ಸಾಯುವಾಗ ನಾವು ಮಾಡಿದಂತಹ ಹೆಸರು ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ತಂಡದ ಹೆಣ್ಮಕ್ಕಳು ಅವರವರ ಮನೆಯವರು ನಮ್ಮ ಮೇಲೆ ವಿಶ್ವಾಸವಿಟ್ಟು ಕಳುಹಿಸಿಕೊಟ್ಟಿದ್ದಾರೆ. ಎಲ್ಲರನ್ನು ನಾವು ‘ನಮ್ಮವರು’ ಎಂಬಂತೆ ಪ್ರೀತಿಯಿಂದ ಆಧರಿಸಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ ಧ್ವಜವನ್ನು ನಮ್ಮ ಮಹಿಳಾ ತಂಡ ಎತ್ತಿ ಹಿಡಿಯುವಂತಾಗಲಿ ಎಂದರು.
ಪುಣ್ಯದ ತಿಂಗಳಂದು ಜಯಶಾಲಿಯಾಗಿ ಹೊರಹೊಮ್ಮಲಿ-ಖಾಸಿಂ ಹಾಜಿ:
ಉದ್ಯಮಿ, ಕೆ.ಬಿ ಖಾಸಿಂ ಹಾಜಿ ಮಿತ್ತೂರುರವರು ಮಾತನಾಡಿ, ಅಕ್ಟೋಬರ್ ಎರಡರಂದು ಭಾರತದ ಪಿತಾಮಹ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಜೊತೆಗೆ ಮೊಹಮದ್ ಪೈಗಂಬರ್ರವರ ಜನುಮದ ತಿಂಗಳು ಆಗಿದ್ದು, ಫಿಲೋಮಿನಾ ಕಾಲೇಜಿನ ಈ ಪುಣ್ಯದ ಭೂಮಿಯಲ್ಲಿ ಆಭ್ಯಸಿಸಿದ ಮಹಿಳಾ ತಂಡವು ಜಯಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಹೇಳಿ ಶುಭ ಹಾರೈಸಿದರು.
ನಮ್ಮದು ಉತ್ತಮ ಸಂತುಲಿತ ತಂಡ-ಪಿ.ವಿ ಕೃಷ್ಣನ್:
ಅಧ್ಯಕ್ಷತೆ ವಹಿಸಿದ ಪುತ್ತೂರು ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಚೇರ್ಮ್ಯಾನ್ ಪಿ.ವಿ ಕೃಷ್ಣನ್ರವರು ಮಾತನಾಡಿ, ನಮ್ಮದು ಉತ್ತಮ ಸಂತುಲಿತ ತಂಡ. ಕಳೆದ ಹಲವಾರು ದಿನಗಳಿಂದ ಇಲ್ಲಿನ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಅವಿರತ ಶ್ರಮವಹಿಸಿ ಆಭ್ಯಾಸ ಮಾಡಿರುತ್ತಾರೆ. ತಂಡದಲ್ಲಿ ಉತ್ತಮ ಆಟಗಾರ್ತಿಯರಿದ್ದು ಮುಂಬರುವ ಪಂದ್ಯಾಟದಲ್ಲಿ ಜಯಶಾಲಿಯಾಗಿ ಹೊರ ಹೊಮ್ಮಲಿ ಎಂದರು.
