ಮಂಗಳೂರು:ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಅ.೧೧ರಿಂದ ಅನ್ವಯವಾಗುವಂತೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳು ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ ೨.೦೫ ರು.ಪ್ರೋತ್ಸಾಹ ದರ ನೀಡಲು ನಿರ್ಧರಿಸಲಾಗಿದೆ.ಆದರೆ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಪೂರೈಸುವ ಹಾಲಿನ ದರದಲ್ಲಿ ಏರಿಕೆ ಮಾಡುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರೋತ್ಸಾಹ ದರ ಮುಂದಿನ ಎರಡ್ಮೂರು ತಿಂಗಳ ಕಾಲ ಜಾರಿಯಲ್ಲಿರಲಿದೆ.ಪ್ರಸಕ್ತ ಹಾಲಿಗೆ ಕನಿಷ್ಠ ಖರೀದಿ ದರ ಲೀಟರ್ಗೆ ೨೯.೦೫ ರು.ಇದೆ.ಇದಕ್ಕೆ ೨.೦೫ ರು.ಸೇರಿಸಿ ೩೨ ರು.ದರ ನೀಡಲಾಗುತ್ತದೆ.ಶೀಘ್ರವೇ ರಾಜ್ಯ ಸರ್ಕಾರದಿಂದ ೩ ರು.ವರೆಗೆ ಪ್ರೋತ್ಸಾಹ ಧನ ಜಾರಿಗೊಂಡರೆ, ಅದು ಕೂಡ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ.ಇನ್ನೂ ಹೆಚ್ಚಿನ ಗುಣಮಟ್ಟದ ಹಾಲು ಸಹಕಾರಿ ಸಂಘಕ್ಕೆ ನೀಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸುಚರಿತ ಶೆಟ್ಟಿ ತಿಳಿಸಿದ್ದಾರೆ.ಅವಿಭಜಿತ ದ.ಕ.,ಉಡುಪಿ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟ ೭೩೨ ಸಹಕಾರಿ ಸಂಘಗಳನ್ನು ಹೊಂದಿದೆ.೬೮ ಸಾವಿರ ಹೈನುಗಾರರು ಒಕ್ಕೂಟಕ್ಕೆ ಹಾಲು ನೀಡುತ್ತಿದ್ದಾರೆ.ಒಕ್ಕೂಟ ವಾರ್ಷಿಕ ೯೬೨ ಕೋಟಿ ರು.ವಹಿವಾಟು ನಡೆಸುತ್ತಿದ್ದು, ದಿನವಹಿ ಸರಾಸರಿ ೪.೬೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.ಕಳೆದ ಎರಡು ತಿಂಗಳಲ್ಲಿ ಗರಿಷ್ಠ ೫.೬೫ ಲಕ್ಷ ಲೀಟರ್ ಜಾಸ್ತಿ ಹಾಲು ಸಂಗ್ರಹವಾಗಿತ್ತು.೧೯ ಬಗೆಯ ಹಾಲಿನ ಉತ್ಪನ್ನ ಉತ್ಪಾದನೆಗೆ ೫.೩೦ ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಆದರೆ ಪ್ರಸ್ತುತ ಎಲ್ಲ ಕಡೆ ಅಗತ್ಯವಿರುವಷ್ಟು ಹಾಲು ಉತ್ಪಾದನೆಯಾಗುತ್ತಿಲ್ಲ. ಈ ಕಾರಣಕ್ಕೆ ಹೈನುಗಾರರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲು
ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಅ.೧೧ರಂದು ಒಕ್ಕೂಟದ ವಿಶೇಷ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು.ಪ್ರೋತ್ಸಾಹಧನ ನಿರ್ಧಾರದಿಂದ ಒಕ್ಕೂಟಕ್ಕೆ ದಿನಕ್ಕೆ ೧೦ ಲಕ್ಷ ರು.ನಂತೆ ಮಾಸಿಕ ೩ ಕೋಟಿ ರು.ನಷ್ಟ ಉಂಟಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದರು.ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ,ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಇದ್ದರು.
ಹೈನುಗಾರ ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ
ಹೈನುಗಾರರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಹಾಲು ಒಕ್ಕೂಟದಿಂದಲೇ ಉಚಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.ಸುಮಾರು ೫೦ರಿಂದ ೧೦೦ ಬೆಡ್ನ ಹಾಸ್ಟೆಲ್ ಸೌಲಭ್ಯ ಇದಾಗಲಿದ್ದು, ಹೈನುಗಾರರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ನೆರವಾಗಲಿದೆ.ಹಾಸ್ಟೆಲ್ ಸೌಲಭ್ಯ ಉಚಿತವಾಗಿದ್ದು, ರಿಯಾಯ್ತಿ ದರದಲ್ಲಿ ಆಹಾರ ವ್ಯವಸ್ಥೆಗೆ ಚಿಂತಿಸಲಾಗಿದೆ.ಈಗಾಗಲೇ ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ಹಾಲು ಒಕ್ಕೂಟದ ಹಾಸ್ಟೆಲ್ ಇದ್ದು, ಅಲ್ಲಿ ಸೇರ್ಪಡೆ ಬಯಸುವ ಹೈನುಗಾರ ಮಕ್ಕಳಿಗೆ ಇಲ್ಲಿಂದ ಶಿಫಾರಸು ಪತ್ರ ನೀಡಲಾಗುವುದು ಎಂದು
ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನಂದಿನಿ ಐಸ್ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸಲು ಉzಶಿಸಲಾಗಿದೆ.ಈಗ ನಂದಿನಿ ಬೆಣ್ಣೆಯ ಕೊರತೆ
ತಲೆದೋರಿದೆ.ಇದು ತಾತ್ಕಾಲಿಕ ಮಾತ್ರ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದರು.