ಸಂಧ್ಯಾ ಸುರಕ್ಷಾದ ಆದಾಯ ಮಿತಿಯನ್ನು 1.20 ಲಕ್ಷದ ಮಿತಿಗೆ ತರಲು ಸರಕಾರಕ್ಕೆ ಮನವಿ

0

ಕೊಳ್ತಿಗೆ ಗ್ರಾಮ ಸಭೆ

ಪುತ್ತೂರು: ಸರಕಾರದ ಸಂಧ್ಯಾ ಸುರಕ್ಷಾ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಆದಾಯ ಮಿತಿ 30 ಸಾವಿರ ಇದ್ದು ಆದರೆ ಇದರಿಂದ ಅನೇಕ ಮಂದಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂದ್ಯಾ ಸುರಕ್ಷಾದ ಆದಾಯ ಮಿತಿಯನ್ನು ಬಿಪಿಎಲ್ ಕಾರ್ಡ್‌ದಾರರಿಗೆ 1.20 ಲಕ್ಷದ ಮಿತಿಗೆ ತರಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಕೊಳ್ತಿಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೆರೆಮೂಲೆಯವರ ಅಧ್ಯಕ್ಷತೆಯಲ್ಲಿ ಅ.29 ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾರವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಸರಕಾರದಿಂದ ಸಿಗುವ ಸಂದ್ಯಾ ಸುರಕ್ಷಾ ಸೌಲಭ್ಯ ಪಡೆಯಲು ಸರಕಾರ ಫಲಾನುಭವಿಯ ಆದಾಯ ಮಿತಿಯನ್ನು 30 ಸಾವಿರ ನಿಗದಿಗೊಳಿಸಿದ್ದು ಈ ಆದಾಯ ಮಿತಿಯಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ವಿಧವಾ ವೇತನದ ಆದಾಯ ಮಿತಿಯನ್ನು 11 ಸಾವಿರಕ್ಕೆ ಮಾಡಿದ್ದು ಇದರಿಂದಲೂ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಆದ್ದರಿಂದ ಈ ಆದಾಯ ಮಿತಿಯನ್ನು ರದ್ದುಗೊಳಿಸಿ ಪ್ರಸ್ತುತ ಬಿಪಿಎಲ್ ಕಾರ್ಡ್‌ದಾರರಿಗೆ ಇರುವ ಆದಾಯ ಮಿತಿ 1.20 ಲಕ್ಷಕ್ಕೆ ಸೀಮಿತಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು ಅದರಂತೆ ನಿರ್ಣಯ ಮಾಡಲಾಯಿತು.