ವಾಲಿಬಾಲ್ ತರಬೇತುದಾರ ಹಾಗೂ ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ ಪಿ.ವಿ ನಾರಾಯಣನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ತಂಡದ ಆಟಗಾರ್ತಿ ಶ್ರೀದೇವಿ ಧಾರವಾಡರವರು ಪ್ರಾರ್ಥಿಸಿದರು. ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಾಲಚಂದ್ರ ಕೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಿವಶ್ರೀರಂಜನ್ ರೈ ದೇರ್ಲ ವಂದಿಸಿದರು. ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಶಿಬಿರಾರ್ಥಿಗಳ ಪ್ರಮಾಣಪತ್ರವನ್ನು ವಾಚಿಸಿದರು. ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಫಿಲೋಮಿನಾ ಕ್ರೀಡಾಂಗಣದಲ್ಲಿ ಅಭ್ಯಾಸ…
ವಾಲಿಬಾಲ್ ತರಬೇತುದಾರ ಪಿ.ವಿ ನಾರಾಯಣನ್ ಹಾಗೂ ತಂಡದ ಅಧಿಕೃತ ಮಹಿಳಾ ಕೋಚ್ ಕೆ.ಎಂ ಹನಿ ಕೂಯ್ಯುರ್ಪಾಡಿರವರ ತರಬೇತುದಾರಿಕೆಯಲ್ಲಿ ಕಳೆದ 20 ದಿನಗಳಿಂದ ರಾಜ್ಯ ಸೀನಿಯರ್ ಮಹಿಳಾ ವಾಲಿಬಾಲ್ ತಂಡದ ಆಟಗಾರ್ತಿಯರು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ನಿರಂತರ ಆಭ್ಯಾಸನಿರತರಾಗಿದ್ದರು. ಕೋಚ್ ಕೆ.ಎಂ ಹನಿರವರು ರೈಲ್ವೇ ಉದ್ಯೋಗಿಯಾಗಿದ್ದು, ಅಂತರ್ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿರುತ್ತಾರೆ. ತಂಡದಲ್ಲಿ ಪ್ರಿಯಾಂಕ ಬೆಂಗಳೂರು, ಕಾವ್ಯ ಬೆಂಗಳೂರು, ಶಿಲ್ಪಾ ಎಂ ಧಾರವಾಡ, ಅನಿತಾ ಧಾರವಾಡ, ಜಯ ಮೂಡಬಿದ್ರೆ, ಚರೀಶ್ಮಾ ಮೂಡಬಿದ್ರೆ, ಸ್ನೇಹ ಮಂಗಳೂರು, ಶ್ರೀದೇವಿ ಧಾರವಾಡ, ಅನುಶ್ರೀ ಶಿವಮೊಗ್ಗ, ಶ್ರೇಯಾ ಕಾರ್ಕಳರವರು ಭಾಗವಹಿಸಿದ್ದು, ಇದರಲ್ಲಿ ಹಲವರು ಮಂದಿ ಉದ್ಯೋಗದಲ್ಲಿರುವವರು, ವಿದ್ಯಾರ್ಥಿಗಳು, ಬೀಚ್ ವಾಲಿಬಾಲ್ಪಟುಗಳು ಒಳಗೊಂಡಿದ್ದಾರೆ. ಈ ಕ್ರೀಡಾಪಟುಗಳಿಗೆ ಮಿತೃವೃಂದ ವಾಲಿಬಾಲ್ ಅಕಾಡೆಮಿಯವರು ಉಚಿತವಾಗಿ ತರಬೇತಿ ಹಾಗೂ ಎಲ್ಲಾ ಸೌಕರ್ಯವನ್ನು ನೀಡಿರುತ್ತಾರೆ.
ಸುಮಾರು 20 ದಿನಗಳ ಹಿಂದೆ ಆರಂಭಗೊಂಡ ಈ ಶಿಬಿರವು ನಮಗೆ ಯಾವುದೇ ಕೊರತೆಯಿಲ್ಲದೆ, ಸಮಸ್ಯೆಗಳಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆಯಲು ಮಿತೃವೃಂದ ವಾಲಿಬಾಲ್ ಅಕಾಡೆಮಿಯವರು ನಮ್ಮಲ್ಲಿ ತೋರಿಸಿದ ಪ್ರೀತಿಗೆ ಚಿರಋಣಿಯಾಗಿದ್ದೇವೆ ಜೊತೆಗೆ ನಮಗೆ ಅಭ್ಯಾಸ ಮಾಡಲು ಕ್ರೀಡಾಂಗಣವನ್ನು ಒದಗಿಸಿಕೊಟ್ಟ ಫಿಲೋಮಿನಾ ವಿದ್ಯಾಸಂಸ್ಥೆಗೂ ಅಭಾರಿಯಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂಬುದೇ ನಮ್ಮ ಪ್ರಾರ್ಥನೆ.
-ಪ್ರಿಯಾಂಕ ಬೆಂಗಳೂರು, ವಾಲಿಬಾಲ್ ಆಟಗಾರ್ತಿ