ಫಿಲೋಮಿನಾ ಪಿಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡದ ಕಂಪು ವಿಶ್ವದೆಲ್ಲೆಡೆ ಪಸರಿಸಿದೆ-ಪ್ರೊ|ಬಿ.ವಿ ಸೂರ್ಯನಾರಾಯಣ

ಪುತ್ತೂರು:ಭಾರತಾಂಬೆ, ಕನ್ನಡಾಂಬೆಯು ಹೆತ್ತ ತಾಯಿಯಾದರೆ ನಾವು ಮಾತನಾಡುವ ಮಾತೃಭಾಷೆಯು ಸಾಕು ತಾಯಿ ಇದ್ದಂತೆ. ಯಾವಾಗ ನಾವು ನಮ್ಮ ಅಪ್ಪ-ಅಮ್ಮನನ್ನು ಕಳೆದುಕೊಂಡ ಸಂದರ್ಭದಲ್ಲಿ ಅಪ್ಪ-ಅಮ್ಮನ ನಿಜವಾದ ಮಹತ್ವ ಅರಿವಾಗುವುದೋ ಹಾಗೆಯೇ ಕನ್ನಡ ಮಣ್ಣಿನಿಂದ ದೂರವಾದಾಗ ನಮಗೆ ಕನ್ನಡದ ಬಗ್ಗೆ ಮಹತ್ವವು ಅರಿವಾಗುವುದು ಮಾತ್ರವಲ್ಲದೆ ಕನ್ನಡದ ಕಂಪು ವಿಶ್ವದೆಲ್ಲೆಡೆ ಪಸರಿಸಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ಅಂಕಣಕಾರ, ನಿವೃತ್ತ ಪ್ರೊ|ಬಿ.ವಿ ಸೂರ್‍ಯನಾರಾಯಣರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘ ಹಾಗೂ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ನ.1 ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಅವರು ಹೂವುಗಳಿಂದ ಪೋಣಿಸಲಾದ ಬುಟ್ಟಿಯಲ್ಲಿ ಕನ್ನಡ ಧ್ವಜವನ್ನು ಸ್ಥಾಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕನ್ನಡದಲ್ಲಿನ ಕೊರತೆ ಎಂದರೆ ಅದು ಅಭಿಮಾನ ಶೂನ್ಯತೆಯಾಗಿದೆ. ಕನ್ನಡ ಭಾಷೆಯು ಪರಿಪಕ್ವವಾದ ಭಾಷೆಯೊಂದಿಗೆ ಅದೊಂದು ವೈಜ್ಞಾನಿಕ ಭಾಷೆಯೂ ಎಂದು ಹೇಳಲಾಗಿದೆ. ಹಿಂದಿ ಭಾಷೆಯ ಬಳಿಕ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಒಲಿದು ಬಂದಿರೋದು ಕನ್ನಡ ಭಾಷೆಯ ಹೆಗ್ಗಳಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿದ ದ.ರಾ ಬೇಂದ್ರೆ, ರಾಜರತ್ನಂ ಸಹಿತ ಅನೇಕರಿದ್ದು ಇವರ ಮಾತೃಭಾಷೆ ಕನ್ನಡ ಆಗಿರುವುದಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ಆಮೇರಿಕದಲ್ಲೂ ಕನ್ನಡದ ಬಾವುಟವನ್ನು ಹಾರಿಸಲು ನಾವು ಶಕ್ತರಾಗಿದ್ದೇವೆ ಎಂದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶಕ್ ರಾಯನ್ ಕ್ರಾಸ್ತಾರವರು ಮಾತನಾಡಿ, ಕನ್ನಡ ನಾಡು ವೈವಿಧ್ಯತೆಯನ್ನು ಹೊಂದಿರುವ ನಾಡಾಗಿದೆ. ದಕ್ಷಿಣ ಕನ್ನಡ ಅಲ್ಲದೆ ಹಲವಾರು ಜಿಲ್ಲೆಗಳಲ್ಲಿ ಭಾಷಾ ವೈವಿಧ್ಯತೆಯಲ್ಲಿನ ಸೊಬಗನ್ನು ನಾವು ಕಾಣಬಹುದಾಗಿದೆ. ಕರಾವಳಿ ಬೀಚ್, ಕೊಡಗು, ಶಿವಮೊಗ್ಗದಲ್ಲಿನ ಗಿರಿಧಾಮಗಳು, ಉತ್ತರ ಕರ್ನಾಟಕದಲ್ಲಿನ ಸಾಂಸ್ಕೃತಿಕ ವೈವಿಧ್ಯಮಯಗಳು ಹೀಗೆ ಕರ್ನಾಟಕದಲ್ಲಿನ ಸೊಬಗನ್ನು ವೈಭವೀಕರಿಸಬಹುದಾಗಿದೆ. ನಾವು ಮಾತನಾಡುವ ಕನ್ನಡ ಭಾಷೆಯಲ್ಲಿಯೇ ವೈವಿಧ್ಯತೆಯಿದೆ. ಬೇರೆ ಬೇರೆ ಭಾಷೆ ಇದ್ದರೂ ಕನ್ನಡ ಭಾಷೆಯು ನಮ್ಮನ್ನು ಒಗ್ಗೂಡಿಸುತ್ತದೆ ಎಂದರು.

ಕನ್ನಡ ಸಂಘದ ಸಂಚಾಲಕ ರಾಮ ನಾಯ್ಕ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಐಶ್ವರ್ಯ ಸ್ವಾಗತಿಸಿ, ಮಾಹಿ ಹೆಗ್ಡೆ ವಂದಿಸಿದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ವಿದ್ಯಾರ್ಥಿ ಅಶ್ವಿನ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿ ಸೃಜನಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ಸಂಸ್ಕೃತಿಯ ಮನೋರಂಜನಾ ಕಾರ್ಯಕ್ರಮ ನೆರವೇರಲ್ಪಟ್ಟಿತು.

ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಭಾಗ್ಯವಂತರು..
ತಾನು ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿರೋದರ ಬಗ್ಗೆ ಹೆಮ್ಮೆಯಿದೆ. ಇಲ್ಲಿನ ನೆಲ, ಜಲ, ಭಾಷೆಯ ಮೇಲಿನ ಪ್ರೀತಿ ನಮ್ಮ ಜೀವನದಲ್ಲಿ ಒಳ್ಳೆಯ ಬಾಂಧವ್ಯವನ್ನು ವೃದ್ಧಿಸುವಂತೆ ಮಾಡುತ್ತದೆ. ಕನ್ನಡದಲ್ಲಿ ಮೊದಲ ಡಿಕ್ಸೆನರಿ ಹೊರ ತಂದದ್ದು ಹೊರದೇಶದ ಕಿಟ್ಟೆಲ್ ಎಂಬವರು. ಕನ್ನಡದಲ್ಲಿ ಯಾವುದೇ ಸೈಲೆಂಟ್ ಪದಗಳಿಲ್ಲ. ಇಲ್ಲಿ ಹುಟ್ಟಿದವರು ನಾವು ನಿಜಕ್ಕೂ ಭಾಗ್ಯವಂತರು ಮತ್ತು ಅದೃಷ್ಟವಂತರು.
-ವಂ|ಸ್ಟ್ಯಾನಿ ಪಿಂಟೊ, ಕ್ಯಾಂಪಸ್ ನಿರ್ದೇಶಕರು, ಫಿಲೋಮಿನಾ ಕಾಲೇಜು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.