ಗ್ರಾ.ಪಂ.ಗಳಲ್ಲೂ 40ಶೇ.ಕಮಿಷನ್ ಹೊಡೆಯುವ ಹುನ್ನಾರ- ಸುಭಾಶ್ಚಂದ್ರ ಶೆಟ್ಟಿ
ತಿದ್ದುಪಡಿ ರದ್ದು ಮಾಡಲಾಗದಿದ್ದರೆ ಸೀಟ್ ಬಿಟ್ಟು ಹೋಗಿ-ಶಕುಂತಳಾ ಶೆಟ್ಟಿ
ಬಿಜೆಪಿ ಸರಕಾರದಿಂದ ಸರ್ವಾಧಿಕಾರಿ ಧೋರಣೆ-ಎಂ.ಬಿ.ವಿಶ್ವನಾಥ ರೈ
ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಬಿಜೆಪಿ- ಡಾ.ರಾಜಾರಾಮ ಕೆ.ಬಿ.
ಗಾಂಧೀಜಿಯವರ ಕಲ್ಪನೆಯ ಸರಕಾರ ಬಿಜೆಪಿಯಿಂದ ನಿರ್ನಾಮ-ಮುಹಮ್ಮದ್ ಆಲಿ
ಬಿಜೆಪಿ ಸರಕಾರದಿಂದ 40 ಪರ್ಸೆಂಟ್ ವಸೂಲಾತಿ ಕಾರ್ಯಕ್ರಮ-ಎಮ್.ಎಸ್. ಮೊಹಮ್ಮದ್
ಡೋಂಗಿ ಹಿಂದುತ್ವದಿಂದ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ-ದಿವ್ಯಪ್ರಭಾ ಗೌಡ ಚಿಲ್ತಡ್ಕ
ಭ್ರಷ್ಟಾಚಾರ ಮಾಡುವುದಕ್ಕಾಗಿ ಈ ವ್ಯವಸ್ಥೆ – ಅಮಳ ರಾಮಚಂದ್ರ
ಪುತ್ತೂರು:ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಆಶ್ರಯದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಚೇರಿ ಎದುರು ಅ.19 ರಂದು ಪ್ರತಿಭಟನೆ ನಡೆಯಿತು.
ಬಿಜೆಪಿ ಸರಕಾರದಿಂದ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ:
ರಾಜೀವ ಗಾಂಧಿ ಪಂಚಾಯತ್ರಾಜ್ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಅವರು ಮಾತನಾಡಿ, ಗ್ರಾ.ಪಂ. ವ್ಯವಸ್ಥೆಯಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯದಲ್ಲೂ ಕಾಮಗಾರಿ ಸ್ಥಳಕ್ಕೆ ಹೋಗಿ ಪ್ರತಿ ಕಾಮಗಾರಿಯ ತನಿಖೆ ಮಾಡಿ, ವಾರ್ಷಿಕ ಆಡಿಟ್ ಸಹಿತ ಐದಾರು ಹಂತದ ಪರೀಕ್ಷೆಗೆ ಒಳಪಡಿಸಿ ಪಾರದರ್ಶಕ ಆಡಳಿತ ನೀಡುತ್ತಿರುವಾಗಲೂ ನಮ್ಮ ಮೇಲೆ ಇನ್ನೂ ಸಂಶಯ ಪಡುವ ಕೆಲಸ ಮಾಡಲಾಗಿದೆ.ನಾವು ಭ್ರಷ್ಟಾಚಾರಿಗಳಾದರೆ ನಿಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚಾಗುವಾಗ ಎಷ್ಟು ಪಾರದರ್ಶಕವಾಗಿ ಲೆಕ್ಕ ನೋಡುತ್ತಿದ್ದೀರಿ.ನಮ್ಮ ಗ್ರಾ.ಪಂ.ನ ಹಾಗೆ ನಿಮ್ಮಲ್ಲಿ ಸಾರ್ವಜನಿಕರ ಎದುರು ಲೆಕ್ಕ ಪರಿಶೋಧನೆ ನಡೆಯುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರಲ್ಲದೆ ನೀವು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದಲ್ಲ.ತಿಮಿಂಗಿಲಗಳ ಮೇಲೆಯೂ ಬ್ರಹ್ಮಾಸ್ತ್ರ ಪ್ರಯೋಗಿಸಿ.ಆಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಗುತ್ತದೆ ಎಂದರು.
