ಉಪ್ಪಿನಂಗಡಿ: ಹಿಜಾಬ್ ವಿವಾದ ಮತ್ತು ಪತ್ರಕರ್ತರ ಮೇಲಿನ ಗುಂಪು ದಾಳಿ ಪ್ರಕರಣಗಳಿಂದ ಸುದ್ದಿಯಾಗಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸುಬ್ಬಪ್ಪ ಕೈಕಂಬ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಉಪ್ಪಿನಂಗಡಿ ಕಾಲೇಜನ್ನು ತನ್ನ ನಾಲ್ಕುವರೆ ವರ್ಷಗಳ ಪ್ರಾಂಶುಪಾಲಗಿರಿಯ ಅವಧಿಯಲ್ಲಿ ಶಿಸ್ತಿನ ಪಥದಲ್ಲಿ ಮುನ್ನಡೆಸಿ ಹಲವಾರು ಸಾಧನೆಗೆ ಕಾರಣೀಕರ್ತರಾಗಿದ್ದ ಸುಬ್ಬಪ್ಪ ಕೈಕಂಬರವರು ಕಳೆದ ಮೇ ತಿಂಗಳ 10ರಂದು ಮಂಗಳೂರಿಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗದ್ದಲ ತಾರಕಕ್ಕೇರಿ ಕಾಲೇಜಿನಲ್ಲಿ ಅಹಿತಕರ ಘಟನೆಗಳು ಸಂಭವಿಸಿತ್ತು. ಮಾತ್ರವಲ್ಲದೆ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾದ ಘಟನಾವಳಿಗೆ ಸಂಬಂಧಿಸಿ ಜೂನ್ 2ರಂದು ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ ಪಡೆಯಲು ಕಾಲೇಜಿಗೆ ಹೋಗಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿದ್ಯಾರ್ಥಿಗಳಿಂದ ಗುಂಪು ದಾಳಿ ನಡೆದಿತ್ತು. ಈ ಮೂಲಕ ಕಾಲೇಜು ಅನಪೇಕ್ಷಿತ ವಿದ್ಯಮಾನಗಳಿಂದ ಸುದ್ದಿಯಾಗಿತ್ತು.
ಉತ್ತಮ ಸಾಧನೆಗಳೊಂದಿಗೆ ಹೆಸರುವಾಸಿಯಾಗಿದ್ದ ಕಾಲೇಜೊಂದು ಪ್ರಾಂಶುಪಾಲರ ಬದಲಾವಣೆಯಿಂದ ದಿನ ಬೆಳಗಾಗುವಷ್ಠರಲ್ಲಿ ಕುಖ್ಯಾತಿಗೆ ಸಿಲುಕಿದ್ದು ವಿದ್ಯಾಭಿಮಾನಿಗಳಿಗೆ ಕಳವಳವನ್ನುಂಟು ಮಾಡಿತ್ತು. ಈ ಬಗ್ಗೆ ಸ್ಪಂದಿಸಿದ ಆಡಳಿತ ವ್ಯವಸ್ಥೆ ವಿದ್ಯಾಭಿಮಾನಿಗಳ ಆಪೇಕ್ಷೆಯಂತೆ ಮತ್ತೆ ಸುಬ್ಬಪ್ಪ ಕೈಕಂಬರವರನ್ನು ಪ್ರಾಂಶುಪಾಲರನ್ನಾಗಿ ಕಾಲೇಜಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.