ಸಣ್ಣಪುಟ್ಟ ಸಮಸ್ಯೆಗಳನ್ನಿಟ್ಟು ಕೋರ್ಟ್,ಕಛೇರಿ ಅಲೆದಾಡುವ ಬದಲು ನೀವೇ ಪರಿಹರಿಸಿಕೊಳ್ಳಿ ಗ್ರಾಮಸ್ಥರಿಗೆ ಸಲಹೆ ನೀಡಿದ ಪುತ್ತೂರು ತಹಶೀಲ್ದಾರ್

0

ಕೆಯ್ಯೂರು ತಹಶೀಲ್ದಾರ್ ಗ್ರಾಮವಾಸ್ತವ್ಯ

ಪುತ್ತೂರು: ಪರಸ್ಪರ ಹೊಂದಾಣಿಕೆಯಿಂದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಎಲ್ಲಾ ಸಮಸ್ಯೆಗಳನ್ನು ಇಲಾಖೆ, ಕೋರ್ಟ್ ಅಂತ ಹೇಳಿಕೊಂಡು ಬರುವ ಬದಲು ಗ್ರಾಮದ ಹಿರಿಯರನ್ನು, ಮುಖಂಡರನ್ನು ಕರೆಸಿ ಅವರ ಮುಖಾಂತರ ಕುಳಿತು ಮಾತುಕತೆ ನಡೆಸಿ ಪರಿಹರಿಸಿಕೊಳ್ಳುವುದು ಒಳಿತು. ಇಂತಹ ಸಮಸ್ಯೆಗಳಲ್ಲಿ ಮುಖ್ಯವಾಗಿ ರಸ್ತೆ ಸಮಸ್ಯೆ ಬಹಳಷ್ಟು ಕಡೆಗಳಲ್ಲಿ ಜಾಗದ ಮಾಲಕರ ತಕರಾರುಗಳಿಂದ ರಸ್ತೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಇಲಾಖೆ, ಕೋರ್ಟ್ ಅಂತ ತಂದರೆ ಅದು ಕಾನೂನು ರೀತಿಯಲ್ಲಿ ಕೋರ್ಟ್‌ನಲ್ಲಿ ಸ್ಟೇ ಆಗುವ ಸಂಭವ ಇರುತ್ತದೆ. ಇದರಿಂದ ಸಮಸ್ಯೆ ಇತ್ಯರ್ಥವಾಗಲು ಬಹಳಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಗ್ರಾಮಸ್ಥರು ಪರಸ್ಪರ ಹೊಂದಾಣಿಕೆಯಿಂದ ಮಾತುಕತೆ ನಡೆಸಿಕೊಂಡರೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯರವರು ಕೆಯ್ಯೂರಿನಲ್ಲಿ ನಡೆದ ತಹಶೀಲ್ದಾರ್‌ರವರ ಗ್ರಾಮವಾಸ್ತವ್ಯದಲ್ಲಿ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಸಭೆಯು ತಹಶೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ಅ.15 ರಂದು ಕೆಯ್ಯೂರು ಕೆಪಿಎಸ್‌ನ ಪ್ರಾಥಮಿಕ ವಿಭಾಗದ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಹಶೀಲ್ದಾರ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಎಲ್ಲಾ ಅರ್ಜಿಗಳನ್ನು ಆಯಾ ಇಲಾಖೆಗೆ ವಿಲೇವಾರಿ ಮಾಡಲಾಗುತ್ತದೆ
ಗ್ರಾಮವಾಸ್ತವ್ಯದಲ್ಲಿ ಬಂದಂತಹ ಎಲ್ಲಾ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ವಿಲೇವಾರಿ ಮಾಡುವ ಮೂಲಕ ಅರ್ಜಿಗಳ ಇತ್ಯರ್ಥಕ್ಕೆ ಇಲಾಖೆಯಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದ ತಹಶೀಲ್ದಾರ್‌ರವರು, ತೀರಾ ವೈಯುಕ್ತಿಕ ಸಮಸ್ಯೆಗಳನ್ನು ಇಲಾಖಾ ಮಟ್ಟಕ್ಕೆ ತರುವ ಬದಲು ತಮ್ಮತಮ್ಮಲ್ಲೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು. ತಾಲೂಕಿನಲ್ಲಿ ಬಹಳಷ್ಟು ಕಡೆ ರಸ್ತೆ ಸಮಸ್ಯೆಗಳು ಬಗ್ಗೆ ದೂರುಗಳು ಬರುತ್ತಿದ್ದು ಇದರಲ್ಲಿ ಬಹುತೇಕ ದೂರುಗಳು ವೈಯುಕ್ತಿಕ ಸಮಸ್ಯೆಗಳದ್ದೇ ಆಗಿದೆ. ಗ್ರಾಮಸ್ಥರು ಒಳ್ಳೆಯ ಮನಸ್ಸಿನಿಂದ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿದೆ ಎಂದು ಹೇಳಿದರು.

