ಹಿರೆಬಂಡಾಡಿ ಗ್ರಾಮಸಭೆ: ಗ್ರಾಮಸಭೆಯಲ್ಲಿ ಸಂಯಮಮೀರಿ ವರ್ತಿಸಿದ ಅರಣ್ಯಾಧಿಕಾರಿ- ಕರ್ತವ್ಯದಿಂದ ವಜಾಕ್ಕೆ ನಿರ್ಣಯ ಕೈಗೊಳ್ಳಲು ಗ್ರಾಮಸ್ಥರ ಆಗ್ರಹ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅರಣ್ಯಾಧಿಕಾರಿಯೋರ್ವರು ವ್ಯಂಗ್ಯಮಿಶ್ರಿತ ಉಡಾಫೆಯ ಉತ್ತರ ನೀಡಿ ಇದಕ್ಕೆ ಗ್ರಾಮಸ್ಥರ ತೀವ್ರವಾದ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸಭೆಯಿಂದ ಅರ್ಧದಲ್ಲೆ ಹೊರನಡೆದ ಘಟನೆ ಇಂದು ನಡೆಯುತ್ತಿರುವ ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ನಡೆದಿದೆ. ಇಂತಹ ಅಧಿಕಾರಿಯನ್ನು ಸರಕಾರಿ ಕರ್ತವ್ಯದಿಂದ ವಜಾಗೊಳಿಸಬೇಕೇಂಬ ನಿರ್ಣಯ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಈ ಸಂದರ್ಭ ಆಗ್ರಹಿಸಿದರು.

ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಲು ಬಂದ ಉಪವಲಯ ಅರಣ್ಯಾಧಿಕಾರಿ ಸಂಜೀವರವರು ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರೊಬ್ಬರು ಮಂಗಗಳ ಹಾವಳಿಗೆ ಅರಣ್ಯ ಇಲಾಖೆ ಯಾವುದು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು . ಈ ಸಂದರ್ಭ ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ತೀರ ಉಡಾಫೆಯಿಂದಲೇ ಉತ್ತರಿಸಿದ ಸಂಜೀವರವರು ಮಂಗಗಳನ್ನು ಕಾಯುವುದು ನಮ್ಮ ಕೆಲಸ ಅಲ್ಲ. ಮಂಗಗಳು ಬರಲು ನೀವೇ ಕಾರಣ. ನೀವೆಷ್ಟು ಹಣ್ಣಿನ ಮರಗಳನ್ನು ಬೆಳೆಸಿದ್ದೀರಿ ಎಂದು ಗ್ರಾಮಸ್ಥರಿಗೆ ಮರುಪ್ರಶ್ನಿಸಿದರು. ಈ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆ ಎಷ್ಟು ಬೆಳೆಸಿದೆ ಎಂದು ಪ್ರಶ್ನಿಸಿದರು. ಆಗ ಸಂಜೀವರವರು ನಾವು ಕಾಡಿನಲ್ಲಿ ಅಲ್ಲಲ್ಲಿ ಹಣ್ಣಿನ ಬೀಜಗಳನ್ನು ಹಾಕುತ್ತಿದ್ದೇವೆ. ಇದು ಕೇವಲ ಅರಣ್ಯ ಇಲಾಖೆಯದ್ದೇ ಕೆಲಸ ಅಲ್ಲ. ಗಿಡಮರಗಳನ್ನು ನೀವು ಬೆಳೆಸಬೇಕು ಎಂದರು. ಆಗ ಇವರ ಇಂತಹ ಉತ್ತರಕ್ಕೆ ಆಕ್ರೋಶ ಗೊಂಡ ಗ್ರಾಮಸ್ಥರು ಇದು ಗ್ರಾಮ ಸಭೆ. ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ. ನೀವು ಈ ರೀತಿ ಉಡಾಫೆಯಿಂದ ವರ್ತಿಸಬೇಡಿ ನಾವು ಕೇಳಿದ್ದಕ್ಕೆ ಉತ್ತರ ಕೊಡಿ ಎಂದರು . ಆಗ ಸದಸ್ಯ ಶೌಕತ್ ಅಲಿಯವರು ಮಾತನಾಡಿ ಉದೈ?ಗ ಖಾತ್ರಿಯ ಮೂಲಕ ರಸ್ತೆ ಬದಿಗಳಲ್ಲಿ ಸಾವಿರಾರು ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಗ್ರಾಮಸ್ಥರೇ. ಇದು ಗ್ರಾಮಸ್ಥರ ಕೊಡುಗೆ ಇದರಲ್ಲಿ ಅರಣ್ಯ ಇಲಾಖೆಯ ಪಾತ್ರ ಇಲ್ಲ ಎಂದರು. ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿ ಉಡಾಫೆಯಿಂದ ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಸಭೆಯ ನೋಡಲ್ ಅಧಿಕಾರಿಯವರು ನೋಡಿ ಇದು ಗ್ರಾಮ ಸಭೆ ಸಂಯಮದಿಂದ ಮಾತನಾಡಿ ಎಂದು ಅಧಿಕಾರಿಗೆ ಹೇಳಿದರು. ಆದರೂ ಅಧಿಕಾರಿಯಿಂದ ಅಂತಹ ನಡೆ ಕಂಡುಬರಲಿಲ್ಲ. ಆಗ ಮತ್ತೆ ಗ್ರಾಮಸ್ಥರು ಪ್ರಶ್ನಿಸಿ ಶಾಖೆಪುರದಲ್ಲಿ ರಸ್ತೆ ಕೆಲಸ ಆಗುತ್ತಿರುವಾಗ ಜೆಸಿಬಿಯ ಮೇಲೆ ಕುಳಿತುಕೊಂಡು ಕೆಲಸಕ್ಕೆ ತಡೆಯೊಡ್ಡಿ ಗಾಡಿ ಸೀಝ್ ಮಾಡುತ್ತೇನೆ ಎಂದಿದ್ದೀರಿ. ಆಮೇಲೆ ಅವರಿಂದ ೧ ಸಾವಿರ ರೂ ಲಂಚ ಪಡೆದು ಇದಕ್ಕೆ ಶಾಸಕರ ನಿರ್ದೇಶನ ಇದೆ ಎಂದು ಹೇಳಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ತಿಸಿದ್ದೀರಿ ಎಂದು ಆರೋಪಿಸಿದರು. ಈ ಸಂದರ್ಭ ಕೇಂಡಾಮಂಡಲವಾದ ಅಧಿಕಾರಿ ಆರೋಪ ಮಾಡಿದವರ ವಿರುದ್ಧವೇ ಏರು ಧ್ವನಿಯಲ್ಲಿ ಮಾತಾನಾಡಿ ಹಣ ಕೊಟ್ಟವರನ್ನು ಕರೆದುಕೊಂಡು ಬನ್ನಿ ಎಂದರು . ಆಗ ನೀವು ಇಲ್ಲಿ ಇರಿ ನಾವು ಕರೆದುಕೊಂಡು ಬರುತ್ತೇವೆ ಎಂದು ಗ್ರಾಮಸ್ಥರು ಹೇಳಿದಾಗ ಗ್ರಾಮಸ್ಥರ ವಿರುದ್ಧವೇ ರೇಗಿದರಲ್ಲದೆ ನೋಡಲ್ ಅಧಿಕಾರಿ, ಸದಸ್ಯರ ಮಾತುಗಳನ್ನು ಕೇಳದೆ ಸಭೆಯಿಂದ ಹೊರನಡೆದರು. ಆ ಬಳಿಕ ನೋಡಲ್ ಅಧಿಕಾರಿ ಮಾತನಾಡಿ ಅರಣ್ಯಾಧಿಕಾರಿಯವರು ಸಂಯಮ ಮೀರಿ ವರ್ತನೆ ಮಾಡಿದ್ದಾರೆ. ಈ ಬಗ್ಗೆ ಅವರ ಮೇಲಧಿಕಾರಿಯವರಿಗೆ ವರದಿ ನೀಡಲಾಗುವುದು ಎಂದರು. ಅಷ್ಟಕ್ಕೂ ತೃಪ್ತರಾಗದ ಗ್ರಾಮಸ್ಥರು ಸಾರ್ವಜನಿಕರಲ್ಲಿ ಮಾತನಾಡುವಾಗ ಸಂಯಮ ಕಳೆದುಕೊಳ್ಳುವ ಇಂತಹ ಅಧಿಕಾರಿ ಇಲಾಖೆಯಲ್ಲಿ ಇರುವುದೇ ಬೇಡ ಅವರನ್ನು ಕರ್ತವ್ಯದಿಂದ ವಜಾಗೊಳಿಸಲು ಈ ಗ್ರಾಮ ಸಭೆಯಲ್ಲಿ ನಿರ್ಣಯ ಮಂಡಿಸಿ ಸರಕಾರಕ್ಕೆ ವರದಿ ನೀಡಲು ಆಗ್ರಹಿಸಿದರು.

LEAVE A REPLY

Please enter your comment!
Please enter your name here