ಬೆಂಗಳೂರು:ಇನ್ನು ಮುಂದೆ 7 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಕನಿಷ್ಠ 25 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನ, 7 ಲಕ್ಷದಿಂದ 9.5 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ 28 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಅವಕಾಶ ಕಲ್ಪಿಸುವ `ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ’ಯ ಅಧಿಸೂಚನೆ ಹೊರಡಿಸಲಾಗಿದೆ.
ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಯಲ್ಲಿತ್ತು. ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಸುಗ್ರೀವಾಜ್ಞೆಯನ್ನು ನಿರಸನಗೊಳಿಸಲಾಯಿತು. ತಿದ್ದುಪಡಿಯಿಂದಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.
ಎರಡು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದ ತಾಲ್ಲೂಕುಗಳಲ್ಲಿ ಕನಿಷ್ಠ 12 ಚುನಾಯಿತ ತಾಲೂಕು ಪಂಚಾಯತ್ ಸದಸ್ಯರು ಇರಬೇಕು ಎಂದು ನಿಯಮ ರೂಪಿಸಿ ಕಾಯ್ದೆಗೆ ಕಳೆದ ಮಾರ್ಚ್ನಲ್ಲಿ ತಿದ್ದುಪಡಿ ಮಾಡಲಾಗಿತ್ತು. ಆದರೆ, 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಜನಸಂಖ್ಯೆ ಇರುವ ತಾಲ್ಲೂಕು ಪಂಚಾಯಿತಿಗಳಲ್ಲಿ ಎಷ್ಟು ಸದಸ್ಯ ಸ್ಥಾನ ಇರಬೇಕೆಂದು ನಿರ್ಣಯಿಸಲು ಸಮಸ್ಯೆ ಆಗುತ್ತಿತ್ತು.ಹೊಸ ತಿದ್ದುಪಡಿಯಿಂದಾಗಿ 2.30 ಲಕ್ಷ ಜನಸಂಖ್ಯೆಗೆ 12 ಚುನಾಯಿತ ತಾಲೂಕು ಪಂಚಾಯತ್ ಸದಸ್ಯರು ಇರಲಿದ್ದಾರೆ.ಅಲ್ಲದೆ, ಒಂದು ಜಿಲ್ಲಾ ಪಂಚಾಯಿತಿಗೆ ತಾಲ್ಲೂಕುಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಪ್ರತಿ ಜಿಲ್ಲೆಯಲ್ಲಿ 20 ಇರಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ, ಕಡಿಮೆ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಸದಸ್ಯ ಸ್ಥಾನ ನಿಗದಿಪಡಿಸಲು ಸಮಸ್ಯೆ ಆಗುತ್ತಿತ್ತು.ಹಾಲಿ ಇರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ ಸೆಕ್ಷನ್ 121 ಪ್ರಕಾರ, 2 ಲಕ್ಷ ಗ್ರಾಮೀಣ ಜನಸಂಖ್ಯೆ ಇರುವ ಪ್ರತಿ ತಾಲ್ಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆ ಇಲ್ಲದಂತೆ ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯ ಇರಬೇಕು.ಒಂದು ಲಕ್ಷ ಮೀರಿದ ಮತ್ತು 2 ಲಕ್ಷದ ಒಳಗೆ ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಕನಿಷ್ಠ 11 ಚುನಾಯಿತ ಸದಸ್ಯರಿರಬೇಕು.50 ಸಾವಿರದಿಂದ 1 ಲಕ್ಷ ಜನಸಂಖ್ಯೆಗೆ 9, 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ 7 ಸದಸ್ಯರು ಇರಬೇಕು. ಸೆಕ್ಷನ್ 160ರ ಪ್ರಕಾರ, ಒಂದು ಜಿಲ್ಲೆಯಲ್ಲಿ 35ರಿಂದ 45 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಒಂದು ಜಿಲ್ಲೆಯಲ್ಲಿ ಕನಿಷ್ಠ 20 ಜಿಲ್ಲಾ ಪಂಚಾಯಿತಿ ಸದಸ್ಯರು ಇರಬೇಕು.