ಇಲಾಖಾ ಮಾಹಿತಿ
ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಾಪಂ ಸಹಾಯಕ ನಿರ್ದೇಶಕರು ತಮ್ಮ ಇಲಾಖಾ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ರವರು ಕಂದಾಯ ಇಲಾಖೆಯ ಸವಲತ್ತುಗಳ ಬಾಂಡ್ ವಿತರಣೆ ಮಾಡಿದರು.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಸರಕಾರಿ ಶಾಲೆಗಳು ಎಲ್ಲಾ ರೀತಿಯಲ್ಲೂ ಬಲಿಷ್ಠಗೊಳ್ಳುತ್ತಿವೆ ಎಂದು ಪುತ್ತೂರು ಬಿಇಓ ಲೋಕೇಶ್ ಎಸ್.ಆರ್‌ ಹೇಳಿದರು. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿಕೊಡುವ ಬಗ್ಗೆ ಯಾವುದೇ ರೀತಿಯಲ್ಲೂ ಹಿಂದೇಟು ಹಾಕುವ ಅಗತ್ಯವಿಲ್ಲ. ಹಿಂದಿನಿಂದಲೂ ಸರಕಾರಿ ಶಾಲೆಗಳಲ್ಲಿ ಕಲಿತವರೇ ಸರಕಾರಿ ಅಧಿಕಾರಿಗಳಾಗಿದ್ದಾರೆ ಎಂದ ಅವರು ಮಕ್ಕಳ ಕೈಗೆ ಯಾವುದೇ ಕಾರಣಕ್ಕೂ ಮೊಬೈಲ್ ಮಾತ್ರ ಕೊಡಬೇಡಿ ಎಂದು ಕಿವಿಮಾತು ಹೇಳಿದರು.

ಅರಣ್ಯ ಪ್ರದೇಶದ ಭಾಗದಲ್ಲಿರುವ ಕೃಷಿಕರಿಗೆ ಕಾಡುಕೋಣಗಳ ಹಾವಳಿಯಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ ಎಂದು ಹೇಳಿದ ಅರಣ್ಯ ಇಲಾಖಾ ಅಧಿಕಾರಿಯವರು, ಕೃಷಿಗೆ ಕಾಡುಪ್ರಾಣಿಗಳಿಂದ ಆಗುವ ತೊಂದರೆಗಳನ್ನು ತಡೆಯಲು ಸೋಲಾರ್ ಬೇಲಿ ಅಳವಡಿಸಲು ಇಲಾಖೆಯಿಂದ ಸಹಾಯಧನ ಕೊಡಲಾಗುತ್ತಿದೆ ಅರ್ಜಿ ನೀಡುವಂತೆ ಕೇಳಿಕೊಂಡರು.

ಮಕ್ಕಳ ಬಗ್ಗೆ ಜಾಗೃತಿ ಇರಲಿ ಎಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಭಾರತಿಯವರು, ಗ್ರಾಮಕ್ಕೆ ಯಾರೇ ಹೊರಗಿನವರು ಬಂದಿದ್ದರೆ ಅವರ ಬಗ್ಗೆ ಪಂಚಾಯತ್‌ಗೆ ಮಾಹಿತಿ ಕೊಡುವುದು ಸೂಕ್ತ. 18 ವರ್ಷದಿಂದ ಕೆಳಗಿನ ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು. ಉದ್ಯೋಗ ಖಾತರಿ ಯೋಜನೆಯ ಬಗ್ಗೆ ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ಭಟ್‌ ಮಾಹಿತಿ ನೀಡಿದರು.

ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಯಿತು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ತಹಶೀಲ್ದಾರ್‌ರವರ ಜೊತೆ ಹಂಚಿಕೊಂಡರು. ಗ್ರೇಡ್ || ತಹಶೀಲ್ದಾರ್ ಲೋಕೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಉಪಾಧ್ಯಕ್ಷೆ ಗಿರಿಜಾ, ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಭೂದಾಖಲೆಗಳ ಸಹಾಯಕ ನಿರ್ದೇಶಕಿ ರಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ತಾಪಂ ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮತ್ತಿತರರು ಉಪಸ್ಥಿತರಿದ್ದರು. ಕೆಯ್ಯೂರು ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

33 ಅರ್ಜಿಗಳು
ಗ್ರಾಮ ವಾಸ್ತವ್ಯಕ್ಕೆ 33 ಅರ್ಜಿಗಳು ಬಂದಿದ್ದು ಇವುಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಪರಿಶೀಲನೆ ಮಾಡಲಾಯಿತು. ಅರ್ಜಿ ನೀಡಿದವರನ್ನು ಕರೆಸಿ ಅರ್ಜಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಯಿತು ಮತ್ತು ಸಂಬಂಧಪಟ್ಟ ಇಲಾಖೆಗೆ ಈ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

ತಹಶೀಲ್ದಾರ್‌ಗೆ ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಫಲಕ
ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ, ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಚಾರಕ್ಕೆ ಬಹಿಷ್ಕಾರ, ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ, ಲಂಚ,ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ ನಮ್ಮದಾಗಲಿ ಎಂದ ಘೋಷಣೆ ಇರುವ ಫಲಕವನ್ನು ತಹಶೀಲ್ದಾರ್ ನಿಸರ್ಗಪ್ರಿಯರವರಿಗೆ ಸುದ್ದಿಯ ರವೀಂದ್ರ ಕಬಕರವರು ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಚಪ್ಪಾಳೆಯ ಮೂಲಕ ಬೆಂಬಲ ಸೂಚಿಸಿದರು. ವಿಠಲ್ ಎಂಬವರು ಮಾತನಾಡಿ, ಮೊದಲು ಈ ಕೆಲಸ ಆಗಬೇಕಾಗಿದೆ. ಲಂಚ,ಭ್ರಷ್ಟಾಚಾರದಿಂದ ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here