ಕಂದಾಯ ಇಲಾಖೆ ಜಾಗ ತೋರಿಸಿದರೂ ಅರಣ್ಯ ಇಲಾಖೆ ಬಿಡುತ್ತಿಲ್ಲ
ಗ್ರಾಮದಲ್ಲಿ ಕಂದಾಯ ಇಲಾಖೆಯು, ಇದು ಸರಕಾರಿ ಜಾಗ ಎಂದು ತೋರಿಸಿದರೂ ಅರಣ್ಯ ಇಲಾಖೆ ಇದಕ್ಕೆ ಅಡ್ಡಿ ಪಡಿಸುತ್ತಿದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಸರಕಾರಿ ಜಾಗ ಎಂದುಕೊಂಡು ಫಲಾನುಭವಿಗಳಿಗೆ ಮಂಜೂರುಗೊಂಡ ಜಾಗ ಕೂಡ ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ರದ್ದಾಗುತ್ತಿದೆ. ಸರಕಾರಿ ಎಂದು ಕಂದಾಯ ಇಲಾಖೆ ಹೇಳಿದರೂ ಅರಣ್ಯ ಇಲಾಖೆ ಇದಕ್ಕೆ ಅಡ್ಡಿ ಪಡಿಸುತ್ತಿದ್ದು ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಹೇಳುತ್ತಿರುವುದರಿಂದ ಗ್ರಾಮದಲ್ಲಿ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಗಡಿಗುರುತು ಮಾಡಿಕೊಡಬೇಕು ಎಂದು ಹಲವು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಕೂಡಲೇ ಗ್ರಾಮದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಸರಕಾರಿ ಜಾಗಕ್ಕೆ ಗಡಿಗುರುತು ಮಾಡಿಕೊಡಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಜಂಟಿ ಸರ್ವೆಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಹಳೆಯ ವಿದ್ಯುತ್ ತಂತಿ ಬದಲಾಯಿಸಿ
ಗ್ರಾಮದ ಹಲವು ಕಡೆಗಳಲ್ಲಿ ವಿದ್ಯುತ್ ತಂತಿ ಹಳೆಯದಾಗಿದ್ದು ನೇತಾಡಿಕೊಂಡಿದೆ. ಈಗಾಗಲೇ  ಮೆಸ್ಕಾಂಗೆ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಪಂ ಅಧ್ಯಕ್ಷರು ತಂತಿ ಹಳೆಯದಾಗಿರುವುದರಿಂದ ಬಹಳಷ್ಟು ಕಡೆಗಳಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಿದರು.ಪೆರ್ಲಂಪಾಡಿ ರಸ್ತೆಯ ಬದಿಯಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿ ಎಚ್.ಟಿ ಲೈನ್ ತಂತಿ ಅಪಾಯಕಾರಿ ಸ್ಥಿತಿಯಲ್ಲಿದೆ ಹಾಗೂ ಕುಂಟಿಕಾನ ಶಾಲಾ ಬಳಿ, ಕಾಲನಿ, ದೇವಸ್ಥಾನದ ಬಳಿಯ ತಂತಿ ಬದಲಾವಣೆ ಮಾಡಬೇಕು ಹಾಗೂ ಕಟ್ಟಪುಣಿ ಎಂಬಲ್ಲಿ ಟಿಸಿ ಬದಲಾಯಿಸಬೇಕು ಎಂದು ಗ್ರಾಪಂ ಸದಸ್ಯ ಪವನ್ ಡಿ.ಜಿ ಹೇಳಿದರು.

ಅಂತ್ಯ ಸಂಸ್ಕಾರದ ಸಹಾಯಧನ ಬರುತ್ತಿಲ್ಲ
ಅಂತ್ಯ ಸಂಸ್ಕಾರಕ್ಕೆ ಸರಕಾರದಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಕೊಡುವ ಸಹಾಯಧನ ಬರುತ್ತಿಲ್ಲ, ಗ್ರಾಮದಿಂದ ಇಬ್ಬರು ಸಹಾಯಧನಕ್ಕೆ ಅರ್ಜಿ ಹಾಕಿ ಎರಡು ವರ್ಷ ಕಳೆದಿದೆ ಇನ್ನೂ ಕೂಡ ಬಂದಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಕಂದಾಯ ನಿರೀಕ್ಷಕರು ತಿಳಿಸಿದರು.

ಅಂಗನವಾಡಿ ಮತ್ತು ಶಾಲಾ ಮುಖ್ಯಗುರುಗಳ ನಡುವೆ ಹೊಂದಾಣಿಕೆ ಇರಲಿ
ಅಂಗನವಾಡಿಗಳನ್ನು ಬೇರೆಯೇ ನೋಡಲಾಗುತ್ತಿದೆ ಇದು ಸರಿಯಲ್ಲ, ಅಂಗನವಾಡಿ ಮತ್ತು ಶಾಲಾ ಮುಖ್ಯಗುರುಗಳ ನಡುವೆ ಹೊಂದಾಣಿಕೆ ಇರಬೇಕು, ಅಂಗನವಾಡಿ ಕೇಂದ್ರದ ಸಮಸ್ಯೆಗಳ ಬಗ್ಗೆಯೂ ಶಾಲಾ ಮುಖ್ಯಗುರುಗಳ ಗಮನ ಹರಿಸಬೇಕಾಗಿದೆ ಎಂದು ಗ್ರಾಪಂ ಸದಸ್ಯ ಪ್ರಮೋದ್ ಕೆ.ಎಸ್ ತಿಳಿಸಿದರು.