ಗ್ರಾ.ಪಂ.ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವುದು ಸರಿಯಲ್ಲ:
ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಪಂಚಾಯತ್ ವ್ಯವಸ್ಥೆ ಇರುವಾಗ ಅಲ್ಲಿ ಪಂಚಾಯತ್ ಸದಸ್ಯರಿಗೆ ಎಲ್ಲಾ ರೀತಿಯ ಅಧಿಕಾರವಿತ್ತು.ಆದರೆ ಇದೀಗ ಎಲ್ಲಾ ಅಧಿಕಾರವನ್ನು ಪಿಡಿಒಗಳಿಗೆ ಕೊಟ್ಟು ಕಾಟಾಚಾರಕ್ಕೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಂಡನೆ ಮಾಡುವ ಕೆಲಸ ಆಗಲಿದೆ ಎಂದರು.ಈಗಾಗಲೇ ಜಿ.ಪಂ.ತಾ.ಪಂ ಚುನಾವಣೆಯನ್ನು ಹಲವು ಕಾರಣಗಳಿಂದ ಮುಂದೂಡಿದ ಬಿಜೆಪಿ ಸರಕಾರ ಅಲ್ಲಿರುವ ಅನುದಾನಕ್ಕೆ ಶಾಸಕರುಗಳ ಮೂಲಕ ನಿಯಮ ಬಾಹಿರವಾಗಿ ಕಾಮಗಾರಿ ಕ್ರಿಯಾಯೋಜನೆ ಮಾಡುತ್ತಿದೆ.ಒಟ್ಟಿನಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಬೆಂಗಳೂರಿನಿಂದ ಗ್ರಾಮಗಳಿಗೂ ತಲುಪಿಸುವ ವ್ಯವಸ್ಥೆ ಮಾಡಿ, ಮುಂದೆ ಗ್ರಾ.ಪಂ.ನಲ್ಲೂ 40 ಪರ್ಸೆಂಟ್ ಕಮಿಷನ್ ಹೊಡೆಯುವ ಹುನ್ನಾರ ನಡೆಯುತ್ತಿದೆ.ಇದಕ್ಕೆ ಉದಾಹರಣೆಯಾಗಿ ಈಗಾಗಲೇ ಸೋಲಾರ್ ಘಟಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.ಇದು ಹಣ ದೋಚುವ ಕೆಲಸ ಎಂದು ಆರೋಪಿಸಿದರು.
ಪಂಚಾಯತ್ ಅಧಿಕಾರ ತಿದ್ದುಪಡಿ ರದ್ದು ಮಾಡದಿದ್ದರೆ ಸೀಟ್ ಬಿಟ್ಟು ಹೋಗಿ:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ ನಾನು ಶಾಸಕಿಯಾಗಿದ್ದಾಗ ಕೊಟ್ಟ ಮನೆಯ ಬಿಲ್ಲುಗಳೇ ಇವತ್ತಿನ ತನಕ ಮಂಜೂರಾಗಿಲ್ಲ, ರೈತರಿಗೆ ಕೊಡುವ ನಿವೇಶನಗಳು ಇಲ್ಲಿನ ತನಕ ಮಂಜೂರಾಗಿಲ್ಲ.