ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಗೊಳಪಟ್ಟ ಪೆರ್ನೆ ವಾಳೆಯ ಪ್ರೇರಕ ಸಂತ ಫ್ರಾನ್ಸಿಸ್ ಅಸ್ಸಿಸಿಗೆ ಸಮರ್ಪಿಸಲ್ಪಟ್ಟ ಚಾಪೆಲಿನ 22ನೇ ವರ್ಷದ ವಾರ್ಷಿಕ ಮಹೋತ್ಸವದ ದಿವ್ಯ ಬಲಿಪೂಜೆಯು ಅ.4 ರಂದು ಜರಗಿತು.
ಬನ್ನೂರು ಚರ್ಚ್ ನ ಸ್ಥಾಪಕ ಧರ್ಮಗುರುವಾಗಿರುವ ವಂ|ಅಲ್ಫೋನ್ಸ್ ಮೊರಾಸ್ ರವರು ಪವಿತ್ರ ಬೈಬಲಿನ ಮೇಲೆ ಸಂದೇಶ ನೀಡುತ್ತಾ, ಇಲ್ಲಿನ ಚಾಪೆಲ್ ಅನ್ನು ಸಂತ ಫ್ರಾನ್ಸಿಸ್ ಅಸ್ಸಿಸಿರವರಿಗೆ ಸಮರ್ಪಿಸಿರುವುದಾಗಿದೆ. ಸಂತ ಫ್ರಾನ್ಸಿಸ್ ಅಸ್ಸಿಸಿರವರು ಕ್ರೈಸ್ತ ಧರ್ಮದ ಕನ್ನಡಿಯಾಗಿ ಬದುಕಿದರು ಮಾತ್ರವಲ್ಲ ಸ್ವತಹ ಅಗರ್ಭ ಶ್ರೀಮಂತರಾಗಿದ್ದರೂ ಅವರು ಬಡವರಲ್ಲಿ ಬಡವನಾಗಿ ಜೀವನ ಸಾಗಿಸಿರುವವರಾಗಿದ್ದಾರೆ. ದೀನ ದಲಿತರ ಸೇವೆ ಮಾಡುವ ಮೂಲಕ ಅವರು ಅವರಲ್ಲಿ ದೇವರನ್ನು ಕಂಡವರಾಗಿದ್ದಾರೆ ಜೊತೆಗೆ ಎಲ್ಲರನ್ನು ಸಹೋದರ-ಸಹೋದರಿ ಭಾವನೆಯಿಂದ ನೋಡುತ್ತಿದ್ದರು. ಸಂತ ಫ್ರಾನ್ಸಿಸ್ ಅಸ್ಸಿಸಿರವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿ ಶುಭ ಹಾರೈಸಿದರು.
ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯ ಚರ್ಚ್ ಗಳ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ನೆರವೇರಿಸಿದರು. ಸುಳ್ಯ ಚರ್ಚ್ ಧರ್ಮಗುರು ವಂ|ವಿಕ್ಟರ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ರವರು ನೂರಾರು ಭಕ್ತಾದಿಗಳೊಂದಿಗೆ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಫ್ರಾನ್ಸಿಸ್ ಅಸ್ಸಿಸಿಯವರು ಕ್ರೈಸ್ತ ಪವಿತ್ರ ಸಭೆಯಲ್ಲಿ ಸಂತರೆನಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಸ್ಥಾಪನೆಗೊಂಡ ಇಲ್ಲಿನ ಚಾಪೆಲ್ ಗೆ ಇದೀಗ 22 ವರ್ಷ ತುಂಬಿದೆ. ಹಬ್ಬದ ಪ್ರಯುಕ್ತ ಹಿರಿಯ-ಕಿರಿಯರಿಗೆ ಗೌರವಿಸುವ ಕಾರ್ಯ ಇಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ. ಹಬ್ಬದ ಪ್ರಯುಕ್ತ ಆಗಮಿಸಿದ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ಮಾತನಾಡಿ, ಪೆರ್ನೆ ವಾಳೆಯು ಬನ್ನೂರು ಚರ್ಚ್ ವ್ಯಾಪ್ತಿಗೆ ಬರುತ್ತಾದರೂ ಇಲ್ಲಿ ನನಗೆ ಹೆಚ್ಚೇನು ಕೆಲಸದ ಒತ್ತಡವಿಲ್ಲ. ಎಲ್ಲವನ್ನೂ ಈ ವಾಳೆಯ ಭಕ್ತಾಧಿಗಳು ಬಹಳ ಮುತುವರ್ಜಿಯಿಂದ ಶಿಸ್ತುಬದ್ಧವಾಗಿ ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದರು.
ಬಲಿಪೂಜೆಯ ಬಳಿಕ ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದ ಧರ್ಮಗುರುಗಳಿಗೆ ಹಾಗೂ ಸಹಕರಿಸಿದ ಭಕ್ತಾದಿಗಳಿಗೆ
ಶಾಲು ಹೊದಿಸಿ ಅಭಿನಂದಿಸಲಾಯಿತು. ಹಬ್ಬದ ಪ್ರಯುಕ್ತ ಮತ್ತು ನೂತನ ಗ್ರೊಟ್ಟೊಗೆ ನಗದು ರೂಪದಲ್ಲಿ ಮತ್ತು ವಸ್ತುರೂಪದಲ್ಲಿ ನೆರವಿತ್ತ ದಾನಿಗಳಿಗೆ ಪವಿತ್ರೀಕರಿಸಿದ ಮೋಂಬತ್ತಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.ಪೆರ್ನೆ ವಾಳೆಯ ತೆರೆಜಾ ಸಿಕ್ವೇರಾರವರು ಕಾರ್ಯಕ್ರಮ ನಿರೂಪಿಸಿದರು.
ಬನ್ನೂರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಪೆರ್ನೆ ವಾಳೆಯ ಗುರಿಕಾರ ಹೆನ್ರಿ ವೇಗಸ್ ಸಹಿತ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಬನ್ನೂರು ಚರ್ಚ್ ನ ಸುದೀಪ್ ವಾಸ್ ನೇತೃತ್ವದ ಗಾಯನ ಮಂಡಳಿ ಸಹಕರಿಸಿದರು.
ಮಾತೆ ಮರಿಯಮ್ಮರವರ ಗ್ರೊಟ್ಟೊ ಲೋಕಾರ್ಪಣೆ…
ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ನೂತನ ಮಾತೆ ಮರಿಯಮ್ಮರವರ ಗ್ರೊಟ್ಟೊವನ್ನು ಪವಿತ್ರಜಲ ಸಿಂಪಡಿಸುವ ಮೂಲಕ ಆಶೀರ್ವಚಿಸಿ ಲೋಕಾರ್ಪಣೆಗೈದರು.
ಹಿರಿಯರಿಗೆ ಗೌರವ..
ಪೆರ್ನೆ ವಾಳೆಯ 70 ವರ್ಷದ ಮೇಲ್ಪಟ್ಟ ಹಿರಿಯರಾದ ವಿನಾಸಿಯಾ ಕ್ರಾಸ್ತಾ, ಅಂತೋನಿ ಪಿಂಟೊ, ಜೋಸೆಫ್ ಪಿರೇರಾ, ಸೆಲಿನ್ ಗೋವಿಯಸ್, ಜೆರೋಮ್ ಫೆರ್ನಾಂಡೀಸ್, ಮೇರಿ ರೊಡ್ರಿಗಸ್ ರವರಿಗೆ ಹಬ್ಬದ ಪ್ರಯುಕ್ತ ಅಭಿನಂದಿಸಲಾಯಿತು.