ಪಂಚಾಯತ್ ರಸ್ತೆಗಳಿಗೆ ಬೋರ್ಡ್ ಹಾಕಬೇಕು
ಗ್ರಾಮದ ಕಣಿಯಾರು ಕುದ್ಕುಳಿ ರಸ್ತೆಗಳಲ್ಲಿ ರಸ್ತೆಗೆ ಬೇಲಿ ಹಾಕುವ ಸ್ಥಿತಿ ತಲುಪಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. ಪಂಚಾಯತ್ ರಸ್ತೆಗಳ ಬಗ್ಗೆ ಹಾಗೂ ರಸ್ತೆಗಳ ಅದರ ವಿಸ್ತ್ರೀರ್ಣದ ಬಗ್ಗೆ ಮಾಹಿತಿ ಇರುವ ಬೋರ್ಡ್‌ಗಳನ್ನು ಹಾಕಬೇಕು, ಇದರಿಂದ ಪಂಚಾಯತ್ ರಸ್ತೆಗಳನ್ನು ಅತಿಕ್ರಮಿಸುವುದು ತಪ್ಪುತ್ತದೆ ಎಂದು ಪ್ರಮೋದ್ ಕೆ.ಎಸ್ ತಿಳಿಸಿದರು. ಅವಧಿ ಮೀರಿದ ಪಂಚಾಯತ್ ಕಟ್ಟಡಗಳನ್ನು ಏಲಂ ಮಾಡಿ ಇದರಿಂದ ಪಂಚಾಯತ್ ಆದಾಯ ಬರುತ್ತದೆ ಎಂದು ಸತೀಶ್ ಪಾಂಬಾರು ತಿಳಿಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರ್‌ರವರು ಸಭೆಗೆ ಅಗತ್ಯವಾಗಿ ಬರಬೇಕಿತ್ತು ಆದರೆ ಬರಲಿಲ್ಲ ಆದ್ದರಿಂದ ಅವರ ಮೇಲಾಧಿಕಾರಿಯವರಿಗೆ ಬರೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು ಅದರಂತೆ ನಿರ್ಣಯಿಸಲಾಯಿತು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನೀಲ್ ಎಚ್.ಟಿ ಸ್ವಾಗತಿಸಿದರು. ಸಿಬ್ಬಂದಿ ಶಶಿಕಲಾ ವರದಿ ವಾಚಿಸಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ, ಪವನ್ ಡಿ.ಜಿ, ಪ್ರೇಮ, ಲತಾ ಕುಮಾರಿ, ಶುಭಲತಾ ಜೆ ರೈ, ಸುಂದರ, ಪ್ರಮೋದ್ ಕೆ.ಎಸ್,ಯಶೋಧಾ, ಅಕ್ಕಮ್ಮ, ಕೆ.ಎಂ.ಬಾಲಕೃಷ್ಣ, ವೇದಾವತಿ ಕೆ, ಬಿ.ಚಂದ್ರಾವತಿ,ಯತೀಂದ್ರ ಕೊಚ್ಚಿ, ವಸಂತ ಕುಮಾರ್ ರೈ ದುಗ್ಗಳ ಉಪಸ್ಥಿತರಿದ್ದರು. ಗ್ರಾಪಂ ಲೆಕ್ಕಸಹಾಯಕ ಜಯಪ್ರಸಾದ್ ರೈ ವಂದಿಸಿದರು. ಸಿಬ್ಬಂದಿಗಳಾದ ನಾಗೇಶ್ ಬೀರ್ಣಕಜೆ , ಜಯ ಎಸ್, ಸುಚಿತ್ರಾ ಪಿ.ಜೆ ಸಹಕರಿಸಿದ್ದರು.

LEAVE A REPLY

Please enter your comment!
Please enter your name here