ಬಹುಶಃ ಈ ಪರ್ಸಂಟೇಜ್ ಇವತ್ತು ೪೦ರಿಂದ 60ಕ್ಕೆ ಏರಿದೆ ಕಾಣಬೇಕು.ಯಾಕೆಂದರೆ ಬಿಜೆಪಿ ಸರಕಾರ ಬಂದ ಬಳಿಕ ಏನೋ ಹೊಸತು ಬರುತ್ತದೆ ಎಂದು ಎಲ್ಲರೂ ಎನಿಸಿದ್ದರು.ಆದರೆ ಇವರು ಕಾನೂನುಗಳನ್ನೇ ತಿನ್ನುವ ಕೆಲಸ ಮಾಡುತ್ತಿದ್ದಾರೆ.ಇವತ್ತು ಪಂಚಾಯತ್ ಅನ್ನೇ ವಿಸರ್ಜನೆ ಮಾಡಿ ಎಲ್ಲಿ ಜಾಸ್ತಿ ತಿನ್ನಲು ಆಗುತ್ತದೆಯೋ ಆ ಪಂಚಾಯತ್ ಉಳಿಸಿಕೊಳ್ಳುವ ಕೆಲಸ ಮಾಡಲಿದ್ದಾರೆ ಎಂದು ಆರೋಪಿಸಿದರು.ನಮಗೆ ಹಿಂದೆ ರಮೇಶ್ ಕುಮಾರ್ ಯಾವ ವರದಿಯನ್ನು ಮಂಡಿಸಿದ್ದರೋ ಅದೇ ರೀತಿಯ ಕಾನೂನು ಬರಬೇಕೆಂದು ಸಾರ್ವಜನಿಕವಾಗಿ ನಾವು ಒತ್ತಾಯ ಮಾಡುತ್ತೇವೆ.ಪಂಚಾಯತ್ಗೆ ಹೆಚ್ಚಿನ ಅವಕಾಶಗಳನ್ನು ಕೊಟ್ಟು ಗ್ರಾಮಗಳ ಮೂಲೆ ಮೂಲೆ ಅಭಿವೃದ್ಧಿಯಾಗುವ ರೀತಿಯಲ್ಲಿ ಕೆಲಸ ಆಗಬೇಕು.ಇವತ್ತು ಪಂಚಾಯತ್ನ ಅಧ್ಯಕ್ಷರ ಸಹಿ ಅಧಿಕಾರ ಪಿಡಿಒಗಳಿಗೆ ಹೋಗಲಿದೆ.ಮುಂದೆ ಪಿಡಿಒಗಳು ಕೂಡಾ ಕಾನೂನಿಗೆ ಸಿಕ್ಕಿ ಹಾಕಿಕೊಳ್ಳಲಿದ್ದಾರೆ.ಒಟ್ಟಿನಲ್ಲಿ ಪಂಚಾಯತ್ರಾಜ್ ಆಡಳಿತ ಮಾಡಲು ಆಗದಿದ್ದರೆ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ಕೊಡಲಿ.ಬೊಮ್ಮಾಯಿಯವರ ಮೇಲೆ ತುಂಬಾ ಗೌರವ ಇದೆ.ಆದರೆ ಅವರು ಇವತ್ತು ರಿಮೋಟ್ನಲ್ಲಿ ಇದ್ದಾರೋ ಅಥವಾ ಅಧಿಕಾರದಲ್ಲಿ ಕೂತ ಬಳಿಕ ಏನು ಮಾಡಬೇಕೆಂದು ಗೊತ್ತಿಲ್ಲದ ಸ್ಥಿತಿಯಲ್ಲಿದ್ದಾರೋ ಗೊತ್ತಾಗುತ್ತಿಲ್ಲ.ಹಾಗಾಗಿ ಸರಕಾರ ತಿದ್ದುಪಡಿ ಬಯಸಿದ್ದನ್ನು ರದ್ದು ಮಾಡಿದ್ದರೆ ಹಿಂದಿನದನ್ನೇ ಜಾರಿಗೆ ತನ್ನಿ ಇಲ್ಲದಿದ್ದರೆ ನೀವು ನನಗಾಗುವುದಿಲ್ಲ,ನೀವೇ ನೋಡಿಕೊಳ್ಳಿ ಎಂದು ಸೀಟನ್ನು ಬಿಟ್ಟು ಹೊರಡಿ ಎಂದು ಅವರು ಆಗ್ರಹಿಸಿದರು.
