ಜಮೀನು ಅಳತೆಗೆ ಲಂಚಕ್ಕೆ ಬೇಡಿಕೆ: ಭೂಮಾಪಕನಿಗೆ 3 ವರ್ಷ3 ತಿಂಗಳು ಸಜೆ,ರೂ.20 ಸಾವಿರ ದಂಡ

0

ಮಂಗಳೂರು:ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿದ್ದ ಭೂಮಾಪಕನಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಆರ್ಯಾಪು ನಿವಾಸಿ ಕು.ಅಂಕಿತಾ ಎಂಬವರು ನೀಡಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಆರ್ಯಾಪು ಗ್ರಾಮದಲ್ಲಿರುವ ತನ್ನ ತಂದೆ ಕೃಷ್ಣಪ್ಪ ಅವರಿಗೆ ಸಂಬಂಧಿಸಿದ ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿಕೊಡಲು ಪುತ್ತೂರು ಭೂಮಾಪನಾ ಶಾಖೆಯ ಭೂಮಾಪಕ ಮಹಾದೇವ ನಾಯಕ್ ಎಂಬವರು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುರಿತು ಕು.ಅಂಕಿತಾ ಎಂಬವರು ೨೦೧೪ರ ಮಾರ್ಚ್ ೧೫ರಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಅಂದು ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದು ಪ್ರಸ್ತುತ ಕಾರ್ಕಳ ಉಪವಿಭಾಗದ ಉಪಾಧೀಕ್ಷಕರಾಗಿರುವ ಎಸ್.ವಿಜಯ ಪ್ರಸಾದ್ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರು ೩ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿಯವರು ಆರೋಪಿ ಮಹಾದೇವ ನಾಯಕ್‌ಗೆ ೩ ವರ್ಷ ೩ ತಿಂಗಳ ಸಾದಾ ಸಜೆ ಹಾಗೂ ರೂ.೨೦ ಸಾವಿರ ವಿಧಿಸಿ ಅ.೭ರಂದು ತೀರ್ಪು ನೀಡಿದ್ದಾರೆ.ಆರೋಪಿಯು ದಂಡ ಕಟ್ಟಲು ವಿಫಲರಾದಲ್ಲಿ ೩ ತಿಂಗಳ ಸಾದಾ ಸಜೆಯನ್ನು ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಅವರು ಸರ್ಕಾರದ ಪರವಾಗಿ ವಾದಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ೨೦೨೧-೨೨ನೇ ಸಾಲಿನಲ್ಲಿ ಒಟ್ಟು ಎಂಟು ಹಾಗೂ ೨೦೨೨ನೇ ಸಾಲಿನಲ್ಲಿ ನಾಲ್ಕು ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆ ಆಗಿದೆ ಎಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here