ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ ಜಿಲ್ಲಾ ಕರ್ನಾಟಕ ಗಮಕ ಕಲಾ ಪರಿಷತ್ತು ಹಾಗೂ ಪುತ್ತೂರು ತಾಲೂಕು ಗಮಕ ಕಲಾ ಪರಿಷತ್ತು ಘಟಕದ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಅಖಿಲ ಕರ್ನಾಟಕ ಹಿರಿಯ ಸೇವಾ ಟ್ರಸ್ಟ್ ಪ್ರತಿಷ್ಠಾನ ಮೆಲ್ಕಾರ್, ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ, ಎಸ್‌ಡಿಪಿ ರೆಮಿಡೀಸ್ ಪುತ್ತೂರು ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್, ದ್ವಾರಕಾ ಸಮೂಹ ಸಂಸ್ಥೆಗಳು, ಗೌರಿ ಮಾಧವ ನಾಯಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಗತಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ 10ನೇ ಗಮಕ ಸಮ್ಮೇಳನವು ಅ.17 ಹಾಗೂ 18 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೋ.ವೇದವ್ಯಾಸ ರಾಮಕುಂಜ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.17ರಂದು ಅಪರಾಹ್ನ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಪ್ರವಚನಕಾರರು, ಸಾಹಿತಿಗಳಾಗಿರುವ ಮುಳಿಯ ಶಂಕರ ಭಟ್ಟ ಸಮ್ಮೇಳದ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಪೂರ್ವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ದ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಮಕ ಗಂಗಾದರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಮಾಜಿ ಶಾಸಕ ಸಂಜೀವ ಮಠಂದೂರು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಲ್ಲಾರೆ ಗುರುರಾಘವೇಂದ್ರ ಮಠದ ಆಡಳಿತ ಮುಖ್ಯಸ್ಥ ಯು.ಪೂವಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ನವರಸ ಪ್ರತಿಪಾದಕ ಗಮಿಕಗಳಿಂದ ‘ನವರಸ ಗಮಕ’ ನಡೆಯಲಿದೆ.
ಅ.18ರಂದು ಬೆಳಿಗ್ಗೆ ಜಿಲ್ಲಾ ಮಟ್ಟದ ಗಮಕ ಗಾಯನ ಸ್ಪರ್ಧೆಯ ಬಹುಮಾನ ವಿಜೇತರಿಂದ ಕಾವ್ಯ ಗಾಯನ ನಡೆಯಲಿದೆ. ನಂತರ ಸಮ್ಮೇಳನದ ಅಧ್ಯಕ್ಷರಿಂದ ಗಮಕ ಸಂವಾದ ಗೋಷ್ಠಿ ನಡೆಯಲಿದ್ದು ವಿಶ್ರಾಂತ ಪ್ರಾಧ್ಯಾಪಕ ಡಾ|ನರೇಂದ್ರ ರೈ ದೇರ್ಲ, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ ಹಾಗೂ ಸುದಾನ ಶಾಲಾ ಅಧ್ಯಾಪಕಿ ಕವಿತಾ ಅಡೂರು ಸಂವಾದ ನಡೆಸಿಕೊಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ ಸರ್ಪಂಗಳ ಈಶ್ವರ ಭಟ್ ಸಮನ್ವಯ ನಡೆಸಿಕೊಡಲಿದ್ದಾರೆ. ನಂತರ ತಾಲೂಕು ಗಮಕ ಕಲಾ ಘಟಕಗಳಿಂದ ಗಮಕ ವೈಭವ ಮಧ್ಯಾಹ್ನ ಸಮ್ಮೇಳನದ ಅಧ್ಯಕ್ಷರು ಮತ್ತು ಇತರ ರಚನೆಗಳ ಗಾಯನ, ಅಪರಾಹ್ನ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ನಡೆದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮುಳಿನ ಶಂಕರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಉಪ್ಪಿನಂಗಡಿಯ ವೈದ್ಯ ಡಾ.ಗೋವಿಂದ ಪ್ರಸಾದ ಕಜೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಂಬಯಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ತಾಳ್ತಜೆ ವಸಂತ ಕುಮಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತಿಲ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ವಿಶ್ರಾಂತ ಪ್ರಾಂಶುಪಾಲ ಡಾ|ವರದರಾಜ ಚಂದ್ರಗಿರಿ, ಸ್ವರ್ಣೋದ್ಯಮಿ ಲಕ್ಷ್ಮೀಕಾಂತ ಆಚಾರ್ಯ, ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ ಅವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಭಾಸ್ಕರ ಬಾರ್ಯ, ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ಸದಸ್ಯ ಭವಾನಿ ಶಂಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುಳಿಯ ಶಂಕರ ಭಟ್ಟ
ಬಂಟ್ವಾಳ ತಾಲೂಕು ಅಳಿಕೆಯ ಮುಳಿಯ ಶಂಕರ ಭಟ್ಟ ಇವರು ದ.ಕ ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಧ್ಯಕ್ಷರು. ಇವರು ಪ್ರವಚನಕಾರರಾಗಿ, ಸಾಹಿತಿಗಳಾಗಿ, ಅರ್ಥದಾರಿಗಳಾಗಿ ಪ್ರಸಿದ್ದ ವಿದ್ವಾಂಸರಾಗಿದ್ದಾರೆ. ಕವಿ ಹೃದಯದ ಒಳಹೊಕ್ಕು ಹೃದ್ಯವಾಗಿ ಪ್ರವಚನ ಮಾಡುವ ಇವರು ಸಾಹಿತ್ಯ ಎಲ್ಲಾ ಪ್ರಕಾರಗಳಿಗೆ ತನ್ನ ಕೊಡುಗೆ ನೀಡಿರುತ್ತಾರೆ. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿದ್ದರು.