ಬಿಜೆಪಿ ಸರಕಾರದಿಂದ ಸರ್ವಾಧಿಕಾರಿ ಧೋರಣೆ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಗ್ರಾ.ಪಂ ಅಧ್ಯಕ್ಷರೆಂದರೆ ಆ ಗ್ರಾಮದ ಮುಖ್ಯಮಂತ್ರಿ.ಅವರ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತಿದ್ದಾರೆ.ಅದೇ ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಅಧಿಕಾರವನ್ನು ಮುಖ್ಯ ಕಾರ್ಯದರ್ಶಿಗೆ ಯಾಕೆ ಕೊಡಬಾರದು ಎಂದು ಪ್ರಶ್ನಿಸಿದರಲ್ಲದೆ,ಮುಖ್ಯಮಂತ್ರಿಗಳಿಗೆ ಅಧಿಕಾರ ಬೇಕು.ಆದರೆ ಸಾಮಾನ್ಯ ಜನಪ್ರತಿನಿಧಿಗೆ ಅಧಿಕಾರ ಬೇಡ.ಇದು ಯಾವ ನ್ಯಾಯ ಎಂದರು.ತಾ.ಪಂ., ಜಿ.ಪಂ ಚುನಾವಣೆ ಅವಧಿ ಮುಗಿದರೂ ಚುನಾವಣೆ ನಡೆಸದ ಸರಕಾರ ಸರ್ವಾಧಿಕಾರಿ ಧೋರಣೆಯೊಂದಿಗೆ ಶಾಸಕರ ಮೂಲಕ 40 ಪರ್ಸೆಂಟೇಜ್ ಕಮಿಷನ್ ಹೊಡೆಯುವ ತಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನ ಪಿಡಿಒಗಳು ಶಾಸಕರುಗಳ ಗುಲಾಮರಾಗುತ್ತಾರೆ.ಅವರು ಗುಲಾಮರಾಗದಿದ್ದರೆ ವರ್ಗಾವಣೆಯಾಗುತ್ತಾರೆ ಎಂದರು.
ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಬಿಜೆಪಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ.ಅವರು ಮಾತನಾಡಿ ಬಿಜೆಪಿ ಸರಕಾರ ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ.ಇವತ್ತು ಪಂಚಾಯತ್ ಅಧ್ಯಕ್ಷರ ಮೇಲೆ ಗದಾಪ್ರಹಾರ ಆಗಿದೆ.ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ಪಂಚಾಯತ್ ಅಧ್ಯಕ್ಷರ ವ್ಯವಸ್ಥೆಗೆ ಎಸಿ ರೂಮ್ನಲ್ಲಿ ಕುಳಿತುಕೊಂಡು ಕೆಲಸ ಮಾಡುವ ಅಧಿಕಾರಿಗಳು ಅಡ್ಡಕಾಲು ಹಾಕಲಿದ್ದಾರೆ.ಜನಸಾಮಾನ್ಯರ ಹಕ್ಕನ್ನು ಕಸಿದು ಗುಲಾಮರನ್ನಾಗಿ ಮಾಡುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ.ಹಿಂದೆ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಉತ್ತಮ ಯೋಜನೆಗಳನ್ನೆಲ್ಲ ಮಣ್ಣು ಪಾಲು ಮಾಡುವ ಕೆಲಸ ಬಿಜೆಪಿಯವರದ್ದಾಗಿದೆ ಎಂದರು.
ಗಾಂಧೀಜಿಯವರ ಕಲ್ಪನೆಯ ಸರಕಾರ ಬಿಜೆಪಿಯಿಂದ ನಿರ್ನಾಮ:
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ ಗಾಂಧೀಜಿಯವರ ಕಲ್ಪನೆಯ ಸರಕಾರವನ್ನು ನಿರ್ನಾಮ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಯಾಕೆಂದರೆ ಇದರ ಹಿಂದೆ 40 ಪರ್ಸಂಟೇಜ್ ಕಮಿಷನ್ ವ್ಯವಸ್ಥೆಯಿದೆ.ಇವತ್ತು ಪಂಚಾಯತ್ ಉಸಿರಾಡುವ ವ್ಯವಸ್ಥೆ ಇದ್ದರೆ ಅದು ಕಾಂಗ್ರೆಸ್ ಕೊಟ್ಟ ನರೇಗಾ ಕಾರ್ಯಕ್ರಮದಿಂದ.ಆದರೆ ಬಿಜೆಪಿ ಸರಕಾರ ಪಂಚಾಯತ್ ಅಧಿಕಾರವನ್ನೇ ಮೊಟಕುಗೊಳಿಸುವ ಕೆಲಸ ಮಾಡುತ್ತಿದೆ ಎಂದರು.ಗ್ರಾಮ ಪಂಚಾಯಿತಿಗಳ ಒಪ್ಪಿಗೆ ಇಲ್ಲದೇ ರಾಜ್ಯದ ಎಲ್ಲ ಪಂಚಾಯಿತಿಗಳಿಗೆ ಸೋಲಾರ್ ಅಳವಡಿಸುವ ಟೆಂಡರ್ ಸಚಿವ ಈಶ್ವರಪ್ಪನವರ ಪುತ್ರನಿಗೆ ದೊರಕಿದೆ ಎಂಬ ಆರೋಪವಿದೆ.ಈ ಬಗ್ಗೆ ಸೂಕ್ತ ತನಿಖೆ ನಡೆದರೆ ಈಶ್ವರಪ್ಪ ಜೈಲಿಗೆ ಹೋಗಬೇಕಾಗುತ್ತದೆ ಎಂದು ಆಲಿ ಹೇಳಿದರು.
