ನ.19ರಿಂದ 23ರವರೆಗೆ ಮೆಗಾ ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ
ಕಡಬ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕಡಬ ತಾಲೂಕಿನ ನೆಟ್ಟಣ ಕಿದು ಎಂಬಲ್ಲಿ ಐ.ಸಿ.ಎ.ಆರ್.-ಸಿ.ಪಿ.ಸಿ.ಆರ್.ಐ ಸಂಶೋಧನಾ ಕೇಂದಲ್ಲಿ ನ.19ರಿಂದ ನ.23ರವರೆಗೆ ಬೃಹತ್ ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಲಿದ್ದು ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತಿದೆ.
1972 ರಲ್ಲಿ ಪಶ್ಚಿಮ ಘಟ್ಟಗಳ ಅರಣ್ಯದ 120 ಹೆಕ್ಟೇರ್ ಏಕಾಂತ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಗಿಡಗಳ ಉತ್ಪಾದನೆಗಾಗಿ ಸಿ.ಪಿ.ಸಿ.ಆರ್.ಐನ್ನು ಪ್ರಾರಂಭಿಸಲಾಯಿತು. ಬಳಿಕ 1998ರಲ್ಲಿ, ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯ (ಐ.ಸಿ.ಜಿ-ಎಸ್.ಎ.ಎಮ್.ಇ) ವಲಯಗಳ ಅಂತರರಾಷ್ಟ್ರೀಯ ತೆಂಗಿನ ಜೀನ್ ಬ್ಯಾಂಕನ್ನು ಸ್ಥಾಪಿಸಲಾಯಿತು. ಪ್ರಸ್ತುತ ಕೇಂದ್ರವು ತೆಂಗಿನಕಾಯಿ ಮತ್ತು ಕೋಕೋ ಜರ್ಮ್ ಪ್ಲಾಸ್ಮ್ ಗಳನ್ನು ಸಂರಕ್ಷಿಸುತ್ತದೆ. ಪ್ರಸ್ತುತ ವಾರ್ಷಿಕವಾಗಿ ಸುಮಾರು 75,000 ತೆಂಗು, 4 ಲಕ್ಷ ಅಡಿಕೆ ಮತ್ತು 50,000 ಕೋಕೋ ನಾಟಿ ಸಾಮಗ್ರಿಗಳನ್ನು ಕೃಷಿಕರಿಗೆ ಪೂರೈಸಲಾಗುತ್ತಿದೆ.
2022ನೇ ವರ್ಷವು ಐ.ಸಿ.ಎ.ಆರ್-ಸಿ.ಪಿ.ಸಿ.ಆರ್.ಐ ಕಿದು ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ವರ್ಷವಾಗಿದೆ, ಮತ್ತು ಅನೇಕ ಸಂಸ್ಮರಣಾ ಕಾರ್ಯಕ್ರಮಗಳನ್ನು 10 ಜನವರಿ 2022 ರಿಂದ ಆಯೋಜಿಸಲಾಗುತ್ತಿದೆ. 19 ನವೆಂಬರ್ 2022 ರಂದು ನಡೆಸಲಾಗುವ ಮೆಗಾ ಕಿಸಾನ್ ಮೇಳವು ಪ್ರಮುಖ ಆಚರಣೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಹಾಗೂ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಸುಮಾರು 50,000 ರೈತರು ಭಾಗವಹಿಸುವ ನಿರೀಕ್ಷೆಯಿದೆ.
ಐದು ದಿನಗಳ ಕೃಷಿ ವಸ್ತು ಪ್ರದರ್ಶನ (19-23 ನವೆಂಬರ್ 2022) ಕೃಷಿ ಒಳಸುರಿ ಮತ್ತು ಸೇವೆಗಳು, ಮೌಲ್ಯವರ್ಧನೆ ಮತ್ತು ಹೈಟೆಕ್ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ 150ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಎಲ್ಲಾ ಐದು ದಿನಗಳಲ್ಲೂ ವಿಜ್ಞಾನಿಗಳು-ಕೃಷಿಕರ ಸಮ್ಮುಖ ವಿಚಾರಗೋಷ್ಠಿ, ತರಬೇತಿ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಲಾಗುವುದು. ಇದಲ್ಲದೆ, 19 ರಿಂದ 23 ನವೆಂಬರ್ 2022 ರವರೆಗೆ ಎಲ್ಲಾ ಸಂಜೆಗಳಲ್ಲಿ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಕೃಷಿ ವಸ್ತು ಪ್ರದರ್ಶನ
ಕೃಷಿ ವಸ್ತು ಪ್ರದರ್ಶನ ಮತ್ತು ವಿವಿಧ ವಿಭಾಗಗಳ 150 ಮಳಿಗೆಗಳು ಇರುತ್ತವೆ. ಈ ವೇದಿಕೆಯು ಬೆಳೆಗಾರರು ಮತ್ತು ತಮ್ಮ ವ್ಯಾಪಾರ ಮತ್ತು ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ವೈವಿಧ್ಯಗೊಳಿಸಲು ಬಯಸುವ ಕೃಷಿ ವಲಯದ ಎಲ್ಲಾ ಸಂಪನ್ಮೂಲ ಪರಿಚಯ ಪೂರೈಕೆದಾರರಿಗೆ ಆಗಿದೆ. ಈ ಸಂದರ್ಭದಲ್ಲಿ ಪ್ರದರ್ಶನವನ್ನು ಏರ್ಪಡಿಸಲು ಬಯಸುವವರು ಹೆಚ್ಚಿನ ವಿವರಗಳನ್ನು ಪಡೆಯಲು ವಿಜ್ಞಾನಿ ದಿವಾಕರ್ (ಮೊ: 7259791311, 9483832376) ಅವರನ್ನು ಸಂಪರ್ಕಿಸಬಹುದು.