ಬಿಜೆಪಿ ಸರಕಾರದಿಂದ 40 ಪರ್ಸೆಂಟ್ ವಸೂಲಾತಿ ಕಾರ್ಯಕ್ರಮ:
ಜಿ.ಪಂ.ಮಾಜಿ ಉಪಾಧ್ಯಕ್ಷ ಎಮ್.ಎಸ್ ಮೊಹಮ್ಮದ್ ಅವರು ಮಾತನಾಡಿ, ಬಿಜೆಪಿ ಸರಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಲ್ಲ.ಆದರೆ ೪೦ ಪರ್ಸೆಂಟ್ ವಸೂಲಾತಿ ಕಾರ್ಯಕ್ರಮ ಮಾತ್ರ ಯಶಸ್ವಿಯಾಗಿ ಮಾಡುತ್ತಿದ್ದಾರೆ.ಇವತ್ತು ಸುಲಿಗೆ ಮಾಡಿ ಮಾಡಿ ಗ್ರಾ.ಪಂ.ಅನ್ನು ಕೂಡಾ ಬಿಡಲಿಲ್ಲ.ಪಂಚಾಯತ್ ಸದಸ್ಯರಾಗಿ ಮುಂದೆ ಬಂದ ಇಲ್ಲಿನ ಶಾಸಕರು ಈ ಕುರಿತು ಮಾತನಾಡಬೇಕು.ಆದರೆ ಅವರು ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಡೋಂಗಿ ಹಿಂದುತ್ವದಿಂದ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ:
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಮಾತನಾಡಿ, ದೇಶದ ಸ್ಥಿತಿಯನ್ನು ಈ ಮಟ್ಟಕ್ಕೆ ತಂದ ಬಿಜೆಪಿ ಸರಕಾರ ಡೋಂಗಿ ಹಿಂದುತ್ವವನ್ನು ಹಿಡಿದು ಆಡಳಿತಕ್ಕೆ ಬಂದಿದೆ.ಕಾಂಗ್ರೆಸ್ ಸರಕಾರ ನೈಜ ಹಿಂದುತ್ವದಿಂದ ಆಡಳಿತಕ್ಕೆ ಬಂದವರು.ಮುಂದಿನ ದಿನ ಪ್ರತಿ ಗ್ರಾ.ಪಂ.ನಲ್ಲೂ ಪ್ರತಿಭಟನೆ ನಡೆಯಬೇಕು.ಸ್ವೇಚ್ಛಾಚಾರದಿಂದ ಆಡಳಿತ ಮಾಡುತ್ತಾ ಬಂದಿರುವ ಬಿಜೆಪಿ ಸರಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗಿದೆ ಎಂದರು.
ಭ್ರಷ್ಟಾಚಾರ ಮಾಡುವುದಕ್ಕಾಗಿ ಈ ವ್ಯವಸ್ಥೆ:
ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಮಾತನಾಡಿ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮೊದಲು ಹಳ್ಳಿಗಳಿಗೆ ಹಣ ಬರುತ್ತಿತ್ತು.ಈಗ ವಿಪರ್ಯಾಸ ಎಂದರೆ ಹಳ್ಳಿಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಣ ಹೀರುವ ಕೆಲಸ ಮಾಡುತ್ತಿದೆ.ಅದಕ್ಕಾಗಿಯೇ ಭ್ರಷ್ಟಾಚಾರ ಮಾಡಲು ಗ್ರಾ.ಪಂನಲ್ಲಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಪ್ರತಿಭಟನೆ ಬಳಿಕ ತಾ.ಪಂ.ಆಡಳಿತಾಧಿಕಾರಿ ಮತ್ತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ತಾ.ಪಂ ಆಡಳಿತಾಧಿಕಾರಿ ಸುಕನ್ಯ ಮತ್ತು ಗ್ರೇಡ್ ೨ ತಹಸೀಲ್ದಾರ್ ಲೋಕೇಶ್ ಮನವಿ ಸ್ವೀಕರಿಸಿದರು.ಪುತ್ತೂರು ವಿಧಾನಸಭಾ ಕ್ಷೇತ್ರದ ರಾಜೀವಗಾಂಧಿ ಪಂಚಾಯತ್ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ರೈ ಚಿಲ್ಮೆತ್ತಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರಾಜೀವಗಾಂಧಿ ಪಂಚಾಯತ್ರಾಜ್ ಸಂಘಟನೆಯ ಪುತ್ತೂರು ಬ್ಲಾಕ್ ಅಧ್ಯಕ್ಷ ಸನತ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಕೆಪಿಸಿಸಿ ಮಹಿಳಾ ಸಂಯೋಜಕಿ ಮಲ್ಲಿಕಾ ಪಕಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸು, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಕೆಪಿಎಂಸಿಯ ಸಾಯಿರಾ ಝುಬೇರ್, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ನಾಯ್ಕ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಆರ್ಯಾಪು ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ನಝೀರ್ ಮಠ, ಅಬ್ದುಲ್ ರಹಿಮಾನ್ ಯೂನಿಕ್, ಕೆದಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಕೆ.ಜಯರಾಮ ರೈ,ಶಶಿಕಿರಣ್ ರೈ, ರವೀಂದ್ರನಾಥ ರೈ, ಜಯಪ್ರಕಾಶ್ ಬದಿನಾರು, ಮೌರೀಸ್ ಗೊನ್ಸಾಲ್ವಿಸ್, ರೋಶನ್ ರೈ ಬನ್ನೂರು ಸಹಿತ ಹಲವಾರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬಂಧನ ಆದರೆ ಸಂಜೆ ಬಿಡುಗಡೆ ನಾಳೆ ಪತ್ರಿಕೆಯಲ್ಲಿ ಬರುತ್ತದೆ
ಆರಂಭದಲ್ಲಿ, ತಾಲೂಕು ಆಡಳಿತ ಸೌಧದ ಎದುರಿನ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸುತ್ತಿದ್ದ ವೇಳೆ ಕೆಪಿಸಿಸಿ ಸಂಯೋಜಕ ಎಮ್.ಎಸ್. ಮೊಹಮ್ಮದ್ ಅವರು ಇಲ್ಲಿ ಪ್ರತಿಭಟನೆ ಮಾಡಿದರೆ ಪ್ರಯೋಜನ ಇಲ್ಲ.ಪ್ರತಿಭಟನೆ ಮಾಡಬೇಕಾಗಿರುವುದು ತಾಲೂಕು ಪಂಚಾಯತ್ ಕಚೇರಿ ಎದುರು,ಅಲ್ಲಿ ಪ್ರತಿಭಟನೆ ಮಾಡಲು ಅನುಮತಿ ಇಲ್ಲದಿದ್ದರೆ ಏನೂ ಸಮಸ್ಯೆ ಇಲ್ಲ.ಒಂದು ವೇಳೆ ಪೊಲೀಸರು ಬಂಧಿಸಿದರೆ ಬಂಧಿಸಲಿ ಸಂಜೆ ಬಿಡುಗಡೆ ಮಾಡುತ್ತಾರೆ.ನಾಳೆ ಅದು ಪತ್ರಿಕೆಯಲ್ಲಿ ಬರುತ್ತದೆ ಎಂದರು.ಬಳಿಕ ಪ್ರತಿಭಟನೆ ಸ್ಥಳವನ್ನು ತಾ.ಪಂ.ಕಚೇರಿ ಎದುರು ಸ್ಥಳಾಂತರಿಸಲಾಯಿತು.